
ಮಾಸ್ಕೋ (ಮಾ.23): ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಸಭೆ-ಸಮಾರಂಭಗಳು ನಡೆಯುವ ದೊಡ್ಡ ಕನ್ಸರ್ಟ್ ಹಾಲ್‌ಗೆ ಹಲವು ಬಂದೂಕುಧಾರಿಗಳು ಏಕಾಏಕಿ ನುಗ್ಗಿ ಅಂಧಾದುಂಧಿ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಸುಮಾರು 60 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 150 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಈ ಭೀಕರ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಇದು ಭಯೋತ್ಪಾದಕ ದಾಳಿ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಮಾದರಿಯಲ್ಲೇ ಈ ದಾಳಿ ನಡೆದಿದೆ.
ರಷ್ಯಾ ಅಧ್ಯಕ್ಷರಾಗಿ ಪುಟಿನ್ ಮರು ಆಯ್ಕೆಯಾದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇದು ಭಯೋತ್ಪಾದಕ ದಾಳಿ ಎಂದು ರಷ್ಯಾ ಸರ್ಕಾರ ತಿಳಿಸಿದೆ. ಎರಡು ದಶಕಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಇದು ಬಹುದೊಡ್ಡ ಅನಾಹುತ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೋಬಯಾನಿನ್ ಹೇಳಿದ್ದಾರೆ.
ದಿಲ್ಲಿ ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್ ಕಿಂಗ್‌ಪಿನ್: ಕೋರ್ಟ್‌ಗೆ ಇ.ಡಿ. ವರದಿ
ಮಾಸ್ಕೋದ ಪಶ್ಚಿಮ ಅಂಚಿನಲ್ಲಿರುವ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಈ ಘಟನೆ ನಡೆದಿರುವ ಬಗ್ಗೆ ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ದಾಳಿಕೋರರು ಮೊದಲು ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದು ಬಳಿಕ ಹಾಲ್ ನ ಒಳಗೆ ಪ್ರವೇಶಿಸಿ ಭಾರಿ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಸ್ಫೋಟಕಗಳನ್ನು ಎಸೆದಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
6,000 ಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸಬಹುದಾದ ಸಭಾಂಗಣದಲ್ಲಿ ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ ಪಿಕ್ನಿಕ್ ಸಂಗೀತ ಕಾರ್ಯಕ್ರಮಕ್ಕಾಗಿ ಜನಸಮೂಹ ನೆರೆದಿದ್ದಾಗ ಈ ದಾಳಿ ನಡೆದಿದೆ. ಕೆಲ ಜನರು ಬೆಂಕಿಗೆ ಮೃತಪಟ್ಟಿದ್ದಾರೆಂದು ವರದಿ ತಿಳಿಸಿದೆ.
ರಷ್ಯಾದ ಮಾಧ್ಯಮಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳು ಪೋಸ್ಟ್ ಮಾಡಿದ ಹಲವು ವೀಡಿಯೊಗಳಲ್ಲಿ ಉಗ್ರರು ಹಲವು ಸುತ್ತಗಳ ಗುಂಡು ಹಾರಿಸುತ್ತಿರುವುದು ಸ್ಪಷ್ಟವಾಗಿ ಗೋಷರಿಸುತ್ತಿದೆ. ಓರ್ವ ಆಟೋಮ್ಯಾಟಿಕ್ ಮೆಷಿನ್ ಗನ್ ಗಳೊಂದಿಗೆ ಇಬ್ಬರು ವ್ಯಕ್ತಿಗಳು ಮಾಲ್ ಗೆ ಬರುತ್ತಿರುವುದು ಸೆರೆಯಾಗಿದ್ದರೆ, ಮತ್ತೊಬ್ಬ ಸಭಾಂಗಣದ ಒಳಗಿದ್ದ ವ್ಯಕ್ತಿಯನ್ನು ಚಿತ್ರೀಕರಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಗುಂಡಿನ ನಡೆಸುವುದರ ಜೊತೆಗೆ ಬಂದೂಕುಧಾರಿಗಳು ಬಾಂಬ್ ಗಳನ್ನೂ ಸಭಾಂಗಣದೊಳಗೆ ಸ್ಫೋಟಿಸಿದ್ದರಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಸುಮಾರು 15ರಿಂದ 20 ನಿಮಿಷಗಳ ಕಾಲ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಡಿ.ಕೆ.ಶಿವಕುಮಾರ್ ಸಿಬಿಐ ತನಿಖೆ ವಾಪಸ್: ಏ.5ರಿಂದ ಹೈಕೋರ್ಟ್ ವಿಚಾರಣೆ
ಈ ತಿಂಗಳ ಆರಂಭದಲ್ಲಿ ಯುಎಸ್ ರಾಯಭಾರ ಕಚೇರಿ ಉಗ್ರರ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿತ್ತು. ರಷ್ಯಾ ರಾಜಧಾನಿಯಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಆದ್ದರಿಂದ ದಾಳಿಯ ದೃಷ್ಟಿಯಿಂದ ರಷ್ಯಾದ ರಾಜಧಾನಿಯಲ್ಲಿ ಜನನಿಬಿಡ ಸ್ಥಳಗಳಿಗೆ ಭೇಟಿ ನೀಡಬೇಡಿ ಎಂದು ಅಮೆರಿಕನ್ನರಿಗೆ ತಿಳಿಸಿತ್ತು ಇದನ್ನು ಹಲವಾರು ಇತರ ಪಾಶ್ಚಿಮಾತ್ಯ ರಾಯಭಾರ ಕಚೇರಿಗಳು ಕೂಡ ಪುನರಾವರ್ತಿಸಿ ತಮ್ಮ ದೇಶದ ಜನರಿಗೆ ತಿಳಿಸಿತ್ತು. ಇದರ ಬೆನ್ನಲ್ಲೇ ಭೀಕರ ಉಗ್ರರ ದಾಳಿ ನಡೆದಿದೆ.
ಪ್ರಧಾನಿ ಮೋದಿ ಖಂಡನೆ: ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾದ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ