ಅಮೆರಿಕದ ಪ್ರತಿಷ್ಠೆ ಎಫ್‌ 35ಗೆ ಇರಾನ್‌ ಪೆಟ್ಟು!

Kannadaprabha News   | Kannada Prabha
Published : Mar 21, 2026, 06:30 AM IST
F 35

ಸಾರಾಂಶ

ಯಾರೂ ದಾಳಿ ಮಾಡಲಾಗದ, ಯಾರ ಕಣ್ಣಿಗೂ ಕಾಣದ ವಿಶ್ವದ ಅತ್ಯಾಧುನಿಕ ಸ್ಟೆಲ್ತ್‌ ವಿಮಾನ, ಅಮೆರಿಕದ ಪ್ರತಿಷ್ಠೆ ಎಂಬೆಲ್ಲಾ ಹಿರಿಮೆಗೆ ಪಾತ್ರವಾಗಿದ್ದ ಎಫ್‌ 35 ಲೈಟ್ನಿಂಗ್‌ 2 ವಿಮಾನದ ಮೇಲೆ ದಾಳಿ ನಡೆಸುವಲ್ಲಿ ಇರಾನ್‌ ಯಶಸ್ವಿಯಾಗಿದೆ.

ದುಬೈ: ಯಾರೂ ದಾಳಿ ಮಾಡಲಾಗದ, ಯಾರ ಕಣ್ಣಿಗೂ ಕಾಣದ ವಿಶ್ವದ ಅತ್ಯಾಧುನಿಕ ಸ್ಟೆಲ್ತ್‌ ವಿಮಾನ, ಅಮೆರಿಕದ ಪ್ರತಿಷ್ಠೆ ಎಂಬೆಲ್ಲಾ ಹಿರಿಮೆಗೆ ಪಾತ್ರವಾಗಿದ್ದ ಎಫ್‌ 35 ಲೈಟ್ನಿಂಗ್‌ 2 ವಿಮಾನದ ಮೇಲೆ ದಾಳಿ ನಡೆಸುವಲ್ಲಿ ಇರಾನ್‌ ಯಶಸ್ವಿಯಾಗಿದೆ. ಕಳೆದ 3 ವಾರಗಳಿಂದ ಸತತವಾಗಿ ಅಮೆರಿಕದ ರಾಡಾರ್‌ಗಳು, ಅತ್ಯಾಧುನಿಕ ವಿಮಾನ, ಯುದ್ಧ ನೌಕೆಗಳ ಮೇಲೆ ತನ್ನ ಅಗ್ಗದ ದರದ ಡ್ರೋನ್‌, ಕ್ಷಿಪಣಿ ಮೂಲಕ ಯಶಸ್ವಿಯಾಗಿ ದಾಳಿ ನಡೆಸುತ್ತಿದ್ದ ಇರಾನ್‌ ಇದೀಗ ಎಫ್‌ 35 ಮೇಲೆ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದೆ. ಇದು ಅಮೆರಿಕದ ಪ್ರತಿಷ್ಠೆಗೆ ಬಿದ್ದ ದೊಡ್ಡ ಪೆಟ್ಟು ಎನ್ನಲಾಗಿದೆ.

5ನೇ ತಲೆಮಾರಿನ ಅಂದಾಜು 950 ಕೋಟಿ ರು. ಬೆಲೆಬಾಳುವ ವಿಮಾನ

5ನೇ ತಲೆಮಾರಿನ ಅಂದಾಜು 950 ಕೋಟಿ ರು. ಬೆಲೆಬಾಳುವ ವಿಮಾನದ ಮೇಲಿನ ದಾಳಿ, ಇದೇ ಮೊದಲು ಎಂಬುದು ವಿಶೇಷ. ಆದರೆ, ವಿಮಾನ ಪತನದಿಂದ ಪಾರಾಗಿದ್ದು, ಯುದ್ಧ ಪ್ರದೇಶದಿಂದ ಸುರಕ್ಷಿತವಾಗಿ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಸೇನಾ ನೆಲೆಗೆ ಸುರಕ್ಷಿತವಾಗಿ ಮರಳಿದೆ. ಪೈಲಟ್‌ ಸುರಕ್ಷಿತವಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಮೆರಿಕ ಹೇಳಿದೆ. ಜೊತೆಗೆ ಇರಾನ್ ದಾಳಿಯಿಂದ ವಿಮಾನಕ್ಕೆ ಪೆಟ್ಟು ಬಿದ್ದಿದೆ ಎಂದು ಅಮೆರಿಕ ಪ್ರಕಟಿಸಿಲ್ಲ.

ಆದರೆ ವಿಮಾನದ ಮೇಲಿನ ದಾಳಿಯದ್ದು ಎನ್ನಲಾದ ವಿಡಿಯೋವೊಂದನ್ನು ಇರಾನ್‌ ಬಿಡುಗಡೆ ಮಾಡುವ ಮೂಲಕ ‘ನಾವು ಎಫ್‌ 35 ಮೇಲೆ ಯಶಸ್ವಿಯಾಗಿ ದಾಳಿ ನಡೆಸಿದ್ದೇವೆ. ಎಫ್‌ 35 ಕೇವಲ ಯುದ್ಧ ವಿಮಾನವಲ್ಲ. ಅದು ಅಮೆರಿಕ ಸೇನೆಯ ಸೋಲರಿಯದ ಮತ್ತು ಅಹಂಕಾರದ ಪ್ರತೀಕವಾಗಿತ್ತು. ಅದು ಯಾರ ಕಣ್ಣಿಗೂ ಬೀಳದು, ಯಾವುದೇ ಶಕ್ತಿಗೂ ಅತೀತವಾದುದ್ದು ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ದೇವರ ಕೈ ಅವರಿಗಿಂಲೂ ಮೇಲು ಎಂಬುದು ಇಂದು ಸಾಬೀತಾಗಿದೆ’ ಹೇಳಿದೆ.

ಯಾಕಿಷ್ಟು ಮಹತ್ವ?:

ಬಾಹ್ಯಾಕಾಶದಲ್ಲಿ ತನ್ನ ಮತ್ತು ತನ್ನ ಮಿತ್ರ ದೇಶಗಳ ಪಾರಮ್ಯಕ್ಕೆಂದೇ ಅಮೆರಿಕ ಈ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನ ಅಭಿವೃದ್ಧಿಪಡಿಸಿತ್ತು. ಲಾಕ್‌ಹೀಡ್‌ ಮಾರ್ಟೀನ್‌ ಅಭಿವೃದ್ಧಿಪಡಿಸಿದ ತಲಾ 950 ಕೋಟಿ ರು.ವೆಚ್ಚದ ವಿಮಾನ ವಿಶೇಷ, ಅತ್ಯಾಧುನಿಕ ಸ್ಟೆಲ್ತ್‌ ತಂತ್ರಜ್ಞಾನ ಹೊಂದಿದೆ. ಹೀಗಾಗಿ ವಿಶ್ವದ ಯಾವುದೇ ರಾಡಾರ್‌ ವ್ಯವಸ್ಥೆ ಕಣ್ತಪ್ಪಿಸಿ ಆ ದೇಶದೊಳಗೆ ನುಗ್ಗಿ ದಾಳಿ ಮಾಡಿ ಮರಳಬಲ್ಲದು ಎಂಬ ಹಿರಿಮೆ ಇದಕ್ಕಿತ್ತು. ವಿಶ್ವದಲ್ಲಿ ಮತ್ತೊಂದು ಇಂಥ ಯುದ್ಧ ವಿಮಾನ ಇಲ್ಲ ಎಂದೆಲ್ಲಾ ಬಣ್ಣಿಸಲಾಗಿತ್ತು. ಅಮೆರಿಕ ಸೇನೆ ಇದನ್ನು ತನ್ನ ಪ್ರತಿಷ್ಠೆ ಎಂದೇ ಹೇಳಿಕೊಳ್ಳುತ್ತಿತ್ತು.

ಹಿರಿಮೆ ಏನು?

ಯುದ್ಧ ವಿಮಾನದ ವಿನ್ಯಾಸ ಮತ್ತು ರಾಡಾರ್‌ಗಳ ತರಂಗಾಂತರಗಳನ್ನು ಹೀರಿಕೊಳ್ಳುವ ವಿಶಿಷ್ಟ ಗುಣ ಇದನ್ನು ಇತರೆ ಯುದ್ಧ ವಿಮಾನಕ್ಕಿಂತ ಭಿನ್ನ ಮಾಡಿತ್ತು. ಜೊತೆಗೆ ವಿಮಾನ ಮತ್ತು ಭೂಮಿಯಲ್ಲಿ ಇರುವ ಸೆನ್ಸರ್‌ಗಳ ಮೂಲಕ ಸಂಗ್ರಹಿಸಿದ ಯುದ್ಧ ಭೂಮಿಯ ಎಲ್ಲಾ ಮಾಹಿತಿ ಕ್ರೋಡೀಕರಿಸಿ ಕ್ಷಣಾರ್ಧದಲ್ಲಿ ಪೈಲಟ್‌ಗೆ ನೀಡುವ ಮೂಲಕ ಯಾವುದೇ ಸನ್ನಿವೇಶ ಎದುರಿಸುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಮಧ್ಯಪ್ರಾಚ್ಯ ಯುದ್ಧದಲ್ಲಿ ಅಣ್ವಸ್ತ್ರ ಬಳಕೆ?

ಜಿನೀವಾ: ಮಧ್ಯಪ್ರಾಚ್ಯ ಯುದ್ಧದಲ್ಲಿ ಭಾಗಿಯಾಗಿರುವ ದೇಶಗಳು ತಮ್ಮಲ್ಲಿರುವ ಅತ್ಯಾಧುನಿಕ ಅಸ್ತ್ರಗಳನ್ನು ಹೊರತೆಗೆಯುತ್ತಿರುವ ನಡುವೆ, ವಿಶ್ವ ಆರೋಗ್ಯ ಸಂಸ್ಥೆಯು ಪರೋಕ್ಷವಾಗಿ ಪರಮಾಣು ಕಳವಳ ವ್ಯಕ್ತಪಡಿಸಿದೆ. ಅಣು ದಾಳಿಯಂತಹ ಸಂದರ್ಭವನ್ನು ಎದುರಿಸಲು ತಾನು ಸಿದ್ಧತೆ ನಡೆಸುತ್ತಿರುವುದಾಗಿ ಅದು ಹೇಳಿದೆ.

ಈ ಬಗ್ಗೆ ಡಬ್ಲ್ಯುಎಚ್‌ಒನ ಸ್ಥಳೀಯ ನಿರ್ದೇಶಕರು ಮಾತನಾಡಿದ್ದು, ‘ಈ ಯುದ್ಧದಲ್ಲಾಗಬಹುದಾದ ಅತಿ ಕೆಟ್ಟ ಸನ್ನಿವೇಶವೆಂದರೆ ಅದು ಅಣ್ವಸ್ತ್ರದ ಬಳಕೆ ಅಥವಾ ಅಣು ಕೇಂದ್ರಗಳ ಮೇಲಿನ ದಾಳಿ. ಆ ಬಗ್ಗೆ ನಮ್ಮ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಅದನ್ನೆದುರಿಸಲು ನಾವು ತಯಾರಾಗುತ್ತಿದ್ದರೂ, ಆಗಬಹುದಾದ ಹಾನಿಯನ್ನಂತೂ ತಡೆಯಲಾಗದು. ಜಾಗತಿಕವಾಗಿ ಇಂತಹ ದಾಳಿಗಳು ಮುಂದುವರೆದರೆ ಅದರ ಪರಿಣಾಮ ದಶಕಗಳ ಕಾಲ ಉಂಟಾಗಲಿದೆ. ಹಾಗಾಗದಿರಲಿ ಎಂಬುದೇ ನಮ್ಮ ಹಾರೈಕೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ, ತಮ್ಮ ಸಿಬ್ಬಂದಿಗೆ ಪರಿಸ್ಥತಿಯನ್ನು ನಿಭಾಯಿಸಲು ಸೂಕ್ತ ತರಬೇತಿಯನ್ನೂ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಯುದ್ಧದಿಂದ ಬಚಾವ್‌ಗೆ ನೌಕೆಗೆ ಅಮೆರಿಕ ಯೋಧರಿಂದಲೇ ಬೆಂಕಿ?

ವಾಷಿಂಗ್ಟನ್‌: ವಿಶ್ವದ ಅತ್ಯಂತ ದೊಡ್ಡ ಯುದ್ಧನೌಕೆಗಳ ಪೈಕಿ ಒಂದಾದ ಅಮೆರಿಕದ ಜೆರಾಲ್ಡ್‌ ಆರ್‌ ಫೋರ್ಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡ ಮತ್ತು ಕೆಲ ದಿನಗಳ ಹಿಂದೆ ಇದೇ ನೌಕೆಯ ಶೌಚಾಲಯದಲ್ಲಾದ ಸಮಸ್ಯೆ ಯೋಧರ ಉದ್ದೇಶ ಪೂರ್ವಕ ಕೃತ್ಯವೇ? ಇಂಥದ್ದೊಂದು ಅನುಮಾನ ಇದೀಗ ವ್ಯಕ್ತವಾಗಿದೆ.ಸಾಮಾನ್ಯವಾಗಿ ಇಂತಹ ನೌಕೆಗಳಲ್ಲಿರುವ ಸಿಬ್ಬಂದಿ 6-7 ತಿಂಗಳು ಸಮುದ್ರದ ನಡುವಲ್ಲಿರುತ್ತಾರೆ. ಆದರೆ ಫೋರ್ಡ್‌ನಲ್ಲಿರುವ ಸಿಬ್ಬಂದಿ 10 ತಿಂಗಳಿಂದ ಕೆಂಪು ಸಮುದ್ರದಲ್ಲಿ ಬೀಡು ಬಿಟ್ಟಿದ್ದು, ಸದ್ಯ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಸದ್ಯಕ್ಕೆ ಮರಳುವುದು ಅಸಾಧ್ಯ. ಹೀಗಿರುವಾಗ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಿ, ಹೇಗಾದರೂ ದಡ ಸೇರಲು ಮತ್ತು ಯದ್ಧದಲ್ಲಿ ನಿಯೋಜನೆ ತಪ್ಪಿಸಿಕೊಳ್ಳಲು ನೌಕೆಗೇ ಹಾನಿ ಮಾಡಿರುವ ಸಂಭವವಿದೆ.

ಇದಕ್ಕೆ ಪುಷ್ಟಿ ಕೊಡುವಂತೆ, ಶೌಚಾಲಯಗಳು ಬ್ಲಾಕ್‌ ಆಗಿದ್ದಾಗ ಅದರಲ್ಲಿ ಟಿ-ಶರ್ಟ್‌ನಂತಹ ಬಟ್ಟೆಗಳು ಸಿಕ್ಕಿದ್ದವು. ಆ ಸಮಸ್ಯೆಯನ್ನು ನಡುನೀರಲ್ಲೇ ಸರಿಪಡಿಸಲಾಗಿತ್ತು. ಆದ್ದರಿಂದ ಇನ್ನೂ ಕುಗ್ಗಿದ ಸಿಬ್ಬಂದಿ ತಮ್ಮತಮ್ಮ ಹಾಸಿಗೆಗಳಿಗೆ ಬೆಂಕಿ ಹಚ್ಚಿ, ಅಲ್ಲಿ ಇರುವ ಸಾಧ್ಯವೇ ಇಲ್ಲವಾಗುವಂತಹ ಪರಿಸ್ಥಿತಿ ನಿರ್ಮಿಸಿಕೊಂಡರೇ ಎಂಬ ಶಂಕೆಯೀಗ ವ್ಯಕ್ತವಾಗುತ್ತಿದೆ. ಸದ್ಯ ನೌಕೆಯು ರಿಪೇರಿಗಾಗಿ ಗ್ರೀಸ್‌ ಕಡೆ ಹೊರಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ನ್ಯಾಟೋ’ ರಾಷ್ಟ್ರಗಳು ಹೇಡಿಗಳು : ಟ್ರಂಪ್‌ ಚಾಟಿ
ಇರಾನ್‌ ಯುದ್ಧದಿಂದ ರಷ್ಯಾಗೆ ಭಾರೀ ಲಾಭ ! - ‘ವೈರಿ’ ರಷ್ಯಾದ ತೈಲ ಖರೀದಿಗೆ ಟ್ರಂಪ್‌ ಅಸ್ತು