ಯುದ್ಧಕ್ಕೆ ಹೆಚ್ಚುವರಿ 18 ಲಕ್ಷ ಕೋಟಿ ರು. ಅನುದಾನಕ್ಕೆ ಟ್ರಂಪ್ ಸರ್ಕಾರ ಕೋರಿಕೆ

Kannadaprabha News   | Kannada Prabha
Published : Mar 21, 2026, 06:43 AM IST
Donald Trump

ಸಾರಾಂಶ

ಈಗಾಗಲೇ ಮೂರು ವಾರ ಪೂರೈಸಿರುವ ಇರಾನ್‌ ಮೇಲಿನ ಯುದ್ಧ ಇನ್ನೂ ಎಷ್ಟು ದಿನ ಮುಂದುವರೆಯಲಿದೆ ಎಂದು ಊಹಿಸಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಯುದ್ಧಕ್ಕಾಗಿ ಹೆಚ್ಚುವರಿ 18 ಲಕ್ಷ ಕೋಟಿ ರು. ಅನುದಾನ ಒದಗಿಸುವಂತೆ ಟ್ರಂಪ್ ಆಡಳಿತ ಸಂಸತ್ತಿನ ಮೊರೆ ಹೋಗಿದೆ.

ವಾಷಿಂಗ್ಟನ್‌: ಈಗಾಗಲೇ ಮೂರು ವಾರ ಪೂರೈಸಿರುವ ಇರಾನ್‌ ಮೇಲಿನ ಯುದ್ಧ ಇನ್ನೂ ಎಷ್ಟು ದಿನ ಮುಂದುವರೆಯಲಿದೆ ಎಂದು ಊಹಿಸಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಯುದ್ಧಕ್ಕಾಗಿ ಹೆಚ್ಚುವರಿ 18 ಲಕ್ಷ ಕೋಟಿ ರು. ಅನುದಾನ ಒದಗಿಸುವಂತೆ ಟ್ರಂಪ್ ಆಡಳಿತ ಸಂಸತ್ತಿನ ಮೊರೆ ಹೋಗಿದೆ.

ಯುದ್ಧಕ್ಕೆ ಹೆಚ್ಚುವರಿ ವೆಚ್ಚ ಮಾಡಲು ಸಂಸತ್‌ನ ಅನುಮತಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌, ಈಗಾಗಲೇ ಇಂಥದ್ದೊಂದು ಪ್ರಸ್ತಾವನೆಯನ್ನು ಅಮೆರಿಕದ ಸಂಸತ್ತಿಗೆ ರವಾನಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಈ ಬಗ್ಗೆ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ಅವರನ್ನು ಪ್ರಶ್ನಿಸಿದ ವೇಳೆ ನೇರ ಉತ್ತರದಿಂದ ಹಿಂದೆ ಸರಿದ ಹೆಗ್ಸೆತ್‌, ‘ಸಂಖ್ಯೆ ಬದಲಾಗಬಹುದು. ಕೆಟ್ಟ ವ್ಯಕ್ತಿಗಳನ್ನು ಹತ್ಯೆ ಮಾಡಲು ಸಾಕಷ್ಟು ಹಣ ಬೇಕಾಗುತ್ತದೆ. ಯುದ್ಧದಲ್ಲಿ ಭಾಗಿಯಾಗಿರುವ ನಮ್ಮ ಯೋಧರಿಗೆ ಅಗತ್ಯ ನೆರವಿಗಾಗಿ ನಾವು ಸಂಸತ್ತಿನ ಮುಂದೆ ಪ್ರಸ್ತಾವ ಇಡಲಿದ್ದೇವೆ’ ಎಂದಷ್ಟೇ ಹೇಳಿದ್ದಾರೆ.

ಇರಾನ್‌ ಮೇಲಿನ ಯುದ್ಧ ಸಾರಿದ್ದಕ್ಕೆ ಸ್ವತಃ ಟ್ರಂಪ್‌ ಆಪ್ತರು ಸೇರಿದಂತೆ ವಿಪಕ್ಷಗಳಿಂದ ಈಗಾಗಲೇ ಭಾರೀ ವಿರೋಧ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಯುದ್ಧ ಇನ್ನಷ್ಟು ದಿನ ವಿಸ್ತರಣೆಯಾಗುವ ಸಾಧ್ಯತೆ ಊಹಿಸಿರುವ ಪೆಂಟಗನ್‌, ಇಂಥದ್ದೊಂದು ಪ್ರಸ್ತಾಪ ಮುಂದಿಟ್ಟಿದೆ ಎನ್ನಲಾಗಿದೆ.

ಯುದ್ಧದ ಮೊದಲ ಮೂರು ವಾರಗಳಲ್ಲಿ ಅಮೆರಿಕ ಭಾರೀ ಪ್ರಮಾಣ ಯುದ್ಧ ಸಾಮಗ್ರಿಗಳನ್ನು ಕಳೆದುಕೊಂಡಿರುವುದು, ಅದರ ವೆಚ್ಚ ಮುಗಿಲು ಮುಟ್ಟುವಂತೆ ಮಾಡಿದೆ.

ಕೊಲ್ಲಿ ದೇಶಗಳಿಗೆ ಅಮೆರಿಕ ₹2 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆ

ವಾಷಿಂಗ್ಟನ್‌: ಇರಾನ್‌ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆಯೇ ಅರಬ್‌ ದೇಶಗಳಿಗೆ 2 ಲಕ್ಷ ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಮಾರಾಟ ಮಾಡಲು ಅಮೆರಿಕ ನಿರ್ಧರಿಸಿದೆ. ಈ ಕುರಿತು ಅದು ಸಂಸತ್ತಿಗೆ ಮಾಹಿತಿ ರವಾನಿಸಿದೆ. ಈ ಮಾಹಿತಿ ಅನ್ವಯ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ ಅಂದಾಜು 74000 ಕೋಟಿ ರು. ಮೌಲ್ಯದ ವಾಯುರಕ್ಷಣಾ ವ್ಯವಸ್ಥೆ, ಅದರ ಭಾಗವಾದ ಕ್ಷಿಪಣಿ, ಡ್ರೋನ್‌ ಮತ್ತು ಎಫ್‌ 16 ವಿಮಾನಗಳಲ್ಲಿ ಬಳಸುವ ಶಸ್ತ್ರಾಸ್ತ್ರಗಳು ಸೇರಿವೆ. ಕುವೈತ್‌ಗೆ 74000 ಕೋಟಿ ರು. ಮೌಲ್ಯದ ವಾಯರಕ್ಷಣಾ ವ್ಯವಸ್ಥೆ ಮತ್ತು ರಾಡಾರ್‌ ವ್ಯವಸ್ಥೆ, ಜೋರ್ಡಾನ್‌ಗೆ 750 ಕೋಟಿ ರು. ಮೌಲ್ಯದ ವಿಮಾನ ಮತ್ತು ಶಸ್ತ್ರಾಸ್ತ್ರ ಹಾಗೂ ಇತರೆ ಮೂರು ದೇಶಗಳಿಗೆ 55000 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿರುವುದಾಗಿ ಹೇಳಿದೆ.

ಅಮೆರಿಕದ ಶಸ್ತ್ರಾಸ್ತ್ರ ಸಂಗ್ರಹ ಭಾರೀ ಕುಸಿತ

ವಾಷಿಂಗ್ಟನ್‌: ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಮರ 21 ದಿನಗಳನ್ನು ಪೂರೈಸಿದೆ. ಈ ನಡುವೆ ಅಮೆರಿಕ ಸೇನೆಯು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದು, ವಿಶೇಷವಾಗಿ ಟೊಮಹಾಕ್ ಕ್ರೂಸ್ ಕ್ಷಿಪಣಿಗಳ ಸರಬರಾಜು ತೀವ್ರವಾಗಿ ಕಡಿಮೆಯಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.ಫೆ.28ರಂದು ಸಮರ ಆರಂಭಿಸಿದ ಮೊದಲ 72 ಗಂಟೆಗಳಲ್ಲಿ ಅಮೆರಿಕ ನೌಕಾಪಡೆಯು ಸುಮಾರು 400 ಟೊಮಹಾಕ್ ಕ್ಷಿಪಣಿಗಳನ್ನು ಬಳಸಿ ಇರಾನ್ ಮೇಲೆ ದಾಳಿ ನಡೆಸಿದೆ. ಇದು ಸಾಮಾನ್ಯವಾಗಿ 5 ವರ್ಷಗಳ ಉತ್ಪಾದನೆಗೆ ಸಮ. ಅಮೆರಿಕವು ವಾರ್ಷಿಕವಾಗಿ ಸುಮಾರು 90 ಕ್ಷಿಪಣಿಗಳನ್ನು ಮಾತ್ರ ಉತ್ಪಾದಿಸುತ್ತದೆ. 2025ರಲ್ಲಿ ಕೇವಲ 72ನ್ನು ತಯಾರಿಸಿದೆ.

ಸೀಮಿತ ಪೂರೈಕೆದಾರರು ಮತ್ತು ಘಟಕಗಳ ಕೊರತೆಯಿಂದಾಗಿ ಪ್ರತಿ ಕ್ಷಿಪಣಿ ತಯಾರಿಕೆಗೆ 18-24 ತಿಂಗಳು ಬೇಕಾಗುತ್ತದೆ.ಇನ್ನು, ಮಾ.2ರಂದು ಕುವೈತ್‌ನಲ್ಲಿ ಅಮೆರಿಕದ 3 ಎಫ್‌-15ಇ ಹಾಗೂ ಪಶ್ಚಿಮ ಇರಾಕ್‌ನಲ್ಲಿ ಕೆಸಿ-135 ಸೇರಿ ಡಜನ್‌ಗೂ ಹೆಚ್ಚು ಯುದ್ಧವಿಮಾನಗಳು ನಾಶವಾಗಿವೆ. ಇದು ಅಮೆರಿಕಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದು ವಾರದ ನಂತರ ಸ್ಮಾರ್ಟ್ ಮಿಸೈಲ್ ಇಂಟರ್‌ಸೆಪ್ಟರ್‌ಗಳಲ್ಲಿ ಗಂಭೀರ ಕೊರತೆ ಉಂಟಾಗಬಹುದು ಎಂದೂ ತಜ್ಞರು ಎಚ್ಚರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕತಾರ್‌, ಒಮಾನ್‌ ಸೇರಿ 5 ದೇಶದ ನಾಯಕರ ಜತೆ ಮೋದಿ ಫೋನ್‌ ಮಾತು
ಅಮೆರಿಕದ ಪ್ರತಿಷ್ಠೆ ಎಫ್‌ 35ಗೆ ಇರಾನ್‌ ಪೆಟ್ಟು!