ಬೈಡನ್‌ಗೆ ತಲೆನೋವಾಯ್ತು ಇಮೇಲ್ ಸಂದೇಶಗಳು, ವರದಿಗೆ ಫೇಸ್ಬುಕ್ ಕತ್ತರಿ!

By Suvarna NewsFirst Published Oct 15, 2020, 5:42 PM IST
Highlights

ಚುನಾವಣಾ ಅಖಾಡದಲ್ಲಿ ಬೈಡನ್‌ಗೆ ತಲೆನೋವಾಯ್ತು ಇಮೇಲ್ ಸಂದೇಶಗಳು| ಇಂಧನ ಸಂಸ್ಥೆಯ ಕಾರ್ಯನಿರ್ವಾಹಕರಿಗೆ ತಂದೆಯ ಭೇಟಿ ಮಾಡಿಸಿದ್ದ ಬೈಡನ್ ಮಗ| ಇಮೇಲ್‌ನಲ್ಲಿ ರಹಸ್ಯ ಭೇಟಿಯ ಉಲ್ಲೇಖ, ವರದಿ ಬಹಿರಂಗ| ನ್ಯೂಯಾರ್ಕ್‌ ಪೋಸ್ಟ್‌ ವರದಿಗೆ ಫೇಸ್ಬುಕ್ ಕತ್ತರಿ| ಫ್ಯಾಕ್ಟ್‌ ಚೆಕ್ ನಡೆಸಿ ಮುಂದಿನ ಕ್ರಮ ಕೈಗೊಳ್ತೇವೆ ಎಂದ ಫೇಸ್ಬುಕ್‌ ವಕ್ತಾರ

ವಾಷಿಂಗ್ಟನ್(ಅ.15): ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಭ್ಯರ್ಥಿಗಳ ನಡುವಿನ ಪೈಪೋಟಿಯೂ ಹೆಚ್ಚುತ್ತಿದೆ. ಹಾಲಿ ಅಧ್ಯಕ್ಷ ಟ್ರಂಪ್ ಮತ್ತೆ ಅಮೆರಿಕದ ಬಾಸ್ ಆಗ್ತಾರಾ ಅಥವಾ ಎರುರಾಳಿ ಬೈಡನ್ ಗೆದ್ದು ಬೀಗುತ್ತಾರಾ ಎಂಬ ಕುತೂಹಲ ಸದ್ಯ ಇಡೀ ವಿಶ್ವವನ್ನೇ ಆವರಿಸಿದೆ. ಹೀಗಿರುವಾಗ ಈ ಚುನಾವಣಾ ಅಳೆಯ ನಡುವೆ ಜೋ ಬೈಡನ್ ಹಾಗೂ ಅವರ ಮಗ ಹಂಟರ್‌ ಹೆಸರಿರುವ ಕೆಲ ಇಮೇಲ್‌ಗಳು ಭಾರೀ ಸದ್ದು ಮಾಡಿವೆ.  

ಹಂಟರ್ ಬಿಡೆನ್ ತನ್ನ ತಂದೆ, ಆಗಿನ ಉಪಾಧ್ಯಕ್ಷ ಜೋ ಬಿಡೆನ್ ಅವರನ್ನು ಉಕ್ರೇನಿಯನ್ ಇಂಧನ ಸಂಸ್ಥೆಯೊಂದರ ಉನ್ನತ ಕಾರ್ಯನಿರ್ವಾಹಕರಿಗೆ ಪರಿಚಯಿಸಿದ್ದು, ಜೋ ಬಿಡೆನ್ ಈ ಕಂಪನಿಯ ತನಿಖೆ ನಡೆಸುತ್ತಿದ್ದ ಪ್ರಾಸಿಕ್ಯೂಟರ್‌ನನ್ನು ವಜಾ ಮಾಡುವಂತೆ ಉಕ್ರೇನ್‌ನ ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಹೇರಿದ್ದ ಒಂದು ವರ್ಷದೊಳಗೇ ಈ ಬೆಳವಣಿಗೆ ನಡೆದಿದೆ ಎಂದು ಇಮೇಲ್‌ಗಳು ಬಹಿರಂಗಪಡಿಸಿವೆ. ಈ ಬಗ್ಗೆ ನ್ಯೂಯಾರ್ಕ್ ಪೋಸ್ಟ್ ಸಾಕ್ಷಿ ಸಮೇತ ವರದಿ ಪ್ರಸಾರ ಮಾಡಿದೆ. ಆದರೀಗ ಈ ವರದಿಯನ್ನು ಫೇಸ್‌ಬುಕ್ ತಡೆ ಹಿಡಿಯುವ ಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಸದ್ಯ ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಫೇಸ್‌ಬುಕ್ ವಕ್ತಾರ ಆಂಡೀ ಸ್ಟೋನ್ ನ್ಯೂಯಾರ್ಕ್‌ ಪೋಸ್ಟ್‌ನ್ನು ನಾವು ಟಾರ್ಗೆಟ್‌ ಮಾಡುತ್ತಿಲ್ಲ. ಆದರೆ ಈ ಸುದ್ದಿ ನಿಜವೋ, ಸುಳ್ಳೋ ಎಂಬ ಫ್ಯಾಕ್ಟ್‌ ಚೆಕ್ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಸುದ್ದಿಯನ್ನು ಕೊಂಚ ತಡೆದಿದ್ದೇವೆ ಎಂದಿದ್ದಾರೆ. ಈ ಮೂಲಕ ತಪ್ಪು ಮಾಹಿತಿ ಹರಡದಿರುವಂತೆ ಮಾಡುವ ಕಂಪನಿಯ ನಿಯಮ ಅನುಸರಿಸುತ್ತಿದ್ದೇವೆ. ಒಂದು ಬಾರಿ ಫ್ಯಾಕ್ಟ್‌ ಚೆಕ್ ನಡೆದು ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಫ್ಯಾಕ್ಟ್‌ ಚೆಕ್ ಆಗುವವರೆಗೆ ಸುದ್ದಿ ಹರಡದಂತೆ ತಡೆಯುವುದು ಕಂಪನಿಯ ನಿಯಮಗಳಲ್ಲಿ ಒಂದು. ಇನ್ನು ಈ ಫ್ಯಾಕ್ಟ್‌ ಚೆಕ್ಕಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಲು ಗರಿಷ್ಠ ಒಂದು ವಾರ ಸಮಯ ತಗುಲಬಹುದು. ಇದಾದ ಬಳಿಕವೇ ಫೇಸ್‌ಬುಕ್ ಸುದ್ದಿಯನ್ನು ತೆಗೆದು ಹಾಕಬೇಕೋ ಅಥವಾ ನಿರ್ಬಂಧ ಹಿಂಪಡೆಯಬೇಕೋ ಎಂಬುವುದನ್ನು ನಿರ್ಧರಿಸಲಾಗುತ್ತದೆ.

click me!