
ಸ್ಪೇನ್: ಪ್ರತಿಯೊಂದು ದೇಶಕ್ಕೊಂದು ತನ್ನದೇ ಆದ ನಿಯಮಗಳಿರುತ್ತವೆ. ಅದೇ ರೀತಿ ಕೆಲವೊಂದು ಗ್ರಾಮಗಳು ವಿಚಿತ್ರ ನಿಯಮಗಳನ್ನು ಹೊಂದಿರುತ್ತವೆ. ಇಂತಹ ಗ್ರಾಮ ಅಥವಾ ದೇಶದಲ್ಲಿ ವಾಸಿಸುವ ಜನರು ಇಲ್ಲಿಯ ನಿಯಮಗಳನ್ನು ಪಾಲನೆ ಮಾಡಲೇಬೇಕಾಗುತ್ತದೆ. ಇಂತಹ ನಿಯಮಗಳು ವಿಚಿತ್ರ ಅನ್ನಿಸಬಹುದು. ಇಂತಹ ವಿಚಿತ್ರ ನಿಯಮವೊಂದು ಸ್ಪೇನ್‌ನ ಲಾಂಜರಾನ್ ಎಂಬ ಪಟ್ಟಣದಲ್ಲಿದೆ. ಲಾಂಜರಾನ್ ಪಟ್ಟಣದ ಪ್ರಕಾರ, ಇಲ್ಲಿ ಯಾರಾದ್ರೂ ಸಾಯುವುದು ಕಾನೂನುಬಾಹಿರವಾಗಿದೆ.
ಈ ವಿಚಿತ್ರ ನಿಯಮ ಹೊಂದಿರುವ ಲಾಂಜರಾನ್ ಪಟ್ಟಣ ಸ್ಪೇನ್‌ನ ಗ್ರಾನಡ್ ಎಂಬ ಪ್ರದೇಶದಲ್ಲಿದೆ. 1999ರಲ್ಲಿ ಆಗಿನ ಮೇಯರ್ ಜೋಸ್ ರೂಬಿಯೊ ಅವರ ಆದೇಶದಂತೆ ಈ ಪಟ್ಟಣದಲ್ಲಿ ಸಾಯುವುದು ಕಾನೂನುಬಾಹಿರವಾಗಿದೆ. ಹೊಸ ಸಮಾಧಿಗಳಿಗೆ ಜಾಗವಿಲ್ಲ. ಇಲ್ಲಿನ ಸ್ಮಶಾನ ತುಂಬಿ ಹೋದ ಕಾರಣ ಈ ವಿಚಿತ್ರ ನಿಯಮ ಜಾರಿಗೆ ತರಲಾಗಿದೆ. 1999ರಿಂದ ಈ ಲಾಂಜರಾನ್ ಪಟ್ಟಣದಲ್ಲಿ ಈ ನಿಯಮವನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ.
ಲಾಂಜರಾನ್ ಪಟ್ಟಣಕ್ಕೆ ಇರೋದು ಒಂದೇ ಸ್ಮಶಾನ
ಈ ನಿಯಮ ಜಾರಿಗೊಳಿಸಿದ ಬಳಿಕ ಹೇಳಿಕೆ ನೀಡಿದ್ದ ಮೇಯರ್ ಜೋಸ್ ರೂಬಿಯೋ, ನಾನು ಕೇವಲ ಮೇಯರ್. ನನ್ನ ಮೇಲೆ ದೇವರಿದ್ದಾನೆ, ಅಂತಿಮವಾಗಿ ವಿಷಯಗಳನ್ನು ನಿಯಂತ್ರಿಸುವವನು ಅವನು. ಅವನು ನೀಡುವ ಶಿಕ್ಷೆಯನ್ನು ಪಾಲಿಸುವರು ನಾವೆಲ್ಲರೂ ಎಂದಿದ್ದರು. ಮೇಯರ್ ಹೇಳಿಕೆ ಬಳಿಕ ಲಾಂಜರಾನ್ ಪಟ್ಟಣದ ನಿವಾಸಿಗಳು ಈ ತಮಾಷೆ ನಿಯಮವನ್ನು ಒಪ್ಪಿಕೊಂಡರು ವರದಿಯಾಗಿದೆ. 1999ರಲ್ಲಿ ಈ ನಿಯಮ ಬಂದ್ರೂ, ಇಂದಿಗೂ ಸ್ಮಶಾನದ ಸಮಸ್ಯೆಯನ್ನು ಬಗೆಹರಿಸಲಾಗಿದೆಯೇ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಈ ನಿಯಮ ಬಂದು 26 ವರ್ಷಗಳಾಗಿದ್ದು, ನಗರಕ್ಕೆ ಒಂದೇ ಒಂದು ಸ್ಮಶಾನವಿದೆ.
ಪ್ರವಾಸಿ ಕೇಂದ್ರ ಈ ಪಟ್ಟಣ
ಸುಮಾರು 4 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಲಾಂಜರಾನ್ ಪಟ್ಟಣ ಪ್ರವಾಸಿ ಕೇಂದ್ರವಾಗಿದೆ. ಈ ಪ್ರದೇಶ ಖನಿಜಯುಕ್ತ ನೀರಿನ ಬುಗ್ಗೆಗಳಿಗೆ ಹೆಸರುವಾಸಿಯಾಗಿದ್ದು, ಜನನಿಬಿಡ ಪ್ರವಾಸಿ ಕೇಂದ್ರವಾಗಿದೆ. ಬಾರ್ಸಿಲೋನಾ, ಮಜೋರ್ಕದಂತಹ ಪ್ರದೇಶಗಳಲ್ಲಿ ಲಾಂಜರಾನ್ ಒಂದಾಗಿದೆ. ಪ್ರವಾಸೋದ್ಯಮದಿಂದ ಲಾಂಜರಾನ್ ಅಭಿವೃದ್ಧಿ ಹೊಂದುತ್ತಿದೆ. ಲಾಂಜರಾನ್ ಪಟ್ಟಣ ತನ್ನ ವಿಶೇಷ ಸಂಸ್ಕೃತಿಯಿಂದಾಗಿ ಶ್ರೀಮಂತವಾಗಿದೆ. ಇಲ್ಲಿ ಆಚರಣೆ ಮಾಡುವ ಹಬ್ಬಗಳು ಹಲವು ವಿಶೇಷತೆಯನ್ನು ಹೊಂದಿರುತ್ತವೆ. ಫಿಯೆಸ್ಟಾ ಡೆಲ್ ಅಗುವಾ ವೈ ಡೆಲ್ ಜಾಮೊನ್ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ.
ಈ ಕಾರ್ಯಕ್ರಮವು ಬೃಹತ್ ನೀರಿನ ಆಟವನ್ನು ಒಳಗೊಂಡಿರುತ್ತದೆ. ಇಲ್ಲಿಯ ಸ್ಥಳೀಯರು ಮತ್ತು ಸಂದರ್ಶಕರು ಬೀದಿಗಳಲ್ಲಿ ಪರಸ್ಪರ ನೀರಿನಿಂದ ಸಿಂಪಡಿಸುತ್ತಾ ಆಟವಾಡುತ್ತಾರೆ. ಈ ಪಟ್ಟಣದ ಜನರು ಇಲ್ಲಿಯ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದರು.
ನಾರ್ವೆಯಲ್ಲಿಯೂ ಇಂತಹವುದೇ ಒಂದು ನಿಯಮ
ನಾರ್ವೆಯ ಲಾಂಗ್‌ಯಿಯರ್‌ಬೈನ್‌ನಲ್ಲೂ ಲಾಂಜರಾನ್‌ನಂತೆಯೇ ಸಾಯಬಾರದು ಎಂಬ ನಿಯಮವಿದೆ. 1950 ರಿಂದ ಈ ನಿಯಮ ಜಾರಿಯಲ್ಲಿದೆ. ಇಲ್ಲಿನ ಹವಾಮಾನದಲ್ಲಿ ಹೂಳಿದ ಶವಗಳು ಕೊಳೆಯುವುದಿಲ್ಲ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದರು. ಅಂದಿನಿಂದ ನಿಯಮ ಜಾರಿಗೆ ಬಂದಿದೆ. 1917 ರ ಇನ್ಫ್ಲುಯೆನ್ಸ ವೈರಸ್‌ನ ಜೀವಂತ ಮಾದರಿಗಳನ್ನು ಸಹ ಹೂಳಿದ ಶವಗಳಿಂದ ಪಡೆಯಲಾಯಿತು. ರೋಗ ಹರಡುವ ಭೀತಿಯಿಂದಾಗಿ, ಹೊಸ ಸಮಾಧಿಗಳನ್ನು ಇಲ್ಲಿ ಮಾಡಬಾರದು ಎಂದು ಅಧಿಕಾರಿಗಳು ನಿರ್ಧರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ