ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಮಧ್ಯೆ ಬಿರುಕು?: ಹೀಗಿದೆ ಕಾರಣ

By Kannadaprabha NewsFirst Published Oct 29, 2021, 6:45 AM IST
Highlights

* ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ತಿಲ್ಲ

* ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಮಧ್ಯೆ ಬಿರುಕು?

* ಅಮೆರಿಕದ ಮಾಧ್ಯಮಗಳಲ್ಲಿ ಗುಸುಗುಸು

ವಾಷಿಂಗ್ಟನ್‌(ಅ.29): 2020ರ ಅಧ್ಯಕ್ಷೀಯ ಚುನಾವಣೆ ವೇಳೆ ಡೊನಾಲ್ಡ್‌ ಟ್ರಂಪ್‌ರನ್ನು (Donald Trump) ಸೋಲಿಸಿ ಅಧಿಕಾರಕ್ಕೇರಿದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ (US President Joe Biden) ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ (US Vice President Kamala Harris) ನಡುವೆ ಶೀತಲಯುದ್ಧ ಆರಂಭವಾಗಿದೆ ಎಂದು ಭಾರಿ ಗುಸುಗುಸು ಹಬ್ಬಿದೆ. ಅಧಿಕಾರಕ್ಕೇರಿದ ಆರಂಭದ ದಿನಗಳಲ್ಲಿ ಬಹುತೇಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಬೈಡೆನ್‌ ಮತ್ತು ಕಮಲಾ, ಇತ್ತೀಚಿನ ದಿನಗಳಲ್ಲಿ ಅಂತರ ಕಾಪಾಡಿಕೊಳ್ಳುತ್ತಿರುವುದು ಈ ಗುಸುಗುಸುವಿಗೆ ಕಾರಣವಾಗಿದೆ.

ದಿನ ಕಳೆದಂತೆ ಜೋ ಬೈಡೆನ್‌ (Joe Biden) ಜನಪ್ರಿಯತೆ ಕುಸಿತವಾಗುತ್ತಿರುವ ಬೆನ್ನಲ್ಲೇ, ಅವರಿಂದ ಅಂತರ ಕಾಪಾಡಿಕೊಳ್ಳುತ್ತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್‌, 2024ರ ಅಧ್ಯಕ್ಷೀಯ ಚುನಾವಣೆ (Presidential Election) ಅಥವಾ ತೀರಾ ಅನಿವಾರ್ಯ ಸಂದರ್ಭದಲ್ಲಿ ಯಾವುದೇ ಕ್ಷಣದಲ್ಲಿ ಅಮೆರಿಕದ ಅಧ್ಯಕ್ಷ ಹುದ್ದೆ ಏರಲು ಸಜ್ಜಾಗುತ್ತಿರಬಹುದು ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ವಿಶೇಷವೆಂದರೆ ಟ್ರಂಪ್‌ ವಿರುದ್ಧ ಬೈಡೆನ್‌ ಮತ್ತು ಕಮಲಾ ಪರವಾಗಿ ಬ್ಯಾಟಿಂಗ್‌ ಮಾಡಿದ್ದ ಅಮೆರಿಕದ ಬಲಪಂಥೀಯ ಪತ್ರಿಕೆಗಳೇ ಇದೀಗ ಇಂಥದ್ದೊಂದು ವಿಶ್ಲೇಷಣೆ ಮಾಡುತ್ತಿವೆ.

ಶೀತಲಯುದ್ಧ:

ಇಬ್ಬರ ನಡುವಿನ ಶೀತಲ ಸಮರಕ್ಕೆ ಅಮೆರಿಕ ಮಾಧ್ಯಮಗಳು (US Media) ಪ್ರಮುಖವಾಗಿ ನೀಡುತ್ತಿರುವ ಉದಾಹರಣೆಯೆಂದರೆ, ಸಾರ್ವಜನಿಕವಾಗಿ ಇಬ್ಬರೂ ಒಂದಾಗಿ ಭಾಗವಹಿಸುವ ಕಾರ್ಯಕ್ರಮಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿರುವುದು. ಉದಾಹರಣೆಗೆ ಕಳೆದ ಜನರಿಯಲ್ಲಿ ಇಬ್ಬರು 20 ಕಾರ್ಯಕ್ರಮಗಳಲ್ಲಿ ಒಂದಾಗಿ ಕಾಣಿಸಿದ್ದರು. ಫೆಬ್ರವರಿಯಲ್ಲಿ ಅದು 38ಕ್ಕೆ ಏರಿತ್ತು. ಆದರೆ ಆಗಸ್ಟ್‌ನಲ್ಲಿ ಅದು 16ಕ್ಕೆ ಕುಸಿದರೆ, ಸೆಪ್ಟೆಂಬರ್‌ನಲ್ಲಿ ಅದು 8ಕ್ಕೆ ಇಳಿದಿದೆ. ಇನ್ನು ಅಕ್ಟೋಬರ್‌ನಲ್ಲಿ ಇಬ್ಬರೂ ಒಂದಾಗಿ ಕಾಣಿಸಿಕೊಂಡಿದ್ದು ಕೇವಲ ಒಂದೇ ಒಂದು ಕಾರ್ಯಕ್ರಮದಲ್ಲಿ. ಉಳಿದಂತೆ 6 ಕಡೆ ಇಬ್ಬರು ಒಟ್ಟಾಗಿದ್ದರಾದರೂ ಅದು ಮುಚ್ಚಿದ ಕೊಠಡಿಗಳಲ್ಲಿ ನಡೆಯುವ ಸಭೆಗಳು ಮತ್ತು ದೈನಂದಿನ ಪತ್ರಿಕಾಗೋಷ್ಠಿಗೆ ಸೀಮಿತವಾಗಿತ್ತು ಎಂಬುದು.

ಕಾರಣ ಏನು?:

ತಮಗೆ ಸೂಕ್ತ ಖಾತೆ ನೀಡಿಲ್ಲ ಎಂಬ ಅಸಮಾಧಾನ ಕಮಲಾಗಿದೆ ಎಂದು ಒಂದು ಮಾಧ್ಯಮ ವರದಿ ಮಾಡಿದ್ದರೆ, ಮತ್ತೊಂದು ಮಾಧ್ಯಮವು ಕಮಲಾಗೆ ನಿರ್ವಹಿಸಲಾಗದಷ್ಟುಹೊಣೆಯನ್ನು ಬೈಡೆನ್‌ ವಹಿಸಿದ್ದಾರೆ. ಹೀಗಾಗಿ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲೇ ಸಾಧ್ಯವಾಗುತ್ತಿಲ್ಲ. ಕಳೆದ ಮಂಗಳವಾರ ಭಾರತೀಯ ಸಮುದಾಯ ಆಯೋಜಿಸಿದ್ದ ದೀಪಾವಳಿ (Diwali) ಕಾರ್ಯಕ್ರಮದಲ್ಲೂ ಕಮಲಾ ಹೆಚ್ಚು ಹೊತ್ತು ಕಾಣಿಸಿಕೊಳ್ಳಲಿಲ್ಲ. ಇದು ಅವರ ಕಾರ್ಯಭಾರ ಹೆಚ್ಚಾಗಿರುವುದರ ಉದಾಹರಣೆ ಎಂದು ಹೇಳಿದೆ.

ಇನ್ನೊಂದೆಡೆ ದಿನೇ ದಿನೇ ಆಡಳಿತಕ್ಕೆ ಸಂಬಂಧಿಸಿದಂತೆ ಬೈಡೆನ್‌ ಜನಪ್ರಿಯತೆ ಕುಸಿಯುತ್ತಿದೆ. ಹೀಗಾಗಿ ಉದ್ದೇಶಪೂರ್ವವಾಗಿಯೇ ಕಮಲಾ ಅಧ್ಯಕ್ಷರಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಮತ್ತೊಂದು ಪತ್ರಿಕೆ ವರದಿ ಮಾಡಿದೆ.

ಭಿನ್ನ ದನಿ:

ಹಿಂದೆ ಡೆಮಾಕ್ರೆಟ್‌ ಪಕ್ಷದ (Democratic party) ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೈಡೆನ್‌ ಮತ್ತು ಕಮಲಾ ಪ್ರತಿಸ್ಪರ್ಧಿಗಳಾಗಿದ್ದರು. ಆಗ ಬೈಡೆನ್‌ ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ಹಲವು ವಿಷಯಗಳಲ್ಲಿ ಕಮಲಾ ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಆದರೆ ಬಳಿಕ ಬೈಡೆನ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಅಚ್ಚರಿಯ ರೀತಿಯಲ್ಲಿ ಕಮಲಾ ಅವರನ್ನೇ ಉಪಾಧ್ಯಕ್ಷೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಹಲವು ವಿಷಯಗಳಲ್ಲಿ ಪರಸ್ಪರ ವಿರೋಧ ನಿಲುವು ಹೊಂದಿರುವ ಇಬ್ಬರ ನಡುವಿನ ಮೈತ್ರಿ ಬಹಳ ದಿನ ಉಳಿಯದೇ ಇರಬಹುದು ಎಂದು ಆಗಲೇ ವಿಶ್ಲೇಷಣೆಗಳು ಕೇಳಿಬಂದಿದ್ದವು. ಅದೀಗ ನಿಜವಾಗುತ್ತಿರಬಹುದು ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

click me!