ಆಫ್ಘನ್‌ ತಾಲಿಬಾನ್‌ ವಶದ ಹಿಂದೆ ಪಾಕಿಸ್ತಾನ ಕೈವಾಡ: ಬಯಲಾಯ್ತು ಸಂಚು!

By Kannadaprabha NewsFirst Published Sep 2, 2021, 7:35 AM IST
Highlights

* ಆಫ್ಘನ್‌ ತಾಲಿಬಾನ್‌ ವಶದ ಹಿಂದೆ ಪಾಕಿಸ್ತಾನ ಕೈವಾಡ

* ಅಮೆರಿಕಕ್ಕೆ ಫೋನ್‌ ಮಾಡಿ ಹೇಳಿದ್ದ ಆಫ್ಘನ್‌ ಅಧ್ಯಕ್ಷ

* ಸಂಭಾಷಣೆ ಬಹಿರಂಗ ಪಾಕಿಸ್ತಾನದ ಬಣ್ಣ ಬಯಲು

ಕಾಬೂಲ್‌(ಸೆ.02): ಸುಮಾರು 50 ಸಾವಿರದಷ್ಟಿದ್ದ ತಾಲಿಬಾನಿ ಉಗ್ರರು 3 ಲಕ್ಷದಷ್ಟಿದ್ದ ಅಷ್ಘಾನಿಸ್ತಾನ ಯೋಧರನ್ನು ಮಣಿಸಿ ಕೇವಲ 15 ದಿನಗಳಲ್ಲಿ ಇಡೀ ದೇಶವನ್ನು ಆಕ್ರಮಿಸಿಕೊಂಡಿದ್ದು ಹೇಗೆ ಎಂಬುದು ಇಡೀ ವಿಶ್ವವನ್ನೇ ಅಚ್ಚರಿಗೆ ಗುರಿ ಮಾಡಿದೆ. ಆದರೆ ಇಂಥದ್ದೊಂದು ಸೂಪರ್‌ಫಾಸ್ಟ್‌ ದಾಳಿಯ ಹಿಂದೆ ನೆರೆಯ ಪಾಕಿಸ್ತಾನದ ಕೈವಾಡವಿತ್ತು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಇದರೊಂದಿಗೆ ಅಷ್ಘಾನಿಸ್ತಾನ ವಶಪಡಿಸಿಕೊಳ್ಳಲು ಪಾಕಿಸ್ತಾನ ಸರ್ಕಾರ ರಹಸ್ಯವಾಗಿ ತಾಲಿಬಾನಿಗಳನ್ನು ಬೆಂಬಲಿಸಿದ್ದು ಬಟಾಬಯಲಾಗಿದೆ.

ಇಂಥದ್ದೊಂದು ಸ್ಫೋಟಕ ಮಾಹಿತಿಯನ್ನು ಸದ್ಯ ವಿದೇಶಕ್ಕೆ ಪರಾರಿ ಆಗಿರುವ ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್‌ ಘನಿ ಅವರೇ ಖುದ್ದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಹೇಳಿದ್ದರು. ಪಾಕಿಸ್ತಾನವು ಅಫ್ಘಾನಿಸ್ತಾನಕ್ಕೆ 10ರಿಂದ 15 ಸಾವಿರದಷ್ಟುತಾಲಿಬಾನ್‌ ಉಗ್ರರನ್ನು ರವಾನಿಸಿದೆ ಎಂದು ಘನಿ ಅವರು ಬೈಡೆನ್‌ ಅವರಿಗೆ ಜುಲೈ 23ರಂದು ದೂರಿದ್ದರು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ.

ಸ್ಫೋಟಕ ಮಾಹಿತಿ:

ಬೈಡೆನ್‌ ಹಾಗೂ ಘನಿ ನಡುವಿನ 14 ನಿಮಿಷದ ದೂರವಾಣಿ ಮಾತುಕತೆಯ ಸಂಭಾಷಣೆ ರಾಯಿಟರ್ಸ್‌ ಸುದ್ದಿಸಂಸ್ಥೆಗೆ ಲಭಿಸಿದೆ. ‘ಬೈಡೆನ್‌ ಅವರೇ ತಾಲಿಬಾನ್‌ನಿಂದ ದೊಡ್ಡ ಪ್ರಮಾಣದ ದಾಳಿ ನಡೆಯಲಿದೆ. ಇದಕ್ಕೆ ಪಾಕಿಸ್ತಾನ ಬೆಂಬಲವಾಗಿ ನಿಂತಿದೆ. 10-15 ಸಾವಿರ ಅಂತಾರಾಷ್ಟ್ರೀಯ ಉಗ್ರರು, ಅದರಲ್ಲೂ ಹೆಚ್ಚಿನ ಪಾಕಿಸ್ತಾನಿಗಳು, ದಾಳಿಗೆ ಸಜ್ಜಾಗಿದ್ದಾರೆ. ಇದನ್ನು ನೀವು ಗಮನಿಸಬೇಕು’ ಎಂದು ಘನಿ ಹೇಳುವುದು ಕೇಳಿಬರುತ್ತದೆ.

ಇದಕ್ಕೆ ಉತ್ತರಿಸುವ ಬೈಡೆನ್‌, ಅಫ್ಘಾನಿಸ್ತಾನಕ್ಕೆ ಪೂರ್ತಿ ಬೆಂಬಲ ನೀಡುತ್ತೇವೆ ಎನ್ನುತ್ತಾರೆ. ಆದರೆ ಈ ಸಂಭಾಷಣೆಯಲ್ಲಿ ಆಫ್ಘನ್‌ ಸರ್ಕಾರ ಪತನಗೊಳ್ಳುತ್ತದೆ ಎಂಬ ಆತಂಕ ಎಲ್ಲೂ ವ್ಯಕ್ತವಾಗುವುದಿಲ್ಲ. ಆದರೆ ಇದಾದ ಕೆಲವೇ ವಾರಗಳಲ್ಲಿ ಮುನ್ನುಗ್ಗುವ ತಾಲಿಬಾನ್‌, ಆಗಸ್ಟ್‌ 15ಕ್ಕೆ ಕಾಬೂಲ್‌ ಅನ್ನು ವಶಪಡಿಸಿಕೊಂಡಿದೆ.

ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಸಾಕಷ್ಟುಬಾರಿ ತಾಲಿಬಾನ್‌ ಆಡಳಿತ ಬೆಂಬಲಿಸಿ ಮಾತನಾಡಿದ್ದು ಇಲ್ಲಿ ಗಮನಾರ್ಹ.

click me!