
ನವದೆಹಲಿ: ಗ್ರೀನ್ ಲ್ಯಾಂಡ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವ ದೇಶಗಳ ಮೇಲೆ ಶೇ.10ರಷ್ಟು ತೆರಿಗೆ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಯುರೋಪಿಯನ್ ರಾಷ್ಟ್ರಗಳು ತಿರುಗಿ ಬಿದ್ದಿವೆ. ಟ್ರಂಪ್ ಅವರ ಈ ಘೋಷಣೆ ಬೆನ್ನಲ್ಲೇ ಅಮೆರಿಕದ ಜತೆಗಿನ ವ್ಯಾಪಾರ ಒಪ್ಪಂದ ಮಾತುಕತೆ ಸ್ಥಗಿತಗೊಳಿಸಿರುವುದಾಗಿ ಯುರೋಪಿಯನ್ ಯೂನಿಯನ್ ತಿಳಿಸಿದೆ.
ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಯುರೋಪಿನ ಬಹುತೇಕ ರಾಷ್ಟ್ರಗಳ ಒಪ್ಪಿಗೆ ಇದ್ದರೂ ಇದೀಗ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ವಿಚಾರ ಮುಂದಿಟ್ಟುಕೊಂಡು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಈ ಒಪ್ಪಂದ ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದುವರಿಸದಿರಲು ನಿರ್ಧರಿಸಲಾಗಿದೆ ಎಂದು ಯುರೋಪ್‌ನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಮ್ಯಾನ್‌ಫ್ರೆಡ್ ವೆಬರ್ ತಿಳಿಸಿದ್ದಾರೆ. ಈ ಮೂಲಕ ಸದ್ಯ ಅಮೆರಿಕದ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕುವ ಪ್ರಸ್ತಾಪಕ್ಕೆ ತಡೆ ಬಿದ್ದಂತಾಗಿದೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಕೂಡ ಟ್ರಂಪ್ ಬೆದರಿಕೆಯು ಯುರೋಪಿಯನ್ ಯೂನಿಯನ್ -ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದ ಹಳಿ ತಪ್ಪಿಸಲಿದೆ ಎಂದು ಎಚ್ಚರಿಸಿದ್ದರು.
ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಕಳೆದ ವರ್ಷದ ಜುಲೈ ತಿಂಗಳಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಸಹಿ ಹಾಕಿದ್ದವು. ಆದರೆ, ಅಮೆರಿಕದ ಬೆದರಿಕೆ ಹಿನ್ನೆಲೆಯಲ್ಲಿ ಗ್ರೀನ್‌ಲ್ಯಾಂಡ್‌ಗೆ ಸೇನೆ ಕಳುಹಿಸಿಕೊಟ್ಟಿರುವ ಡೆನ್ಮಾರ್ಕ್, ಜರ್ಮನಿ, ಫ್ರಾನ್ಸ್ ಮತ್ತಿತರ ದೇಶಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಯುರೋಪಿಯನ್ ಯೂನಿಯನ್-ಅಮೆರಿಕದ ವ್ಯಾಪಾರ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿದೆ.
ಅಮೆರಿಕ-ಯುರೋಪಿಯನ್ ಯೂನಿಯನ್ ನಡುವಿನ ಒಪ್ಪಂದದ ಪ್ರಕಾರ ಯುರೋಪಿನ ವಸ್ತುಗಳ ಮೇಲೆ ಅಮೆರಿಕ ಶೇ.15ರಷ್ಟು ತೆರಿಗೆ ವಿಧಿಸಿದರೆ, ಯುರೋಪಿಯನ್ ದೇಶಗಳು ಅಮೆರಿಕದಿಂದ ಭಾರೀ ಪ್ರಮಾಣದಲ್ಲಿ ಇಂಧನ ಖರೀದಿಸಬೇಕು ಮತ್ತು ಹೂಡಿಕೆ ಹೆಚ್ಚಿಸುವ ಕುರಿತು ಒಡಂಬಡಿಕೆ ಆಗಿತ್ತು. ಇದಕ್ಕೆ ಯುರೋಪಿಯನ್ ಕಮಿಷನ್‌ನ ಅನುಮೋದನೆ ಇನ್ನಷ್ಟೇ ಸಿಗಬೇಕಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ