
ನವದೆಹಲಿ: ಬೆಂಗಳೂರಿನಲ್ಲಿ ನಡೆದ ದುರಂತ ನೂಕುನುಗ್ಗಲಿನಲ್ಲಿ 11 ಜನರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಕ್ಕೆ ಮಾಜಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಬುಧವಾರ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025ರ ಗೆಲುವಿನ ಸಂಭ್ರಮಾಚರಣೆಯ ವೇಳೆ ಈ ಘಟನೆ ಸಂಭವಿಸಿದೆ. ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ, ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಮಾಜಿ ಬ್ರಿಟಿಷ್ ಪ್ರಧಾನಿ X ಸೇರಿದಂತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
“ನನ್ನ ಮತ್ತು ಅಕ್ಷತಾ ಅವರ ಹೃದಯಗಳು ಬೆಂಗಳೂರಿನ ದುರಂತ ಘಟನೆಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಮತ್ತು ಗಾಯಗೊಂಡವರೊಂದಿಗೆ ಇದೆ. ನಿನ್ನೆ ನಿಮ್ಮೊಂದಿಗೆ ನಾವು ಸಂಭ್ರಮಿಸಿದೆವು ಮತ್ತು ಇಂದು ನಿಮ್ಮೊಂದಿಗೆ ದುಃಖಿಸುತ್ತಿದ್ದೇವೆ” ಎಂದು ಸುನಕ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸುನಕ್ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವನ್ನು ಬೆಂಬಲಿಸಲು ಹಾಜರಿದ್ದರು. ಬೆಂಗಳೂರು ತಂಡವು 18 ವರ್ಷಗಳ ಕಾಲ ಕಾದ ನಂತರ ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು.
ಈ ಸಂಭ್ರಮವನ್ನು ಆಚರಿಸಲು ಜನ ಸೇರಿ ದುರಂತ ನಡೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ನೂಕುನುಗ್ಗಲಿನಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
“ಗೆಲುವಿನ ಸಂಭ್ರಮಾಚರಣೆಯ ವೇಳೆ ಒಂದು ದೊಡ್ಡ ದುರಂತ ಸಂಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇದು ಸಂಭವಿಸಿದೆ. ಸರ್ಕಾರವು ಮೃತರಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲಿದೆ” ಎಂದು ಸಿಎಂ ಹೇಳಿದರು.
ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, “ನೂಕುನುಗ್ಗಲಿನಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಮತ್ತು 47 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ಸಂಭವಿಸಬಾರದಿತ್ತು. ಸರ್ಕಾರ ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸುತ್ತದೆ” ಎಂದರು.
ಕರ್ನಾಟಕ ಸಿಎಂ ಮುಂದುವರಿದು ಈ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು. “ನಾನು ಈ ಘಟನೆಯನ್ನು ಸಮರ್ಥಿಸಿಕೊಳ್ಳಲು ಬಯಸುವುದಿಲ್ಲ. ನಮ್ಮ ಸರ್ಕಾರ ಇದರ ಮೇಲೆ ರಾಜಕೀಯ ಮಾಡುವುದಿಲ್ಲ. ನಾನು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದೇನೆ ಮತ್ತು 15 ದಿನಗಳ ಕಾಲಾವಕಾಶ ನೀಡಿದ್ದೇನೆ. ಜನರು ಕ್ರೀಡಾಂಗಣದ ದ್ವಾರಗಳನ್ನು ಸಹ ಮುರಿದರು. ನೂಕುನುಗ್ಗಲು ಉಂಟಾಯಿತು. ಇಷ್ಟೊಂದು ದೊಡ್ಡ ಜನಸಂದಣಿ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದಲ್ಲಿ ಕೇವಲ 35,000 ಜನರಿಗೆ ಮಾತ್ರ ಸ್ಥಳಾವಕಾಶವಿದೆ, ಆದರೆ 2-3 ಲಕ್ಷ ಜನರು ಬಂದರು” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸೇರಿ ಹಲವಾರು ನಾಯಕರು, ರಾಜಕಾರಣಿಗಳು, ಗಣ್ಯವ್ಯಕ್ತಿಗಳು, ಸೆಲೆಬ್ರಿಟಿಗಳು ಈ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ