Russia Ukraine War: ಜಗತ್ತಿನ ನಂ.1 ಶಕ್ತಿಶಾಲಿ ದೇಶ ಸುಮ್ಮನೆ ನೋಡುತ್ತಿದೆ!

By Suvarna News  |  First Published Feb 26, 2022, 8:33 AM IST

* ನಾನು ರಷ್ಯಾದ ಶತ್ರು ನಂ.1, ನನ್ನ ಕುಟುಂಬ ಶತ್ರು ನಂ.2

* ದೇಶವನ್ನುದ್ದೇಶಿಸಿ ಉಕ್ರೇನ್‌ ಅಧ್ಯಕ್ಷ ಭಾವನಾತ್ಮಕ ಭಾಷಣ

* ಜಗತ್ತಿನ ನಂ.1 ಶಕ್ತಿಶಾಲಿ ದೇಶ ಸುಮ್ಮನೆ ನೋಡುತ್ತಿದೆ!


ಕೀವ್‌(ಫೆ,26): ಉಕ್ರೇನ್‌ನ ರಾಜಧಾನಿ ಕೀವ್‌ ಅನ್ನು ರಷ್ಯಾ ವಶಪಡಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ತನ್ನ ದೇಶವನ್ನುದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದ್ದು, ಜಗತ್ತಿನ ನಂ.1 ಶಕ್ತಿಶಾಲಿ ದೇಶ (ಅಮೆರಿಕ) ದೂರದಿಂದ ಸುಮ್ಮನೆ ನೋಡುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.

ನಾನು ರಷ್ಯಾದ ನಂ.1 ಗುರಿ (ಶತ್ರು). ನನ್ನ ಕುಟುಂಬ ನಂ.2 ಗುರಿ. ನಿನ್ನೆಯಂತೆ ಇಂದೂ ಕೂಡ ನಾವು ಏಕಾಂಗಿಯಾಗಿ ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ ದೂರದಿಂದ ನೋಡುತ್ತಿದೆ ಎಂದು ಹೇಳಿದ್ದಾರೆ.

Tap to resize

Latest Videos

ಶುಕ್ರವಾರ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಜೆಲೆನ್‌ಸ್ಕಿ, ‘ಮಾಸ್ಕೋ ಮೇಲೆ ನಿನ್ನೆ ಅನೇಕ ದೇಶಗಳು ನಿರ್ಬಂಧಗಳನ್ನು ಹೇರಿವೆ. ಆದರೆ ರಷ್ಯಾ ನಮ್ಮ ವಿರುದ್ಧ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ತಡೆಯಲು ಅವು ಸಾಲದು. ಒಗ್ಗಟ್ಟು ಹಾಗೂ ದೃಢ ನಿಶ್ಚಯದಿಂದ ಮಾತ್ರ ನಮ್ಮ ನೆಲದಲ್ಲಿರುವ ವಿದೇಶಿ ಪಡೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್‌ನಲ್ಲಿ ಯಾರನ್ನು ಕೊಲ್ಲಬೇಕು ಅಥವಾ ಹಿಡಿದು ಕ್ಯಾಂಪ್‌ಗಳಿಗೆ ಕಳಿಸಬೇಕು ಎಂದು ರಷ್ಯಾ ಹಿಟ್‌ಲಿಸ್ಟ್‌ ತಯಾರಿಸಿದೆ ಎಂದು ಅಮೆರಿಕ ಹೇಳಿದ ನಂತರ ‘ನಾನು ರಷ್ಯಾಕ್ಕೆ ನಂ.1 ಶತ್ರು, ನನ್ನ ಕುಟುಂಬ ನಂ.2 ಶತ್ರು’ ಎಂದು ಜೆಲೆನ್‌ಸ್ಕಿ ಹೇಳಿರುವುದು ಮಹತ್ವ ಪಡೆದಿದೆ.

ಉಕ್ರೇನ್‌ ರಾಜಧಾನಿ ಕೀವ್‌ ಬಹುತೇಕ ಕೈವಶ

ಉಕ್ರೇನ್‌ ಮೇಲೆ ದಾಳಿ ಆರಂಭಿಸಿದ ಎರಡೇ ದಿನಕ್ಕೆ ದೇಶದ ರಾಜಧಾನಿ ಕೀವ್‌ ಅನ್ನು ಬಹುತೇಕ ವಶಪಡಿಸಿಕೊಳ್ಳುವಲ್ಲಿ ರಷ್ಯಾ ಯಶಸ್ವಿಯಾಗಿದೆ. ರಷ್ಯಾದ ಯುದ್ಧ ಟ್ಯಾಂಕ್‌ಗಳು ಹಾಗೂ ಯೋಧರು ಕೀವ್‌ ನಗರವನ್ನು ಎಲ್ಲಾ ದಿಕ್ಕುಗಳಿಂದ ಸುತ್ತುವರೆದಿದ್ದು, ಯಾವುದೇ ಕ್ಷಣದಲ್ಲಿ ಒಳನುಗ್ಗಿ ಸರ್ಕಾರದ ಪ್ರಮುಖ ಕೇಂದ್ರಗಳನ್ನು ಸಂಪೂರ್ಣ ವಶಕ್ಕೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಸದ್ಯ ಕೀವ್‌ ಮೇಲೆ ಆಗಸ, ಭೂಮಿ ಹಾಗೂ ಸಮುದ್ರ ಮೂರೂ ಕಡೆಗಳಿಂದ ರಷ್ಯಾ ದಾಳಿ ನಡೆಸುತ್ತಿದೆ.

ರಷ್ಯಾದ ಯೋಧರು ಹಾಗೂ ಮಿಲಿಟರಿ ವಾಹನಗಳು ಒಳಗೆ ನುಗ್ಗಬಾರದೆಂದು ಉಕ್ರೇನ್‌ ಸೇನೆ ಕೀವ್‌ನ ಸುತ್ತಮುತ್ತ ಇರುವ ಪ್ರಮುಖ ಸೇತುವೆಗಳನ್ನು ಹಾಗೂ ಸಂಪರ್ಕಗಳನ್ನು ಧ್ವಂಸಗೊಳಿಸಿದೆ. ಆದರೆ, ಒಮ್ಮೆಲೇ 10,000 ಪ್ಯಾರಾಟ್ರೂಪರ್‌ಗಳನ್ನು ಆಗಸದಿಂದ ಕೀವ್‌ ನಗರದೊಳಗೆ ಇಳಿಸಿ ಉಕ್ರೇನ್‌ ಸರ್ಕಾರವನ್ನು ವಶಕ್ಕೆ ತೆಗೆದುಕೊಳ್ಳಲು ರಷ್ಯಾ ಯೋಜನೆ ರೂಪಿಸಿದೆ ಎಂದು ಅಮೆರಿಕದ ಗುಪ್ತಚರ ದಳ ತಿಳಿಸಿದೆ.

ಇಡೀ ಉಕ್ರೇನ್‌ ಮೇಲೆ ದಾಳಿ ಇಲ್ಲ:

ಇಡೀ ಉಕ್ರೇನ್‌ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಸಾವುನೋವಿಗೆ ಕಾರಣವಾಗುವ ಉದ್ದೇಶ ರಷ್ಯಾಕ್ಕಿಲ್ಲ. ಅಷ್ಟೊಂದು ಶ್ರಮವನ್ನು ರಷ್ಯಾ ತೆಗೆದುಕೊಳ್ಳುವುದಿಲ್ಲ. ಬದಲಿಗೆ ನೇರವಾಗಿ ಉಕ್ರೇನ್‌ನ ಅಧ್ಯಕ್ಷ, ಸಚಿವರು ಹಾಗೂ ಸಂಸದರಿಂದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿಸಿ, ಉಕ್ರೇನ್‌ನಲ್ಲಿ ತಾನು ಹೇಳಿದಂತೆ ಕೇಳುವ ಸರ್ಕಾರ ಸ್ಥಾಪನೆ ಮಾಡಿ ಅಧಿಕಾರ ಚಲಾಯಿಸುವ ಹವಣಿಕೆಯಲ್ಲಿ ರಷ್ಯಾ ಇದೆ ಎಂದು ಹೇಳಲಾಗಿದೆ.

ವಿಮಾನ ನಿಲ್ದಾಣ ವಶ:

ಈ ನಡುವೆ ಶುಕ್ರವಾರ ಸಂಜೆ ವೇಳೆಗೆ ಕೀವ್‌ನ ಹೊರವಲಯದಲ್ಲಿರುವ ಆಯಕಟ್ಟಿನ ಹೋಸ್ಟೋಮೆಲ್‌ ವಿಮಾನ ನಿಲ್ದಾಣವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಹೀಗಾಗಿ ಯಾವುದೇ ಭಾಗದಿಂದ ತನ್ನ ಸೇನೆಯನ್ನು ಇಲ್ಲಿಗೆ ಏರ್‌ಲಿಫ್ಟ್‌ ಮಾಡಿ ಕರೆತರುವುದು ರಷ್ಯಾಕ್ಕೆ ಈಗ ಭಾರೀ ಸುಲಭವಾಗಿದೆ.

ಕ್ರಿಮಿಯಾಕ್ಕೆ ರಷ್ಯಾ ಕಾರಿಡಾರ್‌ ನಿರ್ಮಾಣ:

ಕೀವ್‌ ನಗರದ ಹೊರ ಸಂಪರ್ಕಗಳನ್ನು ಸಂಪೂರ್ಣ ಕಡಿತಗೊಳಿಸಿ, ಕ್ರಿಮಿಯಾ ಹಾಗೂ ಟ್ರಾನ್ಸ್‌ಡ್ನೀಸ್ಟ್ರಿಯಾಕ್ಕೆ ಲ್ಯಾಂಡ್‌ ಕಾರಿಡಾರ್‌ ನಿರ್ಮಿಸಲು ರಷ್ಯಾ ಸಂಚು ರೂಪಿಸಿದೆ. ದಕ್ಷಿಣದ ತುದಿಯಲ್ಲಿ ಸಮುದ್ರ ದಂಡೆಯ ಗುಂಟ ಕ್ರಿಮಿಯಾ ಮತ್ತು ಟ್ರಾನ್ಸ್‌ಡ್ನೀಸ್ಟ್ರಿಯಾಕ್ಕೆ ರಸ್ತೆ ನಿರ್ಮಿಸುವ ಸಾಧ್ಯತೆಯಿದೆ ಎಂದು ಉಕ್ರೇನ್‌ ಆರೋಪಿಸಿದೆ.

ರಷ್ಯಾದ ಮುಂದಿನ ಪ್ಲಾನ್‌ ಏನು?

ಮೊದಲಿಗೆ ಉಕ್ರೇನ್‌ನ ರಾಜಧಾನಿ ಕೀವ್‌ ನಗರವನ್ನು ಸಂಪೂರ್ಣ ಸುತ್ತುವರಿಯುವುದು. ಎಲ್ಲಾ ದಿಕ್ಕುಗಳಿಂದ ಕೀವ್‌ ಮೇಲೆ ದಾಳಿ ನಡೆಸುವುದು. ನಂತರ ವಿಮಾನಗಳ ಮೂಲಕ 10 ಸಾವಿರ ಪ್ಯಾರಾಟ್ರೂಪರ್‌ ಯೋಧರನ್ನು ನಗರದೊಳಗೆ ಇಳಿಸುವುದು. ಅವರು ಕೀವ್‌ನಲ್ಲಿ ಅಡಗಿರುವ ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ, ಸಚಿವರು ಹಾಗೂ ಸಂಸದರನ್ನು ವಶಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ, ಸರ್ಕಾರದ ಎಲ್ಲಾ ಪ್ರಮುಖ ಕಚೇರಿಗಳನ್ನು ವಶಪಡಿಸಿಕೊಳ್ಳಬೇಕು. ಅಲ್ಲಿ ಜೆಲೆನ್‌ಸ್ಕಿ ಹಾಗೂ ಸಚಿವರಿಂದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿಸಲಾಗುತ್ತದೆ. ನಂತರ ತಾನು ಹೇಳಿದಂತೆ ಕೇಳುವ ಸರ್ಕಾರವನ್ನು ಉಕ್ರೇನ್‌ನಲ್ಲಿ ರಷ್ಯಾ ಸ್ಥಾಪಿಸುತ್ತದೆ. ಅಲ್ಲಿಗೆ ಯುದ್ಧ ಕೊನೆಗೊಳ್ಳುತ್ತದೆ.

click me!