ಒಂದೇ ಒಂದು ಗೇಮ್ ಫ್ಲಾಪ್ ಆಗಿದ್ದಕ್ಕೆ ಸ್ಟುಡಿಯೋ ಮುಚ್ಚಿದ ದೈತ್ಯ ಗೇಮಿಂಗ್ ಕಂಪನಿ, 400 ಉದ್ಯೋಗಿಗಳ ವಜಾ!

Published : Oct 22, 2026, 11:28 AM IST
BioWare

ಸಾರಾಂಶ

ಎಲೆಕ್ಟ್ರಾನಿಕ್ ಆರ್ಟ್ಸ್ ಕಂಪನಿಯು ಆರ್ಥಿಕ ಹಿನ್ನಡೆಯ ಕಾರಣದಿಂದ ಖ್ಯಾತ 'ಬಯೋವೇರ್' ಸ್ಟುಡಿಯೋವನ್ನು ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಿದೆ. ಇದರ ಪರಿಣಾಮವಾಗಿ ಮುಂಬರುವ 'ಮಾಸ್ ಎಫೆಕ್ಟ್' ಯೋಜನೆ ರದ್ದಾಗಿದ್ದು, ಸುಮಾರು 400 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಸ್ಟಾರ್ ವಾರ್ಸ್ ಮತ್ತು ಮಾರ್ವೆಲ್‌ನಂತಹ ಬೃಹತ್ ಗೇಮ್‌ಗಳತ್ತ ಗಮನ ಹರಿಸಲಿದೆ.

ವೀಡಿಯೊ ಗೇಮಿಂಗ್ ಉದ್ಯಮದಲ್ಲಿ ಬಹುದೊಡ್ಡ ಪಲ್ಲಟವೊಂದು ಸಂಭವಿಸಿದೆ. ಪ್ರಪಂಚದಾದ್ಯಂತ ಕೋಟ್ಯಂತರ ಗೇಮರ್‌ಗಳ ಮನಗೆದ್ದಿದ್ದ 'ಮಾಸ್ ಎಫೆಕ್ಟ್' ಮತ್ತು 'ಡ್ರ್ಯಾಗನ್ ಏಜ್' ನಂತಹ ರೋಲ್ ಪ್ಲೇಯಿಂಗ್ ಆಟಗಳ ಸೃಷ್ಟಿಕರ್ತ, ಕೆನಡಾ ಮೂಲದ ಖ್ಯಾತ ‘ಬಯೋವೇರ್’ ಸ್ಟುಡಿಯೋವನ್ನು ಸಂಪೂರ್ಣವಾಗಿ ಮುಚ್ಚಲು ದೈತ್ಯ ಗೇಮಿಂಗ್ ಪ್ರಕಾಶಕ ಎಲೆಕ್ಟ್ರಾನಿಕ್ ಆರ್ಟ್ಸ್ ನಿರ್ಧರಿಸಿದೆ. ಈ ಕುರಿತು ಕಂಪನಿಯು ತನ್ನ ಉದ್ಯೋಗಿಗಳಿಗೆ ಆಂತರಿಕ ಇಮೇಲ್ ಹಾಗೂ ಅಧಿಕೃತ ಬ್ಲಾಗ್ ಮೂಲಕ ಮಾಹಿತಿ ರವಾನಿಸಿದೆ.

ಮೂರೂವರೆ ದಶಕಗಳ ಸುದೀರ್ಘ ಇತಿಹಾಸ ಹೊಂದಿರುವ ಬಯೋವೇರ್ ಸ್ಟುಡಿಯೋದ ಅಂತ್ಯದೊಂದಿಗೆ, ಆರಂಭಿಕ ಹಂತದಲ್ಲಿದ್ದ ಮುಂಬರುವ 'ಮಾಸ್ ಎಫೆಕ್ಟ್' ಯೋಜನೆಯನ್ನೂ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

400 ಉದ್ಯೋಗಿಗಳ ವಜಾ, ಶೇ. 3 ರಷ್ಟು ಸಿಬ್ಬಂದಿಗೆ ಕೋಕ್!

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಪ್ರಸ್ತುತ ಜಾಗತಿಕ ಗೇಮಿಂಗ್ ಮಾರುಕಟ್ಟೆಯಲ್ಲಿನ ಹಿನ್ನಡೆ ಹಾಗೂ ಕಂಪನಿಯ ಮರುರಚನೆಯ (Restructuring) ಭಾಗವಾಗಿ ಇಎ ಸುಮಾರು 400 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ. ಇದು ಕಂಪನಿಯ ಒಟ್ಟು ಉದ್ಯೋಗಿಗಳ ಸರಿಸುಮಾರು ಶೇ. 3 ರಷ್ಟಾಗಿದೆ. ಈ ವಜಾ ಪಟ್ಟಿಯಲ್ಲಿ ಕೆನಡಾದ ಎಡ್ಮಂಟನ್‌ನಲ್ಲಿರುವ ಬಯೋವೇರ್ ಸ್ಟುಡಿಯೋದ ಸುಮಾರು 50 ಪ್ರಮುಖ ಗೇಮ್ ಡೆವಲಪರ್‌ಗಳು ಸೇರಿದ್ದಾರೆ. ಉದ್ಯೋಗ ಕಳೆದುಕೊಳ್ಳುವ ಸಿಬ್ಬಂದಿಗೆ ಇಎ ಸಂಸ್ಥೆಯೊಳಗಿನ ಇತರ ವಿಭಾಗಗಳಲ್ಲಿ ಅವಕಾಶಗಳನ್ನು ಹುಡುಕಲು ನೆರವಾಗುವುದಾಗಿ ಭರವಸೆ ನೀಡಲಾಗಿದೆ.

ಮುಚ್ಚುವಿಕೆಗೆ ಪ್ರಮುಖ ಕಾರಣವೇನು?

ಇಎ ಸಂಸ್ಥೆಯ ಮುಖ್ಯ ಸ್ಟುಡಿಯೋಸ್ ಅಧಿಕಾರಿ ಕ್ಯಾಮ್ ವೆಬರ್ ಹಾಗೂ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡೇವಿಡ್ ಟಿನ್ಸನ್, "ಕಳೆದ ಕೆಲವು ತಿಂಗಳುಗಳಿಂದ ನಾವು ನಮ್ಮ ಆರ್ಥಿಕ ಹಾಗೂ ತಾಂತ್ರಿಕ ಪ್ರಗತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಅತ್ಯಂತ ಕಠಿಣ ಮನಸ್ಸಿನಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಬಯೋವೇರ್ ಮುಚ್ಚಲು ಮುಖ್ಯ ಕಾರಣವೆಂದರೆ, ಇತ್ತೀಚೆಗೆ ಬಿಡುಗಡೆಯಾದ 'ಡ್ರ್ಯಾಗನ್ ಏಜ್: ದಿ ವೀಲ್‌ಗಾರ್ಡ್' ಗೇಮ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದ ಮಾರಾಟ ಕಾಣದಿರುವುದು. ಇದು ಕಂಪನಿಗೆ ಭಾರಿ ಆರ್ಥಿಕ ಹಿನ್ನಡೆ ಉಂಟುಮಾಡಿತ್ತು.

55 ಬಿಲಿಯನ್ ಡಾಲರ್ ಒಪ್ಪಂದ ಮತ್ತು ಆರ್ಥಿಕ ಒತ್ತಡ:

ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿ , ಸಿಲ್ವರ್ ಲೇಕ್ ಮತ್ತು ಅಫಿನಿಟಿ ಪಾರ್ಟ್‌ನರ್ಸ್ ನೇತೃತ್ವದಲ್ಲಿ ಇಎ ಸಂಸ್ಥೆಯನ್ನು $55 ಬಿಲಿಯನ್ ವೆಚ್ಚದಲ್ಲಿ ಖಾಸಗೀಕರಣಗೊಳಿಸಲಾಗಿತ್ತು. ಈ ಬೃಹತ್ ಒಪ್ಪಂದದ ಪರಿಣಾಮವಾಗಿ ಇಎ ಕಂಪನಿಯ ಮೇಲೆ ಸುಮಾರು $18 ಶತಕೋಟಿ ಸಾಲದ ಹೊರೆ ಬಿದ್ದಿತ್ತು. ಈ ವೆಚ್ಚವನ್ನು ಸರಿದೂಗಿಸಲು ಮತ್ತು ಹೂಡಿಕೆದಾರರಿಗೆ $700 ಮಿಲಿಯನ್ ಉಳಿಸುವ ನಿಟ್ಟಿನಲ್ಲಿ ಇಎ ಭಾರಿ ವೆಚ್ಚ ಕಡಿತ ಮತ್ತು ಉದ್ಯೋಗಿಗಳ ವಜಾ ಕಾರ್ಯಕ್ಕೆ ಕೈಹಾಕಿದೆ.

ಇಎ ಸಂಸ್ಥೆಯ ಮುಂದಿನ ಯೋಜನೆಗಳೇನು?

ಬಯೋವೇರ್ ಮುಚ್ಚಿದರೂ, ಹೆಚ್ಚು ಲಾಭದಾಯಕ ಹಾಗೂ ಬೃಹತ್ ಮಟ್ಟದ ಆಕ್ಷನ್ ಗೇಮ್‌ಗಳ ಮೇಲೆ ಗಮನ ಹರಿಸುವುದಾಗಿ ಇಎ ಸ್ಪಷ್ಟಪಡಿಸಿದೆ.

ಸ್ಟಾರ್ ವಾರ್ಸ್ ಮತ್ತು ಮಾರ್ವೆಲ್: ಮುಂಬರುವ 'ಮಾರ್ವೆಲ್ಸ್ ಐರನ್ ಮ್ಯಾನ್' ಮತ್ತು ಮುಂದಿನ 'ಸ್ಟಾರ್ ವಾರ್ಸ್ ಜೇಡಿ' ಗೇಮ್‌ಗಳ ಅಭಿವೃದ್ಧಿ ಮುಂದುವರಿಯಲಿದೆ.

ಬ್ಯಾಟಲ್‌ಫೀಲ್ಡ್ ಜಂಟಿ ಯೋಜನೆ: ರಿಸ್ಪಾನ್ ಮತ್ತು ಡೈಸ್ ಸ್ಟುಡಿಯೋಗಳು ಸೇರಿ ಹೊಸ 'ಬ್ಯಾಟಲ್‌ಫೀಲ್ಡ್' ಹಾಗೂ 'ಸ್ಟಾರ್ ವಾರ್ಸ್: ಬ್ಯಾಟಲ್‌ಫ್ರಂಟ್' ಸರಣಿಯ ಮುಂದಿನ ಭಾಗದ ಕೆಲಸಗಳಲ್ಲಿ ಭಾಗಿಯಾಗಲಿವೆ.

ಇಎ ಸ್ಪೋರ್ಟ್ಸ್ ಮತ್ತು ಬಾಕ್ಸಿಂಗ್: ಇಎ ಸ್ಪೋರ್ಟ್ಸ್ ವಿಭಾಗದಲ್ಲಿ ಪ್ರಾಜೆಕ್ಟ್ ಗ್ರಿಡಿರಾನ್ ಎಂಬ ಓಪನ್-ವರ್ಲ್ಡ್ ಅಮೇರಿಕನ್ ಫುಟ್‌ಬಾಲ್ ಆಟ ಮತ್ತು ಪ್ರಸಿದ್ಧ 'ಫೈಟ್ ನೈಟ್' ಬಾಕ್ಸಿಂಗ್ ಸರಣಿಯ ಪುನರಾಗಮನಕ್ಕೆ ಸಿದ್ಧತೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗ್ಗೆ ತಿಂಡಿ ತಿಂದರೂ ರಾತ್ರಿ ಊಟದ ಚಿಂತೆ! ದುಬೈನಲ್ಲಿ ಭಾರತೀಯ ಪುರೋಹಿತರ ಕಷ್ಟದ ದಿನಗಳು
Macron attacks Trump: ಫ್ರಾನ್ಸ್‌ನಲ್ಲಿ ಮುಸ್ಲಿಂ ವಲಸಿಗರ ಅಕ್ರಮಣ ಆಗಿಲ್ಲ; ಅವೆಲ್ಲ ಎಐ ಸೃಷ್ಟಿ ಎಂದ ಮ್ಯಾಕ್ರಾನ್!