ಬ್ರಿಟನ್‌ ವೈರಾಣುಗಿಂತ ಭಾರತದ ಡೆಲ್ಟಾ ವೈರಸ್‌ ಭಾರಿ ಡೇಂಜರ್‌!

By Kannadaprabha NewsFirst Published Jun 5, 2021, 7:38 AM IST
Highlights

* ಬ್ರಿಟನ್‌ನ ಆಲ್ಫಾ ರೂಪಾಂತರಿಗಿಂತ 50% ಅಪಾಯಕಾರಿ ಡೆಲ್ಟಾ ವೈರಸ್‌

* ಕೇಂದ್ರ ಸರ್ಕಾರದ ನಡೆಸಿದ ಅಧ್ಯಯನದಿಂದ ಬೆಳಕಿಗೆ

* ಡೆಲ್ಟಾದಿಂದಲೇ ಭಾರತದಲ್ಲಿ 2ನೇ ಅಲೆ ತೀವ್ರ: ಅಧ್ಯಯನ

ನವದೆಹಲಿ(ಜೂ.05):  ಭಾರತದಲ್ಲೇ ಮೊದಲ ಬಾರಿಗೆ ಪತ್ತೆಯಾದ ಕೊರೋನಾದ ರೂಪಾಂತರಿ ತಳಿ (ಬಿ.1.617.2)ಯಾದ ಡೆಲ್ಟಾ, ಬ್ರಿಟನ್‌ನ ರೂಪಾಂತರಿ ತಳಿ (ಆಲ್ಫಾ)ಗಿಂತ ಹೆಚ್ಚು ಸೋಂಕುಕಾರಕ. ದೇಶದಲ್ಲಿ 2ನೇ ಅಲೆಗೆ ಇದೇ ಪ್ರಮುಖ ಕಾರಣ ಎಂದು ಭಾರತ ಸರ್ಕಾರವೇ ನಡೆಸಿದ ಅಧ್ಯಯನ ತಿಳಿಸಿದೆ.

ದೇಶದಲ್ಲಿ 2ನೇ ಅಲೆಗೆ ಕಾರಣವೇನು ಎಂಬುದರ ಬಗ್ಗೆ ಅಧ್ಯಯನ ನಡೆದ ವೇಳೆ, ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಡೆಲ್ಟಾಎಂದು ಹೆಸರಿಸಲ್ಪಟ್ಟ(ಬಿ.1.617.2) ರೂಪಾಂತರಿ ತಳಿಯು ಆಲ್ಫಾಗಿಂತ ಶೇ.50ರಷ್ಟುಹೆಚ್ಚು ಅಪಾಯಕಾರಿ ಎಂದು ಕಂಡುಬಂದಿದೆ.

ಸರ್ಕಾರದ ಅಧೀನದ ‘ಇಂಡಿಯನ್‌ ಸಾರ್ಸ್‌ ಕೋವ್‌2 ಜಿನೋಮಿಕ್‌ ಕನ್ಸೋರ್‍ರ್ಷಿಯಾ’ ಮತ್ತು ‘ನ್ಯಾಷನಲ್‌ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌’ ಸಂಸ್ಥೆಗಳು ನಡೆಸಿದ ಅಧ್ಯಯನ ಈ ಅಂಶಗಳನ್ನು ಪತ್ತೆ ಮಾಡಿದೆ.

‘ಬ್ರಿಟನ್‌ನ ಕೆಂಟ್‌ನಲ್ಲಿ ಮೊದಲಿಗೆ ಪತ್ತೆಯಾದ ಆಲ್ಫಾ ತಳಿಗಿಂತ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾತಳಿ ಹೆಚ್ಚು ಸಾಂಕ್ರಾಮಿಕ ಮತ್ತು ಸೋಂಕುಕಾರಕವಾಗಿದೆ. ಅದರಲ್ಲೂ ಆಲ್ಫಾಗಿಂತ ಡೆಲ್ಟಾಶೇ.50ರಷ್ಟುಹೆಚ್ಚು ಸೋಂಕುಕಾರಕ. ಇದು ಅತ್ಯಂತ ವೇಗವಾಗಿ ಹರಡುತ್ತಿರುವ ಕಾರಣವೇ ದೇಶದಲ್ಲಿ 2ನೇ ಅಲೆ ಕಾಣಿಸಿಕೊಂಡಿದೆ’ ಎಂದು ಅಧ್ಯಯನ ವರದಿ ಹೇಳಿದೆ.

ಆದರೆ 2ನೇ ಅಲೆ ದೇಶದಲ್ಲಿ ಹೆಚ್ಚಿನ ಸಾವು ಪ್ರಮಾಣ ತೀವ್ರವಾಗಿರುವುದಕ್ಕೆ ಡೆಲ್ಟಾವೈರಸ್ಸೇ ಕಾರಣ ಎಂಬುದು ಇನ್ನೂ ಸಾಬೀತಾಗಬೇಕಿದೆ ಎಂದು ವರದಿ ಹೇಳಿದೆ.

12,200 ತಳಿ:

ತಳಿ ಅಧ್ಯಯನದ ವೇಳೆ, ಪ್ರಸಕ್ತ ದೇಶದಲ್ಲಿ 12200ಕ್ಕೂ ಹೆಚ್ಚು ಕೊರೋನಾದ ರೂಪಾಂತರಿ ತಳಿಗಳು ಪತ್ತೆಯಾಗಿವೆ. ಆದರೆ ಈ ಪೈಕಿ ಡೆಲ್ಟಾಹೊರತುಪಡಿಸಿದರೆ ಉಳಿದೆಲ್ಲಾ ತಳಿಗಳ ಪ್ರಮಾಣ ನಗಣ್ಯ ಎಂದು ವರದಿ ಹೇಳಿದೆ.

ಎಲ್ಲಿ ಡೆಲ್ಟಾ ದಾಳಿ?:

2ನೇ ಅಲೆ ವೇಳೆ ಹೆಚ್ಚು ಸಂಕಷ್ಟಕ್ಕೆ ಗುರಿಯಾದ ದೆಹಲಿ, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣದಲ್ಲಿ ಡೆಲ್ಟಾತಳಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ವರದಿ ಹೇಳಿದೆ.

ಲಸಿಕೆ ಬಳಿಕವೂ ಮಾರಕ:

ಇನ್ನು ಲಸಿಕೆ ಪಡೆದ ಬಳಿಕವೂ ಸೋಂಕಿಗೆ ತುತ್ತಾಗುವಂತೆ ಮಾಡುವುದರಲ್ಲೂ ಡೆಲ್ಟಾವೈರಸ್‌ನ ಪಾತ್ರ ಅತ್ಯಂತ ದೊಡ್ಡದಿರುವುದು ಕಂಡುಬಂದಿದೆ. ಆದರೆ ಆಲ್ಫಾ ವೈರಸ್‌ನಲ್ಲಿ ಇಂಥ ಪಾತ್ರ ಬೆಳಕಿಗೆ ಬಂದಿಲ್ಲ ಎಂದು ವರದಿ ಹೇಳಿದೆ.

 

click me!