ತೈಲ, ಅನಿಲ, ಅಣು ಘಟಕದ ಸಮರದ ಬಳಿಕ ಈಗ ಕೊಲ್ಲೀಲಿ ನೀರು, ವಿದ್ಯುತ್‌ ಯುದ್ಧದ ಭಾರೀ ಆತಂಕ!

Kannadaprabha News   | Kannada Prabha
Published : Mar 23, 2026, 04:48 AM IST
iran

ಸಾರಾಂಶ

ಯುದ್ಧದ ವ್ಯಾಪ್ತಿ ಮುಂದೆ ಜಲ ಹಾಗೂ ತಂತ್ರಜ್ಞಾನ ಕೇಂದ್ರಗಳವರೆಗೂ ವಿಸ್ತರಣೆ ಆಗುವ ಸಾಧ್ಯತೆ ಇದೆ. ಹೀಗೇನಾದರೂ ಆದರಲ್ಲಿ ಪರಮಾಣು ವಿಕಿರಣ ಸೋರಿಕೆ, ನೀರು ಶುದ್ಧೀಕರಣ ಘಟಕಗಳು ಬಂದ್‌ ಆದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಭಾರೀ ಮಾನವೀಯ ಸಮಸ್ಯೆಯ ಗಂಭೀರ ಆತಂಕ ಎದುರಾಗಲಿದೆ.

ವಾಷಿಂಗ್ಟನ್‌/ಟೆಹ್ರಾನ್‌: ಇರಾನ್ ಹಾಗೂ ಅಮೆರಿಕ-ಇಸ್ರೇಲ್‌ ನಡುವಿನ ಯುದ್ಧ 23 ದಿನ ಪೂರೈಸುತ್ತಿದ್ದಂತೆಯೇ ‘ಮುಂದಿನ 48 ಗಂಟೆಯೊಳಗೆ ಹೋರ್ಮುಜ್‌ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಬೇಕು. ತಪ್ಪಿದಲ್ಲಿ ಇರಾನ್‌ನ ವಿದ್ಯುತ್‌ ಘಟಕಗಳನ್ನು ಗುರಿಯಾಗಿರಿಸಿ ದಾಳಿ ಮಾಡಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಸಿದ್ದಾರೆ.

ಆದರೆ, ಇದಕ್ಕೆ ಇರಾನ್‌ ತಿರುಗೇಟು ನೀಡಿದ್ದು, ‘ಅಮೆರಿಕ ನಮ್ಮ ವಿದ್ಯುತ್‌ ಘಟಕಗಳ ಮೇಲೆ ದಾಳಿ ನಡೆಸಿದ್ದೇ ಆದಲ್ಲಿ ಅವು ದುರಸ್ತಿ ಆಗುವವರೆಗೂ ಹೋರ್ಮುಜ್‌ ಜಲಸಂಧಿಯನ್ನು ತೆರೆಯುವುದಿಲ್ಲ. ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಇಂಧನ, ತಂತ್ರಜ್ಞಾನ ಮತ್ತು ನೀರು ಶುದ್ಧೀಕರಣ ಮೂಲಸೌಲಭ್ಯಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗುವುದು’ ಎಂದಿದೆ.

ಹೀಗಾಗಿ ಯುದ್ಧದ ವ್ಯಾಪ್ತಿ ಈಗಿನ ಪರಮಾಣು ಹಾಗೂ ಶಸ್ತ್ರಾಸ್ತ್ರ ಘಟಕಗಳಲ್ಲದೆ, ಮುಂದೆ ಜಲ ಹಾಗೂ ತಂತ್ರಜ್ಞಾನ ಕೇಂದ್ರಗಳವರೆಗೂ ವಿಸ್ತರಣೆ ಆಗುವ ಸಾಧ್ಯತೆ ಇದೆ. ಹೀಗೇನಾದರೂ ಆದರಲ್ಲಿ ಪರಮಾಣು ವಿಕಿರಣ ಸೋರಿಕೆ, ನೀರು ಶುದ್ಧೀಕರಣ ಘಟಕಗಳು ಬಂದ್‌ ಆದರೆ ಕೊಲ್ಲಿ ದೇಶಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಭಾರೀ ಮಾನವೀಯ ಸಮಸ್ಯೆಯ ಗಂಭೀರ ಆತಂಕ ಎದುರಾಗಲಿದೆ.

ಟ್ರಂಪ್‌ ಎಚ್ಚರಿಕೆ:

ಟ್ರೂತ್‌ ಸೋಷಿಯಲ್‌ನಲ್ಲಿ ಭಾನುವಾರ ಬೆಳಗ್ಗೆ ಬರೆದಿರುವ ಟ್ರಂಪ್, ‘ಒಂದು ವೇಳೆ ಇರಾನ್‌ 48 ಗಂಟೆಗಳಲ್ಲಿ ಹೋರ್ಮುಜ್‌ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸದಿದ್ದರೆ ವಿದ್ಯುತ್‌ ಘಟಕಗಳ ಮೇಲೆ ದಾಳಿ ನಡೆಸಲಾಗುವುದು. ಅತಿದೊಡ್ಡ ವಿದ್ಯುತ್‌ ಘಟಕಗಳನ್ನು ಮೊದಲು ಗುರಿ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಇಸ್ರೇಲ್‌, ಅಮೆರಿಕ ದಾಳಿ ಬಳಿಕ ವಿಶ್ವದ ಪ್ರಮುಖ ಹಡಗು ಮಾರ್ಗವಾದ ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ಬಂದ್ ಮಾಡಿದೆ. ಭಾರತ, ಚೀನಾ ಹಾಗೂ ರಷ್ಯಾದಂಥ ಕೇವಲ ಬೆರಳೆಣಿಕೆಯ ಮಿತ್ರ ರಾಷ್ಟ್ರಗಳ ಹಡಗುಗಳಿಗಷ್ಟೇ ಈ ಜಲಸಂಧಿಯಲ್ಲಿ ಓಡಾಡಲು ಅವಕಾಶ ನೀಡಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಅಸ್ತವ್ಯಸ್ತಗೊಳ್ಳುತ್ತಿದ್ದಂತೆ ಹೊರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ರಕ್ಷಣೆಗೆ ಯುರೋಪ್‌ ಸೇರಿ ವಿಶ್ವದ ಇತರೆ ರಾಷ್ಟ್ರಗಳು ಮುಂದೆ ಬರಬೇಕು ಎಂದು ಟ್ರಂಪ್‌ ಕೆಲ ದಿನಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಇದರ ನಡುವೆಯೇ ಇದೀಗ ಅವರು ಇರಾನ್‌ಗೆ ಈ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ ತಿರುಗೇಟು:

ಇರಾನ್ ಸೇನೆಯ ಆಪರೇಷನಲ್‌ ಕಮಾಂಡರ್ ಖತ್ಮ್‌ ಅಲ್‌ ಅನ್ಬಿಯಾ ಅವರು ಟ್ರಂಪ್‌ಗೆ ತಿರುಗೇಟು ನೀಡಿ, ‘ಹೋರ್ಮುಜ್‌ ಕುರಿತ ಗಡುವು ಒಪ್ಪದ್ದಕ್ಕೆ, ಒಂದು ವೇಳೆ ಟ್ರಂಪ್‌ ಅವರೇನಾದರೂ ನಮ್ಮ ವಿದ್ಯುತ್‌ ಘಟಕಗಳ ಮೇಲೆ ದಾಳಿ ನಡೆಸಿದ್ದೇ ಆದಲ್ಲಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಇಂಧನ, ತಂತ್ರಜ್ಞಾನ ಮತ್ತು ನೀರು ಶುದ್ಧೀಕರಣ ಮೂಲಸೌಲಭ್ಯಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗುವುದು’ ಎಂದು ಪ್ರತಿ-ಬೆದರಿಕೆ ಹಾಕಿದ್ದಾರೆ.

ದಾಳಿ ನಡೆದರೆ ಮಹಾ ವಿಪತ್ತು

- ಇರಾನ್‌ನ ಪ್ರಮುಖ ವಿದ್ಯುತ್‌ ಮೂಲ ಬುಶಹೆರ್‌ ಅಣುವಿದ್ಯುತ್‌ ಘಟಕ. ಇಲ್ಲಿಗೆ ದಾಳಿ ಆದ್ರೆ ವಿಕಿರಣ ಸೋರಿಕೆ

- ಗಾಳಿ ಜತೆ ಸೇರಿ ವಿಕಿರಣ ಪದಾರ್ಥ ಸೇರಿ ಇರಾನ್‌ನ ಅನ್ಯ ಪ್ರದೇಶ, ಇರಾಕ್‌, ಕುವೈತ್‌ಗೂ ಹರಡುವ ಭೀತಿ

- ನದಿಗಳಿಲ್ಲದ ಗಲ್ಫ್‌ನಲ್ಲಿ ಸಮುದ್ರದ ನೀರಿನಿಂದ ಲವಣಾಂಶ ತೆಗೆದು ಕುಡಿಯಲು, ಅನ್ಯ ಕೆಲಸಗಳಿಗೆ ಬಳಕೆ

- ಶೇ.80ರಷ್ಟು ಕುಡಿಯುವ ನೀರಿಗಾಗಿ ಕೊಲ್ಲಿಯ ದೇಶಗಳು ಜಲ ಶುದ್ಧೀಕರಣ ಘಟಕಗಳನ್ನು ಅವಲಂಬಿಸಿವೆ

- ಕುವೈತ್‌ಗೆ 90%, ಒಮಾನ್‌ಗೆ 86%, ಸೌದಿಗೆ 70% ನೀರು ಸಿಗುವುದು ಈ ಶುದ್ಧೀಕರಣ ಘಟಕಗಳಿಂದ

- ಇವುಗಳ ಮೇಲೆ ದಾಳಿ ಆದರೆ ಕುಡಿಯುವ ನೀರಿನ ಭೀತಿ, ಕೃಷಿಗೆ ನೀರಿಲ್ಲ, ಕೈಗಾರಿಕೆಗಳಿಗೂ ಕೊರತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

114 ದೇಶಗಳ ಶಾಲಾ ಮಕ್ಕಳಿಗೆ ಮೊಬೈಲ್‌ ಬಳಕೆ ಪೂರ್ಣ ಬ್ಯಾನ್‌ ಎಚ್ಚರಿಕೆ
ಅಮೆರಿಕದ 250ನೇ ವರ್ಷಾಚರಣೆಗೆ ಟ್ರಂಪ್‌ ಚಿತ್ರವುಳ್ಳ ನಾಣ್ಯ!