ಡೀಲ್‌ ಮಾಡಿಕೊಳ್ಳದೇ ಇದ್ರೆ, ಗಂಭೀರ ಪರಿಣಾಮ: ಕ್ಯೂಬಾಗೆ ಟ್ರಂಪ್‌ ಧಮಕಿ

Published : Jan 12, 2026, 05:19 AM ISTUpdated : Jan 12, 2026, 05:21 AM IST
Donald Trump

ಸಾರಾಂಶ

ವೆನಿಜುವೆಲಾಗೆ ಸೇನಾ ನೆರವು ಮತ್ತು ಡ್ರಗ್ಸ್ ಜಾಲದ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಕ್ಯೂಬಾಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ವೆನಿಜುವೆಲಾದಿಂದ ಬರುವ ತೈಲವನ್ನು ನಿರ್ಬಂಧಿಸಿ, ಕ್ಯೂಬಾದ ಆರ್ಥಿಕತೆಗೆ ಹೊಡೆತ ನೀಡುವುದು ಅಮೆರಿಕದ ಯೋಜನೆಯಾಗಿದೆ.

ವಾಷಿಂಗ್ಟನ್‌: ವೆನಿಜುವೆಲಾ ದಾಳಿಯ 2 ದಿನಗಳ ಬಳಿಕ ಕ್ಯೂಬಾ, ಮೆಕ್ಸಿಕೋ, ಕೊಲಂಬಿಯಾ ಮೇಲೆ ದಾಳಿ ಮಾತುಗಳನ್ನು ಆಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ ಅಂಥದ್ದೇ ಎಚ್ಚರಿಕೆ ನೀಡಿದ್ದಾರೆ. ‘ನಮ್ಮ ಜತೆ ಒಪ್ಪಂದ ಮಾಡಿಕೊಳ್ಳಿ. ಇಲ್ಲದಿದ್ದರೆ ಅನಿರ್ದಿಷ್ಟವಾದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ, ಹವಾನಾಗೆ (ಕ್ಯೂಬಾ ರಾಜಧಾನಿ) ವೆನಿಜುವೆಲಾದ ತೈಲ ಮತ್ತು ಹಣದ ಹರಿವು ಕೂಡ ನಿಲ್ಲುತ್ತದೆ. ತುಂಬಾ ತಡವಾಗುವ ಮೊದಲು ಅವರು ಒಪ್ಪಂದ ಮಾಡಿಕೊಳ್ಳಬೇಕೆಂದು ನಾನು ಬಲವಾಗಿ ಸೂಚಿಸುತ್ತೇನೆ’ ಎಂದು ಭಾನುವಾರ ಎಚ್ಚರಿಸಿದ್ದಾರೆ.

ಇದೇ ವೇಳೆ, ‘ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಕ್ಯೂಬಾ ಅಧ್ಯಕ್ಷ ?’ ಎಂಬ ಸೋಷಿಯಲ್‌ ಮೀಡಿಯಾ ಪ್ರಶ್ನೆಗೆ ಅವರು ಉತ್ತರಿಸಿ, ‘ಇದು ಉತ್ತಮ ಸಲಹೆ’ ಎಂದಿದ್ದಾರೆ. ಅವರ ಈ ಉತ್ತರ ಸಂಚಲನ ಮೂಡಿಸಿದೆ. ಫಿಡೆಲ್‌ ಕ್ಯಾಸ್ಟ್ರೋ ಆಡಳಿತದ ವೇಳೆ ಅಮೆರಿಕ ವಿರೋಧಿ ಆಗಿದ್ದ ಕ್ಯೂಬಾಗೆ ಈಗ ಮೈಕೆಲ್‌ ಡಯಾಜ್‌ ಅಧ್ಯಕ್ಷರಾಗಿದ್ದಾರೆ.

ಟ್ರಂಪ್‌ ಮಾರ್ಮಿಕ ಮಾತು

ಇತ್ತೀಚೆಗೆ ಮೂರು ದೇಶಗಳ ವಿರುದ್ಧ ಹರಿಹಾಯ್ದಿದ್ದ ಟ್ರಂಪ್‌, ಮೆಕ್ಸಿಕೋ, ಕ್ಯೂಬಾ ಮತ್ತು ಕೊಲಂಬಿಯಾ ದೇಶಗಳಲ್ಲಿ ಆಡಳಿತದಲ್ಲಿರುವ ಸರ್ಕಾರಗಳು ಅಮೆರಿಕಕ್ಕೆ ಡ್ರಗ್ಸ್‌ ಪೂರೈಕೆ ಮಾಡುವ ಮೂಲಕ ನಮ್ಮ ಜನರ ಬದುಕು ಹಾಳು ಮಾಡುತ್ತಿವೆ. ಹೀಗಾಗಿ ವೆನಿಜುವೆಲಾ ರೀತಿಯಲ್ಲೇ ಈ ದೇಶಗಳ ಮೇಲೂ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಎಚ್ಚರಿಸಿದ್ದರು. ಜೊತೆಗೆ, ಕ್ಯೂಬಾದ ಪರಿಸ್ಥಿತಿಯೂ ಚೆನ್ನಾಗಿಲ್ಲ. ಅಲ್ಲಿನ ಜನ ಹಲವು ವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಕ್ಯೂಬಾ ಒಂದು ವಿಫಲ ರಾಷ್ಟ್ರ. ನಾವು ಕ್ಯೂಬಾದ ಜನರಿಗೆ ನೆರವಾಗಲು ಬಯಸಿದ್ದೇವೆ’ ಎಂದು ಟ್ರಂಪ್‌ ಮಾರ್ಮಿಕವಾಗಿ ಹೇಳಿದ್ದರು.

ಕ್ಯೂಬಾಗೆ ಹೊಡೆತ ಹೇಗೆ?:

ಕ್ಯೂಬಾ ತೈಲಕ್ಕೆ ವೆನಿಜುವೆಲಾನ್ನೇ ಆಧರಿಸಿದೆ. ಇದಕ್ಕೆ ಪ್ರತಿಯಾಗಿ ಅದು ವೆನಿಜುವೆಲಾಕ್ಕೆ ಸೇನಾ ನೆರವು ನೀಡುತ್ತಿತ್ತು. ಮತ್ತೊಂದೆಡೆ ಕ್ಯೂಬಾದ ಆರ್ಥಿಕ ಸ್ಥಿತಿ ಸರಿಯಿಲ್ಲ. ಕ್ಯೂಬಾಗೆ ವೆನೆಜುವೆಲಾದ ತೈಲ ನಿರ್ಬಂಧಿಸಿದರೆ ಭೀಕರವಾಗಿ ಪರಿಣಮಿಸಲಿದೆ. ಕಳೆದ ವರ್ಷದ ಜನವರಿ ಮತ್ತು ನವೆಂಬರ್ ನಡುವೆ, ವೆನಿಜುವೆಲಾದಿಂದ ಮಾಸಿಕ 27 ಸಾವಿರ ಬ್ಯಾರೆಲ್‌ ತೈಲ ಕ್ಯೂಬಾಗೆ ಹೋಗಿದೆ. ಕ್ಯೂಬಾದ ಶೇ.50ರಷ್ಟು ತೈಲ ಬೇಡಿಕೆಯನ್ನು ವೆನಿಜುವೆಲಾ ನೀಗಿಸುತ್ತದೆ.

ದಾಳಿಗೆ ಯೋಧರ ಮೂಗಲ್ಲಿ ರಕ್ತಸ್ರಾವ, ರಕ್ತವಾಂತಿ, ನಿಸ್ತೇಜ

ವಾಷಿಂಗ್ಟನ್: ‘ಜ.2ರ ತಡರಾತ್ರಿ ವೆನಿಜುವೆಲಾ ಮೇಲೆ ದಾಳಿ ಮಾಡಿದ ಅಮೆರಿಕ ಅತ್ಯಂತ ಶಕ್ತಿಶಾಲಿಯಾದ ರಹಸ್ಯ ಅಸ್ತ್ರ ಬಳಸಿತ್ತು. ಅದು ವೆನಿಜುವೆಲಾ ಸೈನಿಕರ ಮೂಗಿನಲ್ಲಿ ರಕ್ತ ಒಸರುವಂತೆ, ರಕ್ತ ಕಾರಿಕೊಳ್ಳುವಂತೆ ಮಾಡಿತು’ ಎಂದು ಸ್ವತಃ ವೆನಿಜುವೆಲಾದ ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

‘ನಾವು ಕಾವಲು ಕಾಯುತ್ತಿದ್ದೆವು, ಇದ್ದಕ್ಕಿದ್ದಂತೆ ನಮ್ಮ ಎಲ್ಲಾ ರಾಡಾರ್ ವ್ಯವಸ್ಥೆಗಳು ಸ್ಥಗಿತಗೊಂಡವು. ಮುಂದೆ ಒಂದರ ಹಿಂದೆ ಒಂದರಂತೆ ಬಹಳಷ್ಟು ಡ್ರೋನ್‌ಗಳು, ಸ್ವಲ್ಪ ಸಮಯದ ನಂತರ ಹತ್ತಾರು ಹೆಲಿಕಾಪ್ಟರ್‌ಗಳು ಬಂದವು. ನಮಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಅಮೆರಿಕ ಶಕ್ತಿಶಾಲಿಯಾದ ರಹಸ್ಯ ಶಸ್ತ್ರಾಸ್ತ್ರವನ್ನು ಬಳಸಿತ್ತು. ಅದರಿಂದ ನಮ್ಮ ಸೈನಿಕರ ಮೂಗಿನಲ್ಲಿ ರಕ್ತ ಒಸರತೊಡಗಿತು. ಬಾಯಲ್ಲಿಯೂ ರಕ್ತ ಬರಲಾರಂಭಿಸಿತು. ಕೊನೆಗೆ ಮಂಡಿಯೂರಬೇಕಾಯಿತು’ ಎಂದು ಸಂದರ್ಶನವೊಂದರಲ್ಲಿ ವೆನಿಜುವೆಲಾ ಸಿಬ್ಬಂದಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

World War 3: ಮೂರನೇ ಮಹಾಯುದ್ಧ ನಡೆದರೆ, ಯಾರು ಯಾರ ಪರವಾಗಿರುತ್ತಾರೆ, ಭಾರತದ ನಿಲುವೇನು?
YASH: 'ವಿಷಕಾರಿ' ಚಿತ್ರದಲ್ಲಿ ತಮ್ಮ ಇಮೇಜನ್ನೇ ಪಣಕ್ಕಿಟ್ಟ ಯಶ್..? ಕಾರಿನೊಳಗಿನ 'ಆ' ದೃಶ್ಯಕ್ಕೆ ಎದ್ದಿದೆ ಅಪಸ್ವರ..!