ಕೊಲ್ಲಿ ಯುದ್ಧ ಇನ್ನಷ್ಟು ರೌದ್ರ!

Kannadaprabha News   | Kannada Prabha
Published : Mar 04, 2026, 05:01 AM IST
Iran Israel US War live

ಸಾರಾಂಶ

ಮಧ್ಯಪ್ರಾಚ್ಯವನ್ನು ಅಗ್ನಿಕುಂಡ ಮಾಡಿರುವ ಇರಾನ್‌, ಇಸ್ರೇಲ್‌, ಅಮೆರಿಕ ಯುದ್ಧ ನಾಲ್ಕನೇ ದಿನವೂ ತೀವ್ರ ಸ್ವರೂಪದಲ್ಲೇ ಮುಂದುವರೆದಿದ್ದು ಜಾಗತಿಕವಾಗಿ ಭಾರೀ ಆತಂಕ ಸೃಷ್ಟಿಸಿದೆ. ಅಮೆರಿಕ ರಾಯಭಾರ ಕಚೇರಿ, ಯುಎಇನ ತೈಲ ಘಟಕ, ರಾಡಾರ್‌, ಒಮಾನ್‌ನ ಬಂದರು, ಇಸ್ರೇಲಿನ ಆಯಕಟ್ಟಿನ ಪ್ರದೇಶಗಳ ಮೇಲೆ ದಾಳಿ

ದುಬೈ: ಮಧ್ಯಪ್ರಾಚ್ಯವನ್ನು ಅಗ್ನಿಕುಂಡ ಮಾಡಿರುವ ಇರಾನ್‌, ಇಸ್ರೇಲ್‌, ಅಮೆರಿಕ ಯುದ್ಧ ನಾಲ್ಕನೇ ದಿನವೂ ತೀವ್ರ ಸ್ವರೂಪದಲ್ಲೇ ಮುಂದುವರೆದಿದ್ದು ಜಾಗತಿಕವಾಗಿ ಭಾರೀ ಆತಂಕ ಸೃಷ್ಟಿಸಿದೆ. ತನ್ನ ಪರಮೋಚ್ಚ ನಾಯಕ ಖಮೇನಿ ಹತ್ಯೆಯ ಪ್ರತೀಕಾರಕ್ಕೆ ಮುಂದಾಗಿರುವ ಇರಾನ್‌, ಮಂಗಳವಾರ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ, ಯುಎಇನ ತೈಲ ಘಟಕ, ಖತಾರ್‌ಲ್ಲಿರುವ ಅಮೆರಿಕದ ಸೇನಾನೆಲೆ, ರಾಡಾರ್‌, ಒಮಾನ್‌ನ ಬಂದರು, ಇಸ್ರೇಲಿನ ಆಯಕಟ್ಟಿನ ಪ್ರದೇಶಗಳ ಮೇಲೆ ದಾಳಿ ನಡೆಸಿದೆ.

ಮತ್ತೊಂದೆಡೆ ಅಮೆರಿಕ, ಇಸ್ರೇಲ್‌ ಪಡೆಗಳು ರಾಜಧಾನಿ ಟೆಹ್ರಾನ್‌ನ ಹಲವು ಪ್ರದೇಶಗಳು, ಅಧ್ಯಕ್ಷೀಯ ಭವನ, ಸರ್ಕಾರಿ ಟೀವಿ ವಾಹಿನಿ ಸೇರಿ ದೇಶಾದ್ಯಂತ ಹಲವು ಪ್ರದೇಶಗಳ ಮೇಲೆ ಬಾಂಬ್‌, ಕ್ಷಿಪಣಿ ಮಳೆಗರೆದಿದೆ. ಜೊತೆಗೆ ರಾಜಧಾನಿ ಟೆಹ್ರಾನ್‌ನ ವಿಮಾನ ನಿಲ್ದಾಣ, ಅಲ್ಲಿ ನಿಂತಿದ್ದ ವಿಮಾನಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ಖಮೇನಿ ಸ್ಥಾನಕ್ಕೆ ನೂತನ ಆಯ್ಕೆಗಾಗಿ ಸಭೆ ನಡೆಯುತ್ತಿದ್ದ ಕಟ್ಟಡದ ಮೇಲೂ ದಾಳಿ ನಡೆಸಲಾಗಿದೆ.ಇದೆಲ್ಲದರ ನಡುವೆಯೇ ಹಿಜ್ಬುಲ್ಲಾಗಳ ದಾಳಿಯಿಂದ ತೀವ್ರ ಆಕ್ರೋಶಗೊಂಡಿದ್ದ ಇಸ್ರೇಲಿ ಸೇನಾ ಪಡೆಗಳು ಲೆಬನಾನ್‌ನ ಮೇಲೆ ಭೂದಾಳಿ ಆರಂಭಿಸಿವೆ.

ಈ ಬೆಳವಣಿಗೆಗಳು ಜಾಗತಿಕ ಕಚ್ಚಾತೈಲ ಮತ್ತು ಅನಿಲದ ದರ ಗಗನಕ್ಕೇರುವಂತೆ ಮಾಡಿದೆ. ಜೊತೆಗೆ ಯುದ್ಧಗ್ರಸ್ಥ ದೇಶಗಳಲ್ಲಿ ಸಾವಿನ ಸಂಖ್ಯೆ 900ರ ಗಡಿದಾಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಭೀತಿ ಸೃಷ್ಟಿಸಿದೆ.

ಭೀಕರ ದಾಳಿ:

ಸೋಮವಾರ ಕುವೈತ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ್ದ ಇರಾನ್‌, ಮಂಗಳವಾರ ಸೌದಿ ಅರೇಬಿಯಾದಲ್ಲಿರುವ ಅಮೆರಿಕ ಎಂಬೆಸಿ ಮೇಲೆ ಡ್ರೋನ್‌ ದಾಳಿ ನಡೆಸಿದೆ. ಜತೆಗೆ, ಖತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಮತ್ತು ಅಮೆರಿಕದ 5 ಸಾವಿರ ಕಿ.ಮೀ. ವ್ಯಾಪ್ತಿಯ ಅತಿದೊಡ್ಡ ರೇಡಾರ್‌ ನಾಶ ಮಾಡಿದ್ದಾಗಿ ಹೇಳಿಕೊಂಡಿದೆ. ಅಲ್ಲದೆ ಯುಎಇಯ ಫ್ಯುಜೈರಾ ತೈಲ ಘಟಕ ಮತ್ತು ಒಮಾನ್‌ನ ಬಂದರಿನ ಮೇಲೂ ದಾಳಿ ನಡೆಸಿದೆ.

ನಾಗರಿಕರ ಸ್ಥಳಾಂತರ:

ಈ ನಡುವೆ ಯುದ್ಧಗ್ರಸ್ಥ ಮಧ್ಯಪ್ರಾಚ್ಯದ 12 ಮತ್ತು ಇಸ್ರೇಲ್‌ನಲ್ಲಿರುವ ತನ್ನ ನಾಗರಿಕರಿಗೆ ದೇಶ ಬಿಡಿ ಎಂದು ಅಮೆರಿಕ ಸೂಚಿಸಿದೆ. ಅಲ್ಲದೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಇದೀಗ ತನ್ನ ರಾಯಭಾರ ಕಚೇರಿ ಸಿಬ್ಬಂದಿ, ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಚುರುಕುಗೊಳಿಸಿದೆ.

ಅಮೆರಿಕದ ಜತೆಗೆ ತನ್ನ ನೌಕಾನೆಲೆಗಳ ಮೇಲೂ ಇರಾನ್‌ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್‌ ಮತ್ತು ಬ್ರಿಟನ್‌ ಕೂಡ ತನ್ನ ನೌಕಾ ನೆಲೆಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಂಡಿದೆ. ಅಬುಧಾಬಿಯಲ್ಲಿರುವ ತನ್ನ ಅತಿದೊಡ್ಡ ನೌಕಾನೆಲೆ ರಕ್ಷಣೆಗಾಗಿ ಅತ್ಯಾಧುನಿಕ ರಫೇಲ್‌ ಯುದ್ಧವಿಮಾನಗಳನ್ನು ಫ್ರಾನ್ಸ್‌ ಅಬುಧಾಬಿಯ ದಾಫ್ರಾ ಏರ್‌ಬೇಸ್‌ನಲ್ಲಿ ನಿಯೋಜಿಸಿದೆ. ಇನ್ನು ಬ್ರಿಟನ್‌ ಕೂಡ ತನ್ನ ಯುದ್ಧನೌಕೆಯೊಂದನ್ನು ಸೈಪ್ರಸ್‌ಗೆ ಕಳುಹಿಸಿಕೊಟ್ಟಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dubai Attack: ಅಮೆರಿಕ ರಾಯಭಾರ ಕಚೇರಿ ಬಳಿ ಡ್ರೋನ್ ದಾಳಿ, ಬೆಂಕಿ! ಅಧಿಕಾರಿಗಳು ಹೇಳಿದ್ದೇನು?
ದುಬೈನ ಅತಿ ಸುರಕ್ಷಿತ ನಗರ ಖ್ಯಾತಿಗೆ ಯುದ್ಧದ ಧಕ್ಕೆ