* ಫ್ರೆಂಚ್ ಮಾಧ್ಯಮದ ಸ್ಫೋಟಕ ‘ತನಿಖಾ ವರದಿ’
* ಮಧ್ಯವರ್ತಿ ಗುಪ್ತಾಗೆ 65 ಕೋಟಿ ಲಂಚ ನೀಡಿದ್ದ ಡಸಾಲ್ಟ್
* ಸುಳ್ಳು ಇನ್‌ವಾಯ್‌್ಸಗಳನ್ನು ಸಕ್ರಮಗೊಳಿಸಲು ಲಂಚ ನೀಡಿಕೆ
* 2018ರಲ್ಲಿ ಈ ಬಗ್ಗೆ ಅಧಿಕೃತ ದೂರು, ಸಿಬಿಐಗೆ ದಾಖಲೆಯೂ ಲಭ್ಯ
ನವದೆಹಲಿ(ನ.10): ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ನಡುವೆ ಕಳೆದ ಲೋಕಸಭೆ ಚುನಾವಣೆಯಲ್ಲಿ ತೀವ್ರ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿದ್ದ ‘ರಫೇಲ್ ಯುದ್ಧವಿಮಾನ’ ಹಗರಣದ ಭೂತ ಈಗ ಮತ್ತೆ ಎದ್ದಿದೆ. ರಫೇಲ್ ಯುದ್ಧವಿಮಾನ ತಯಾರಕ ಫ್ರಾನ್ಸ್‌ನ ಡಸಾಲ್ಟ್ ಕಂಪನಿಯು ಸುಳ್ಳು ಇನ್‌ವಾಯ್‌್ಸಗಳನ್ನು ಸೃಷ್ಟಿಸಿ 65 ಕೋಟಿ ರು. ಲಂಚವನ್ನು ಮಧ್ಯವರ್ತಿಯೊಬ್ಬನಿಗೆ ನೀಡಿತ್ತು. ಈ ಕುರಿತ ದಾಖಲೆಗಳು ಲಭ್ಯ ಇದ್ದರೂ ಭಾರತದ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು (ಇ.ಡಿ.) ತನಿಖೆಗೆ ನಿರಾಕರಿಸಿದ್ದವು ಎಂದು ಫ್ರೆಂಚ್ ಆನ್‌ಲೈನ್ ಮಾಧ್ಯಮವಾದ ‘ಮೀಡಿಯಾಪಾರ್ಟ್’ ಗಂಭೀರ ಆರೋಪ ಮಾಡಿದೆ.
‘ಮೀಡಿಯಾಪಾರ್ಟ್’ ಮಾಧ್ಯಮವು 59 ಸಾವಿರ ಕೋಟಿ ರು. ಮೌಲ್ಯದ 36 ರಫೇಲ್ ಯುದ್ಧವಿಮಾನ ಖರೀದಿ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖಾ ವರದಿಗಳನ್ನು ಪ್ರಕಟಿಸುತ್ತಿದ್ದು, ತನ್ನ ಹೊಸ ವರದಿಯಲ್ಲಿ ಈ ಸ್ಫೋಟಕ ವಿಷಯವನ್ನು ಹೇಳಿದೆ.
ಸುಶೇನ್ ಗುಪ್ತಾ ಎಂಬಾತ ಈ ಹಗರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಅಗತ್ಯಕ್ಕಿಂತ ಹೆಚ್ಚು ಬೆಲೆಯನ್ನು ವಿಮಾನಗಳಿಗೆ ನಿಗದಿಪಡಿಸಿ ಸುಳ್ಳು ಇನ್‌ವಾಯ್‌್ಸಗಳನ್ನು ಸೃಷ್ಟಿಸಿದ್ದ ಡಸಾಲ್ಟ್ ಕಂಪನಿಯು ಸುಶೇನ್ ಗುಪ್ತಾ ಮೂಲಕ ರಫೇಲ್ ಡೀಲ್ ಕುದುರಿಸಿತ್ತು. 2018ರ ಅ.11ರಂದು, ‘ಅಕ್ರಮ ನಡೆದಿದೆ’ ಎಂಬ ಅಧಿಕೃತ ದೂರು ಸಿಬಿಐ ಮುಂದೆ ಬಂದಿತ್ತು. ಇದಾದ 1 ವಾರದ ಬಳಿಕ ಈ ಅಕ್ರಮದ ದಾಖಲೆಗಳು ಹಾಗೂ ಲಂಚ ನೀಡಿಕೆಯ ಮಾಹಿತಿ ಸಿಬಿಐ ಹಾಗೂ ಇ.ಡಿ.ಗೆ ಲಭ್ಯವಾಗಿದ್ದವು. ಆದರೂ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲು ಅವು ನಿರಾಕರಿಸಿದವು ಎಂದು ‘ಮೀಡಿಯಾಪಾರ್ಟ್’ ವರದಿ ವಿವರಿಸಿದೆ.
‘ಅಗಸ್ಟಾವೆಸ್ಟ್‌ಲ್ಯಾಂಡ್ ಹಗರಣದ ತನಿಖೆ ನಡೆಸುವಾಗ ರಹಸ್ಯ ದಾಖಲೆಗಳಲ್ಲಿ ಹಗರಣದ ಅಂಶಗಳು ಸಿಬಿಐ ಹಾಗೂ ಇ.ಡಿ.ಗೆ ಲಭ್ಯವಾಗಿದ್ದವು ಎಂದಿರುವ ‘ಮೀಡಿಯಾಪಾರ್ಟ್’, 2013ರ ಮೊದಲೇ (2008ರಿಂದ 2012ರ ನಡುವೆ) ಲಂಚದ ವ್ಯವಹಾರ ನಡೆದಿತ್ತು. ಈ ಅವಧಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ, 2015ರಲ್ಲಿ ಡೀಲ್‌ಗೆ ಅಂತಿಮ ಮುದ್ರೆ ಬಿದ್ದಾಗ ನಡೆದಿದೆ ಎನ್ನಲಾದ ಶಂಕಾಸ್ಪದ ಚಟುವಟಿಕೆಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರದಲ್ಲಿತ್ತು’ ಎಂದು ವರದಿ ಹೇಳಿದೆ.
ಇದೇ ಅಗಸ್ಟಾ ಹಗರಣದಲ್ಲಿ ಕೂಡ ಸುಶೇನ್ ಗುಪ್ತಾ ಆರೋಪಿಯಾಗಿದ್ದಾನೆ.
ಚೀನಾ ಗಡಿಯಲ್ಲಿ ಭಾರತದ ರಫೇಲ್
ಚೀನಾದ ಗಡಿ ಹಂಚಿಕೊಳ್ಳುವ ಸಿಕ್ಕಿಂ-ಭೂತಾನ್ ಮತ್ತು ಟಿಬೆಟ್‌ನ ತೀರಾ ಹತ್ತಿರಕ್ಕೆ ಹೊಚ್ಚ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ರಫೇಲ್ ಯುದ್ಧ ವಿಮಾನಗಳನ್ನು ಭಾರತ ಸರ್ಕಾರ ನಿಯೋಜನೆ ಮಾಡಿದೆ.
ಭಾರತದ ವಾಯುಪಡೆಗೆ ಹೋಲಿಸಿದರೆ ಚೀನಾ ಭಾರತಕ್ಕಿಂತ ಎಲ್ಲದರಲ್ಲೂ ಪ್ರಬಲವಾಗಿದೆ. ಅಲ್ಲದೆ ಕಳೆದ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಉದ್ಭವಿಸಿದ ಲಡಾಖ್ ಬಿಕ್ಕಟ್ಟು ಬಳಿಕ ಹೋಟನ್, ಕಾಶ್ಗರ್, ಗರ್ಗುನ್ಸಾ, ಲಾಸ-ಗಾಂಗ್ಗರ್ ಮತ್ತು ಶಿಗೆಟ್ಸೆ ರೀತಿಯ ವಾಯುನೆಲೆಗಳನ್ನು ಚೀನಾ ಉನ್ನತೀಕರಿಸಿಕೊಂಡಿದೆ. ಆದರೆ ಈ ವ್ಯಾಪ್ತಿಯಲ್ಲಿರುವ ವಿಭಿನ್ನ ಭೂಪ್ರದೇಶವು ವಾಯುದಾಳಿ ಮತ್ತು ಭೂಸೈನ್ಯದ ದಾಳಿಗೆ ಭಾರತಕ್ಕೆ ಹೆಚ್ಚು ಅನುಕೂಲಕರವಾಗಿದೆ.
ಆಮ್ಲಜನಕದ ತೀವ್ರ ಕೊರತೆ ಮತ್ತು ಇಕ್ಕಟ್ಟಿನ ಗುಡ್ಡಗಾಡು ಮತ್ತು ಅತಿ ಎತ್ತರದ ಈ ಪ್ರದೇಶಗಳಲ್ಲಿ ಚೀನಾದ ಸೈನ್ಯಕ್ಕೆ ಹೆಚ್ಚಿನ ಯುದ್ಧೋಪಕರಣ ಮತ್ತು ಶಸ್ತ್ರಾಸ್ತ್ರಗಳ ಸಾಗಣೆಗೆ ಪೂರಕವಾಗಿಲ್ಲ. ಆದರೆ ಭಾರತವು ಮಿರಾಜ್-2000, ಮಿಗ್-29 ಮತ್ತು ಸುಖೋಯ್-30 ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಅಲ್ಲದೆ ಇದೀಗ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿದೆ.
2016ರಲ್ಲಿ ಭಾರತ ಫ್ರಾನ್ಸ್‌ನಿಂದ 59 ಸಾವಿರ ಕೋಟಿ ರು. ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಈ ಪೈಕಿ 26 ಯುದ್ಧ ವಿಮಾನಗಳು ಭಾರತದ ವಾಯುಪಡೆ ಬತ್ತಳಿಕೆಯಲ್ಲಿವೆ. ಉಳಿದ 10 ಯುದ್ಧ ವಿಮಾನಗಳು ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಭಾರತಕ್ಕೆ ಆಗಮಿಸಲಿವೆ.