
ದೇಲ್ ಅಲ್ ಬಲಾಹ್ (ಗಾಜಾ ಪಟ್ಟಿ): ಕಳೆದ 2 ವರ್ಷಗಳಲ್ಲಿ ಸುಮಾರು 70 ಸಾವಿರ ಜನರನ್ನು ಬಲಿಪಡೆದ, ಲಕ್ಷಕ್ಕೂ ಹೆಚ್ಚು ಜನರನ್ನು ಗಾಯಾಳು ಮಾಡಿದ, 20 ಲಕ್ಷಕ್ಕೂ ಹೆಚ್ಚು ಜನರು ನಿರ್ವಸಿತರಾಗುವಂತೆ ಮಾಡಿದ್ದ ಗಾಜಾ ಯುದ್ಧಕ್ಕೆ ಕೊನೆಗೂ ತೆರೆ ಬೀಳುವ ಶುಭ ಸೂಚನೆ ಕಂಡುಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ‘ಗಾಜಾ ಕದನ ವಿರಾಮ ಮಾತುಕತೆ’ಯ ಭಾಗವಾಗಿ 738 ದಿನಗಳಿಂದ ತನ್ನ ವಶದಲ್ಲಿದ್ದ 20 ಜೀವಂತ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದ್ದರೆ, ತನ್ನ ವಶದಲ್ಲಿದ್ದ 1900 ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇದೊಂದಿಗೆ ಯುದ್ಧಕ್ಕೆ ಈಗ ವಿರಾಮ ಬಿದ್ದಿದ್ದು, ಮುಂದಿನ ದಿನದಲ್ಲಿ ಸಂಪೂರ್ಣ ಸ್ಥಗಿತದ ಸುಳಿವು ಲಭಿಸಿದೆ.
ಇದರ ಬೆನ್ನಲ್ಲೇ ಸೋಮವಾರ ಸಂಸತ್ ಉದ್ದೇಶಿಸಿ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಾಂತಿ ಕಾಪಾಡಲು ಬದ್ಧ ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಇಸ್ರೇಲ್‌ಗೆ ಆಗಮಿಸಿ ‘ಎರಡು ವರ್ಷಗಳ ಯುದ್ಧ ಅಂತ್ಯವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲ ವಿಷಯ ಇತ್ಯರ್ಥ ಬಾಕಿ:
ಕದನ ವಿರಾಮದ ಮೊದಲ ಹಂತದಲ್ಲಿ ಒತ್ತೆ, ಕೈದಿಗಳ ಬಿಡುಗಡೆಯಾಗಿದೆ. ಆದರೆ ಗಾಜಾ ಪೂರ್ಣ ತೆರವು, ಹಮಾಸ್ ಉಗ್ರರ ಶಸ್ತ್ರಾಸ್ತ್ರ ತೆರವು, 20 ಲಕ್ಷ ಪ್ಯಾಲೆಸ್ತೀನಿಯರಿಗೆ ಮರುವಸತಿ, ಪರಿಹಾರ, ಹೊಸ ಸರ್ಕಾರ ರಚನೆಯಂಥ ದೊಡ್ಡ ಸಮಸ್ಯೆಗಳು ಮುಂದಿವೆ. ಹೀಗಾಗಿ ಈ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಂತಿ ಸ್ಥಾಪನೆ ಹೇಗೆ? ಎಂದು? ಎಂಬ ಪ್ರಶ್ನೆಗಳು ಇನ್ನು ಉಳಿದುಕೊಂಡಿದೆ.
ಯುದ್ಧ ಸಾಕು:
ಬಿಡುಗಡೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಇಸ್ರೇಲ್ ಸಂಸತ್ ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ಇಸ್ರೇಲ್ ಇನ್ನು ಯುದ್ಧಭೂಮಿಯಲ್ಲಿ ಸಾಧಿಸಬೇಕಾಗಿದ್ದು ಏನೂ ಇಲ್ಲ. ಇನ್ನು ದೇಶ ಶಾಂತಿಯತ್ತ ಹೆಜ್ಜೆ ಹಾಕಬೇಕಿದೆ’ ಎಂದು ಕರೆ ನೀಡಿದರು.
ಸಂಭ್ರಮ:
ಇಸ್ರೇಲ್ ಮೇಲೆ ಒತ್ತಡ, ಹಮಾಸ್ ಮೇಲೆ ಅಮೆರಿಕದ ಬೆದರಿಕೆ ಪರಿಣಾಮ ಏರ್ಪಟ್ಟ ಕದನ ವಿರಾಮ ಸೋಮವಾರ ಮತ್ತೊಂದು ಹಂತಕ್ಕೆ ತಲುಪಿದೆ. 2023ರ ಅ.7ರಂದು ಇಸ್ರೇಲ್ ಮೇಲೆ ದಾಳಿ ವೇಳೆ ತಾನು ವಶಕ್ಕೆ ಪಡೆದು ಒತ್ತೆ ಇಟ್ಟುಕೊಂಡಿದ್ದ 20 ಜೀವಂತ ಕೈದಿಗಳನ್ನು ಹಮಾಸ್ ಉಗ್ರರು ಸೋಮವಾರ ಬಿಡುಗಡೆ ಮಾಡಿದ್ದಾರೆ. ಇವರನ್ನು ಕುಟುಂಬ ಸದಸ್ಯರು ತವರಿನಲ್ಲಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇನ್ನೊಂದೆಡೆ ತನ್ನ ಒತ್ತೆಯಲ್ಲಿದ್ದ ವೇಳೆ ಮೃತಪಟ್ಟ 28 ಜನರ ಪೈಕಿ ನಾಲ್ವರ ಶವಗಳನ್ನು ಶೀಘ್ರ ಹಸ್ತಾಂತರ ಮಾಡುವುದಾಗಿ ಹೇಳಿದೆ. ಇನ್ನೊಂದೆಡೆ ಇಸ್ರೇಲ್ ಬಿಡುಗಡೆ ಮಾಡಿದ ಪ್ಯಾಲೆಸ್ತೀನ್ ಹೋರಾಟಗಾರರನ್ನು ಕುಟುಂಬ ಸದಸ್ಯರು ಹರ್ಷಚಿತ್ತರಾಗಿ ಸ್ವಾಗತಿಸಿದರು.
ಶಾಂತಿ ಮಂತ್ರ
- 2023ರ ಆ.7ರಂದ ಆರಂಭವಾಗಿದ್ದ ಇಸ್ರೇಲ್-ಹಮಾಸ್ ನಡುವಿನ ಘನಘೋರ ಸಮರ
- ಈವರೆಗೆ 70 ಸಾವಿರ ಜನರ ಬಲಿಪಡೆದು, ಲಕ್ಷಾಂತರ ಜನರ ನಿರ್ವಸಿತ ಮಾಡಿದ ಯುದ್ಧ
- ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ 20 ಅಂಶದ ಸಂಧಾನ ಸೂತ್ರ
- ಈ ಪ್ರಕಾರ 1 ಸೂತ್ರದಂತೆ ಇಸ್ರೇಲ್‌ನಿಂದ ಒತ್ತೆಯಾಳು, ಇಸ್ರೇಲಿಂದ ಕೈದಿಗಳ ಬಿಡುಗಡೆ
- ಯುದ್ಧಕ್ಕೆ ಸದ್ಯಕ್ಕೆ ವಿರಾಮ. ಉಳಿದ 19 ಸಂಧಾನ ಸೂತ್ರದ ಬಗ್ಗೆ ಮುಂದೆ ಮಾತುಕತೆ
- ಈ ಬಗ್ಗೆ ಸ್ವತಃ ಇಸ್ರೇಲ್‌ಗೆ ಆಗಮಿಸಿ ಹರ್ಷ ವ್ಯಕ್ತಪಡಿಸಿದ ಟ್ರಂಪ್. ಜನರಿಂದ ಸಂಭ್ರಮ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ