
ಕಠ್ಮಂಡು: ನೇಪಾಳದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆ. ಟಿಬೆಟ್ ಗಡಿಭಾಗದಿಂದ ಹರಿದುಬಂದ ಭೋಟೆಕೋಶಿ (Bhotekoshi) ನದಿಯ ದಿಢೀರ್ ಜಲಪ್ರಳಯಕ್ಕೆ ನೇಪಾಳದ ಹಲವು ಜಿಲ್ಲೆಗಳು ತತ್ತರಿಸಿವೆ. ಈ ಭೀಕರ ಪ್ರವಾಹದಲ್ಲಿ ಕನಿಷ್ಠ 105 ಭಾರತೀಯ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ (NTB) ಆತಂಕಕಾರಿ ಮಾಹಿತಿ ನೀಡಿದೆ.
ಬುಧವಾರ ನೇಪಾಳದ ರಸುವಾ ಜಿಲ್ಲೆಯ ಮೂಲಕ ಹರಿಯುವ ಭೋಟೆಕೋಶಿ ನದಿಯಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ. ಟಿಬೆಟ್ ಕಡೆಯಿಂದ ಹರಿದುಬಂದ ಭಾರೀ ಪ್ರಮಾಣದ ನೀರು ಮತ್ತು ಕೆಸರು ನೇಪಾಳದ ನುವಾಕೋಟ್ ಮತ್ತು ಧಾದಿಂಗ್ ಜಿಲ್ಲೆಗಳಲ್ಲಿ ವಿನಾಶ ಸೃಷ್ಟಿಸಿದೆ. ಪ್ರವಾಹದ ವೇಗಕ್ಕೆ ಹಲವಾರು ಹಳ್ಳಿಗಳು ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಾಥಮಿಕ ವರದಿಯ ಪ್ರಕಾರ..ಪ್ರವಾಹ ಪೀಡಿತ ಪ್ರದೇಶದಲ್ಲಿದ್ದ ಒಟ್ಟು 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಇದರಲ್ಲಿ 291 ವಿದೇಶಿ ಪ್ರಜೆಗಳಿದ್ದು, ಅವರಲ್ಲಿ 105 ಮಂದಿ ಭಾರತೀಯರಾಗಿದ್ದಾರೆ. ಉಳಿದಂತೆ 93 ನೇಪಾಳಿ ಪ್ರಜೆಗಳ ಸುಳಿವು ಸಿಗುತ್ತಿಲ್ಲ. ಪ್ರವಾಸಿ ಮಾರ್ಗದರ್ಶಿಗಳು ಮತ್ತು ಟ್ರಾವೆಲ್ ಏಜೆನ್ಸಿಗಳ ಮಾಹಿತಿಯ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಜಲಪ್ರಳಯದಲ್ಲಿ ಈವರೆಗೆ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನುವಾಕೋಟ್ ಮತ್ತು ಧಾದಿಂಗ್ ಜಿಲ್ಲೆಗಳಲ್ಲಿ ಎಂಟು ಶವಗಳನ್ನು ಹೊರತೆಗೆಯಲಾಗಿದೆ. ಕೇವಲ ಪ್ರವಾಸಿಗರಷ್ಟೇ ಅಲ್ಲದೆ, ರಕ್ಷಣೆಗೆ ತೆರಳಿದ್ದ 26 ನೇಪಾಳ ಪೊಲೀಸ್ ಸಿಬ್ಬಂದಿ ಮತ್ತು 7 ಸಶಸ್ತ್ರ ಪೊಲೀಸ್ ಪಡೆ (APF) ಸಿಬ್ಬಂದಿ ಕೂಡ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರವಾಹದ ಅಬ್ಬರಕ್ಕೆ ನೇಪಾಳದ ಆರು ಪ್ರಮುಖ ಜಲವಿದ್ಯುತ್ ಯೋಜನೆಗಳು ಮತ್ತು ಸಬ್‌ಸ್ಟೇಷನ್‌ಗಳು ಹಾನಿಗೊಳಗಾಗಿವೆ. ರಸುವಾಗಢಿ, ಚಿಲಿಮೆ, ತ್ರಿಶೂಲಿ 3A ಸೇರಿದಂತೆ ಹಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಸ್ಥಗಿತಗೊಂಡಿದೆ. ಇದರಿಂದಾಗಿ ನೇಪಾಳದ ಉತ್ತರ ಭಾಗದ ಹಲವು ಜಿಲ್ಲೆಗಳಲ್ಲಿ ಕತ್ತಲೆ ಆವರಿಸಿದೆ. ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ಕರೆದು ಪರಿಸ್ಥಿತಿಯನ್ನು ಪರಾಮರ್ಶಿಸಿದ್ದಾರೆ. ನೇಪಾಳ ಸೇನೆಯ ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳನ್ನು ಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ. ರೆಡ್‌ಕ್ರಾಸ್ ಮತ್ತು ಸ್ಥಳೀಯ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮುಂಗಾರು ಮಳೆಯಿಂದಾಗಿ ಇಂತಹ ಪ್ರವಾಹಗಳು ಸಾಮಾನ್ಯವಾಗಿದ್ದರೂ, ಹವಾಮಾನ ಬದಲಾವಣೆಯಿಂದಾಗಿ ಇವುಗಳ ತೀವ್ರತೆ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ