ಜಾರ್ಜಿಯಾದಲ್ಲೂ ನ.1 ಕನ್ನಡ ಉತ್ಸವ: ಅಂತಾರಾ‍ಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾಷೆಗೆ ಮನ್ನಣೆ!

By Suvarna News  |  First Published Oct 29, 2021, 7:11 AM IST

* ಅಮೆರಿಕದಲ್ಲೂ ಕನ್ನಡ ಭಾಷೆ, ಸಂಸ್ಕೃತಿಗೆ ಮನ್ನಣೆ

* ಜಾರ್ಜಿಯಾದಲ್ಲೂ ನ.1 ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ


ಜಾರ್ಜಿಯಾ(ಅ.29): ಅಮೆರಿಕದ ಜಾರ್ಜಿಯಾ (Georgia) ರಾಜ್ಯದಲ್ಲಿ ನವೆಂಬರ್‌ 1ನೇ ದಿನಾಂಕವನ್ನು ಕನ್ನಡ ಭಾಷೆ (Kannada Language) ಮತ್ತು ರಾಜ್ಯೋತ್ಸವ ದಿನ (Kannada Language and Rajyothsava Day) ಎಂದು ಘೋಷಣೆ ಮಾಡಲಾಗಿದೆ. ಈ ಕುರಿತು ಅಧಿಕೃತವಾಗಿ ಜಾರ್ಜಿಯಾದ ಗವರ್ನರ್‌ ಬ್ರಿಯಾನ್‌. ಪಿ. ಕೆಂಪ್‌ (Brian P. Kemp) ಘೋಷಣಾ ಪತ್ರ ಬಿಡುಗಡೆ ಮಾಡಿದ್ದಾರೆ.

ಕನ್ನಡ ಭಾಷೆ ಅತ್ಯಂತ ಪ್ರಚೀನಾ ಭಾಷೆಗಳಲ್ಲಿ ಒಂದಾಗಿದ್ದು ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿದೆ. ಜಾರ್ಜಿಯಾದಲ್ಲಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಇಲ್ಲಿನ ಗ್ರೇಟರ್‌ ಅಟ್ಲಾಂಟದಲ್ಲಿರುವ 3 ಸ್ಥಳೀಯ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆ. ಇದರೊಂದಿಗೆ ನೃಪತುಂಗ ಕನ್ನಡ ಕೂಟದ ಮೂಲಕ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಜಾರ್ಜಿಯಾದ ಶಿಕ್ಷಣ ಇಲಾಖೆಯೂ ಸಹಾ ಕನ್ನಡ ಭಾಷೆಯನ್ನು ಶಿಕ್ಷಣದಲ್ಲಿ ಒಂದು ಭಾಷೆಯನ್ನಾಗಿ ಅಳವಡಿಸಿಕೊಂಡಿದೆ.

Latest Videos

undefined

ನ.1ನ್ನು ಕರ್ನಾಟಕ ಸೇರಿದಂತೆ ಕನ್ನಡ ಮಾತನಾಡುವ ಜನರಿರುವ ಎಲ್ಲೆಡೆ ರಾಜ್ಯೋತ್ಸವ ದಿನ ಎಂದು ಆಚರಿಸುತ್ತಾರೆ. ಜಾರ್ಜಿಯಾದಲ್ಲಿರುವ ಕನ್ನಡಿಗರು ಕರ್ನಾಟಕದ ಸಂಸ್ಕೃತಿಯ ಆಚರಣೆಯೊಂದಿಗೆ ಜಾರ್ಜಿಯಾದ ಸಂಸ್ಕೃತಿ ವೈವಿಧ್ಯತೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅಲ್ಲದೇ ವೈದ್ಯಕೀಯ, ಇಂಜಿನಿಯರಿಂಗ್‌, ಸಂಶೊಧನೆ ಮುಂತಾದ ಕ್ಷೇತ್ರಗಳಲ್ಲಿ ಕೊಡುಗೆ ನೀಡುವ ಮೂಲಕ ಆರ್ಥಿಕತೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದ್ದಾರೆ. ಹಾಗಾಗಿ ನ.1ನ್ನು ಜಾರ್ಜಿಯಾದಲ್ಲಿ ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ ಎಂದು ಘೋಷಣೆ ಮಾಡುತ್ತೇನೆ ಎಂದು ಗವರ್ನರ್‌ ಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.

20 ಲಕ್ಷ ಕಂಠಗಳಲ್ಲಿ ಮೊಳಗಿತು ಕನ್ನಡ ಡಿಂಡಿಮ

ರಾಜ್ಯಾದ್ಯಂತ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ರಾಜ್ಯದ ವಿವಿಧೆಡೆಯ 447 ಸ್ಥಳಗಳಲ್ಲಿ ಬರೋಬ್ಬರಿ 20.49 ಲಕ್ಷ ಮಂದಿ ಏಕಕಾಲಕ್ಕೆ ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಗುರುವಾರ ರಾಜ್ಯದ ಅಷ್ಟದಿಕ್ಕುಗಳಲ್ಲೂ ಕನ್ನಡ ಬಳಕೆ ಬಗೆಗಿನ ಸಂಕಲ್ಪದ ಧ್ವನಿ ಹಾಗೂ ಕನ್ನಡದ ಗೀತಗಾಯನದ ಉದ್ಘೋಷ ಮೊಳಗಿತು. ‘ಮಾತಾಡ್‌ ಮಾತಾಡ್‌ ಕನ್ನಡ’ ಘೋಷವಾಕ್ಯದಡಿ ‘ಬಾರಿಸು ಕನ್ನಡ ಡಿಂಡಿಮವ’, ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳ ಗಾಯನದ ಮೂಲಕ ಕನ್ನಡಾಭಿಮಾನ ಮೆರೆಯುವ ಜತೆಗೆ ಕನ್ನಡ ತಾಯಿಗೆ ನಿತ್ಯೋತ್ಸವ ಮಾಡಲಾಯಿತು.

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ವಿಧಾನಸೌಧದ ಮೆಟ್ಟಿಲ ಮೇಲೆ ನೂರಾರು ಮಂದಿ ಐಎಎಸ್‌, ಐಪಿಎಸ್‌, ಕೆಎಎಸ್‌ ಹಾಗೂ ಸಚಿವಾಲಯದ ಸಿಬ್ಬಂದಿ ಕನ್ನಡ ಗೀತೆಗಳ ಗಾಯನ ಮಾಡಿದರು. ಇದೇ ವೇಳೆ ಹುಬ್ಬಳ್ಳಿಯ ಕನ್ನಡ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಗೀತೆಗಳ ಗಾಯನ ನಡೆಸಿದ್ದು, ಕನ್ನಡದ ಬಾವುಟ ಹಿಡಿದು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಉತ್ಸಾಹದಿಂದ ಹಾಡಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಣ್ಣ ಬಣ್ಣದ ಉಡುಗೆ-ತೊಡುಗೆ ತೊಟ್ಟಪುರುಷರು, ಮಹಿಳೆಯರು, ಐಎಎಸ್‌ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು, ಸಿಬ್ಬಂದಿ ಯಾವ ಭೇದ ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ‘ಕನ್ನಡಕ್ಕಾಗಿ ನಾವು’ ಅಭಿಯಾನ ಕನ್ನಡಾಭಿಮಾನಿಗಳ ಮನಸೆಳೆಯುವಂತೆ ಮಾಡಿದರು.

ವಿಧಾನಸೌಧದ ಎದುರು 11 ಗಂಟೆಗೆ ಸ್ವಾಗತ ನುಡಿ, ಬಳಿಕ ನಾಡಗೀತೆಯಿಂದ ಶುರುವಾದ ಕಾರ್ಯಕ್ರಮ ರಮ್ಯಾ ವಸಿಷ್ಠ ಅವರ ತಂಡದಿಂದ ಮೂರು ಗೀತೆಗಳ ಗಾಯನದೊಂದಿಗೆ ಕೊನೆಗೊಂಡಿತು. ಸಾಂಪ್ರದಾಯಿಕ ಭಾಷಣಗಳಿಲ್ಲದೆ ಕೇವಲ 30 ನಿಮಿಷಗಳ ಕಾಲ ರಾಜ್ಯಾದ್ಯಂತ ನಡೆದ ಕಾರ್ಯಕ್ರಮ ಕೋಟ್ಯಂತರ ಹೃದಯಗಳನ್ನು ಗೆಲ್ಲಲು ಯಶಸ್ವಿಯಾಯಿತು.

click me!