Latest Videos

ಪ್ರವಾದಿ ವಿವಾದ: ಬಂಗಾಳದಲ್ಲಿ ಮತ್ತೆ ಹಿಂಸಾಚಾರ!

By Suvarna NewsFirst Published Jun 13, 2022, 7:43 AM IST
Highlights

ರೈಲ್ವೆ ನಿಲ್ದಾಣದ ಮೇಲೆ ದುಷ್ಕರ್ಮಿಗಳಿಂದ ದಾಳಿ, ಬೆಂಕಿ

ಬಂಗಾಳದಲ್ಲಿ ಮತ್ತೆ ಹಿಂಸಾಚಾರ

ಕೋಲ್ಕತಾ(ಜೂ13): ಪ್ರವಾದಿ ಮೊಹಮ್ಮದ್‌ ವಿರುದ್ಧ ಹೇಳಿಕೆ ಸಂಬಂಧ ಭಾನುವಾರವೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ನಾಡಿಯಾ ಜಿಲ್ಲೆಯ ಬೇಥುಅಡಹರಿ ನಗರದ ರೈಲ್ವೆ ನಿಲ್ದಾಣದ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿದೆ. ಈ ವೇಳೆ ನಿಲ್ದಾಣ ಮತ್ತು ರೈಲೊಂದಕ್ಕೆ ಬೆಂಕಿ ಹಚ್ಚುವ ಯತ್ನ ನಡೆದಿದೆ. ಅಲ್ಲದೆ ಕಲ್ಲು ತೂರಾಟವನ್ನೂ ನಡೆಸಲಾಗಿದೆ. ಘಟನೆಯಲ್ಲಿ ಆಸ್ತಿಪಾಸ್ತಿಗೆ ಹಾನಿಯುಂಟಾಗಿದೆ.

ಈ ನಡುವೆ ಕಳೆದ 2 ದಿನಗಳಿಂದ ಭಾರೀ ಹಿಂಸಾಚಾರ ನಡೆದಿದ್ದ ಹೌರಾದಲ್ಲಿ ಭಾನುವಾರ ಶಾಂತಿ ನೆಲೆಸಿದೆ. ಗಲಭೆಯ ಕಾರಣದಿಂದಾಗಿ ಹೇರಲಾಗಿದ್ದ ಸೆಕ್ಷನ್‌ 144 ಸಿಆರ್‌ಪಿಸಿ ಹಾಗೂ ಇಂಟರ್‌ನೆಟ್‌ ಸ್ಥಗಿತ ಮುಂದುವರೆಸಿದ ಹಿನ್ನೆಲೆಯಲ್ಲಿ ಮುರ್ಷಿದಾಬಾದ್‌, ಬೆಲ್ದಂಗಾ, ರೇಜಿನಗರ, ಶಕ್ತಿಪುರ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲೂ ಶಾಂತಿ ನೆಲೆಸಿದೆ.

ಕಳೆದ 2 ದಿನಗಳ ಕಾಲ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸುಮಾರು 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಶಾಂತಿ ವಾತಾವರಣದ ನಡುವೆಯೂ ಮತ್ತೆ ದಂಗೆ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲರ್ಚ್‌ ಘೋಷಿಸಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಪ್ರವಾದಿ ವಿವಾದ: 400 ಜನರ ಬಂಧನ

ಪ್ರವಾದಿ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರ ಬಂಧನಕ್ಕೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ದೇಶಾದ್ಯಂತ ನಡೆದ ಹಿಂಸಾಚಾರ, ಭಾನುವಾರ ಸ್ವಲ್ಪ ತಣ್ಣಗಾಗಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಡೆ ಭಾನುವಾರ ಪರಿಸ್ಥಿತಿ ಶಾಂತವಾಗಿತ್ತು. ಈ ನಡುವೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ಈವರೆಗೆ 400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ನೂಪುರ್‌ ಶರ್ಮಾ ಬಂಧನಕ್ಕೆ ಒತ್ತಾಯಿಸಿ ಹಲವು ರಾಜ್ಯಗಳಲ್ಲಿ ಭಾನುವಾರ ಪ್ರತಿಭಟನೆ ನಡೆದಿದೆಯಾದರೂ, ಸಣ್ಣಪುಟ್ಟಕಲ್ಲುತೂರಾಟದ ಘಟನೆ ಹೊರತುಪಡಿಸಿದರೆ ದೊಡ್ಡ ಮಟ್ಟದ ಹಿಂಸಾಚಾರ ನಡೆದಿಲ್ಲ. ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್‌್ತ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಹಿಂಸಾಚಾರ ಸಂಬಂಧ ಉತ್ತರಪ್ರದೇಶದಲ್ಲಿ 304, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ 100 ಜನರನ್ನು ಬಂಧಿಸಲಾಗಿದೆ. ರಾಂಚಿಯಲ್ಲಿ ಸಾವಿರಾರು ಜನರ ವಿರುದ್ಧ 25 ಎಫ್‌ಐಆರ್‌ ದಾಖಲಿಸಲಾಗಿದೆ.

click me!