ಕೊರೊನಾ : ವಿಶ್ವಕ್ಕೆ ಈಗಲೂ ಡೆಲ್ಟಾ ಕಂಟಕ

By Kannadaprabha News  |  First Published Nov 12, 2021, 9:11 AM IST
  •  ದೇಶದಲ್ಲಿ ಕೊರೋನಾ ಎರಡನೇ ಅಲೆಯನ್ನು ಸೃಷ್ಟಿಸಿ ಭಾರಿ ಸಾವು- ನೋವು ತಂದೊಡ್ಡಿದ ಕೊರೋನಾದ ರೂಪಾಂತರಿ
  • ಡೆಲ್ಟಾತಳಿ ಈಗಲೂ ಅಪಾಯಕಾರಿಯಾಗಿಯೇ ಇದೆ. ಇನ್ನಿತರೆ ರೂಪಾಂತರಿಗಳ ಅಪಾಯ ಕ್ಷೀಣಿಸಿದೆ 

 ನವದೆಹಲಿ (ನ.12): ದೇಶದಲ್ಲಿ ಕೊರೋನಾ (Corona) ಎರಡನೇ ಅಲೆಯನ್ನು ಸೃಷ್ಟಿಸಿ ಭಾರಿ ಸಾವು- ನೋವು ತಂದೊಡ್ಡಿದ ಕೊರೋನಾದ ರೂಪಾಂತರಿ ಡೆಲ್ಟಾ ತಳಿ (Delta) ಈಗಲೂ ಅಪಾಯಕಾರಿಯಾಗಿಯೇ ಇದೆ. ಇನ್ನಿತರೆ ರೂಪಾಂತರಿಗಳ ಅಪಾಯ ಕ್ಷೀಣಿಸಿದೆ ಎಂದು 28 ರಾಷ್ಟ್ರೀಯ ಪ್ರಯೋಗಾಲಯಗಳ ಒಕ್ಕೂಟವಾದ ಭಾರತೀಯ ಸಾರ್ಸ್‌ ಕೋವಿಡ್‌ 2 ಜಿನೋಮಿಕ್ಸ್‌ ಕೂಟ (ಇನ್ಸಾಕಾಗ್‌) ಹೇಳಿದೆ.

ಡೆಲ್ಟಾ ರೂಪಾಂತರಿಗೆ ಸಂಬಂಧಿಸಿದಂತೆ ಜಾಗತಿಕವಾಗಿಯೂ ಪರಿಸ್ಥಿತಿ ಬದಲಾಗಿಲ್ಲ. ವಿಶ್ವಾದ್ಯಂತ ಬಿ.1.617.2(AY) ಹಾಗೂ ಎವೈ.ಎಕ್ಸ್‌ ಸೇರಿದಂತೆ ಡೆಲ್ಟಾ ರೂಪಾಂತರಿಗಳು ಕಳವಳಕಾರಿ ರೂಪಾಂತರಿಗಳಾಗಿ ಮುಂದುವರಿದಿವೆ. ಬಹುತೇಕ ದೇಶಗಳಲ್ಲಿ ಡೆಲ್ಟಾರೂಪಾಂತರಿ ತಳಿ ಕೊರೋನಾದ ಇನ್ನಿತರೆ ರೂಪಾಂತರಿಗಳನ್ನು ಹಿಂದಿಕ್ಕಿದೆ. ಇತರೆ ರೂಪಾಂತರಿಗಳ ಅಬ್ಬರ ಕಡಿಮೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)ಗೆ ವರದಿಯಾಗಿದೆ ಎಂದು ತಿಳಿಸಿದೆ.

Latest Videos

undefined

ಭಾರತದಲ್ಲೂ ಡೆಲ್ಟಾ(ಬಿ.1.617.2 ಹಾಗೂ ಎವೈ.ಎಕ್ಸ್‌) ಮುಖ್ಯ ಕಳವಳಕಾರಿ ರೂಪಾಂತರಿಯಾಗಿ ಮುಂದುವರಿದಿದೆ. ಇತರೆ ರೂಪಾಂತರಿಗಳು ತಗ್ಗಿವೆ ಎಂದು ವಿವರ ನೀಡಿದೆ.

ಡೆಲ್ಟಾ ರೂಪಾಂತರಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿತ್ತು. ದೇಶದಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಉತ್ತುಂಗಕ್ಕೆ ತಲುಪಿದ್ದ ಕೊರೋನಾ ವೈರಸ್‌ 2ನೇ ಅಲೆಯ ಹಿಂದೆ ಈ ಡೆಲ್ಟಾರೂಪಾಂತರಿ ಇತ್ತು ಎಂದು ತಜ್ಞರು ತಿಳಿಸಿದ್ದರು.

ಎಚ್ಚರ, ಕೊರೋನಾ ಇನ್ನೂ ಮುಗಿದಿಲ್ಲ: ವಿಶ್ವಾದ್ಯಂತ ಪ್ರಕರಣ ಹೆಚ್ಚುತ್ತಿವೆ  :  ಕೊರೋನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಕೋವಿಡ್‌ (Covid 19) ಮುಗಿದೇ ಹೋಯಿತು ಎಂಬಂತೆ ವರ್ತಿಸುತ್ತಿರುವ ನಾಗರಿಕರು ಹಾಗೂ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯ ಗಂಟೆ ಬಾರಿಸಿದೆ. ಕೋವಿಡ್‌ ಮುಕ್ತಾಯವಾಯಿತು ಎಂದು ಯಾವುದೇ ಕಾರಣಕ್ಕೂ ಭಾವಿಸಬೇಡಿ. ಜಾಗತಿಕವಾಗಿ ಪ್ರಕರಣಗಳು ಏರುಮುಖವಾಗಿವೆ. ಶೇ.80ರಷ್ಟುಜನರಿಗೆ ಲಸಿಕೆ ನೀಡಲಾಗಿರುವ ಸಿಂಗಾಪುರ, ಬ್ರಿಟನ್‌, ರಷ್ಯಾ ಹಾಗೂ ಚೀನಾದಲ್ಲೂ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೋನಾ ವಿರುದ್ಧದ ಹೋರಾಟದ ಅಂತಿಮಘಟ್ಟದಲ್ಲಿ ನಾವಿದ್ದೇವೆ ಎಂದು ಹೇಳಿದೆ.

ಕೋವಿಡ್‌ ಲಸಿಕಾಕರಣ (vaccination) ಹಾಗೂ ಮುನ್ನೆಚ್ಚರಿಕೆ ಕ್ರಮ ಎರಡನ್ನೂ ಪಾಲಿಸಬೇಕು ಎಂದು ರಾಜ್ಯಗಳ ಆರೋಗ್ಯ ಸಚಿವರ ಜತೆ ಗುರುವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಸಲಹೆ ಮಾಡಿದರು. ನಾವು ಕೊರೋನಾ ವಿರುದ್ಧದ ಹೋರಾಟದ ಅಂತಿಮ ಘಟ್ಟದಲ್ಲಿದ್ದೇವೆ. ಈ ಹಂತದಲ್ಲಿ ನಿರ್ಲಕ್ಷ್ಯ ಸಲ್ಲದು. ಲಸಿಕೆ ಹಾಗೂ ಹಾಗೂ ನಿಯಮ ಪಾಲನೆ ಕೋವಿಡ್‌ ವಿರುದ್ಧ ನಮಗಿರುವ ಎರಡು ಪ್ರಬಲ ಅಸ್ತ್ರಗಳು. ಕೊರೋನಾ ಮುಗಿಯುವ ಮುನ್ನವೇ ನಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡುವುದು ಬೇಡ ಎಂದು ಕಿವಿ ಮಾತು ಹೇಳಿದರು.

ದೇಶದಲ್ಲಿ ನ.2ರಂದು ಆರಂಭವಾಗಿರುವ ಒಂದು ತಿಂಗಳ ಕಾಲದ ಮನೆಮನೆಗೆ ಲಸಿಕೆ ಅಭಿಯಾನದ ಪ್ರಗತಿ ಪರಿಶೀಲಿಸಿ ಆರೋಗ್ಯ ಸಚಿವರ ಜತೆ ಮಾತನಾಡಿದ ಮಾಂಡವೀಯ, ಅಭಿಯಾನ ಮುಕ್ತಾಯವಾಗುವುದರೊಳಗೆ ಅರ್ಹರಿಗೆ ಮೊದಲ ಡೋಸ್‌ ಲಸಿಕೆ ಪೂರ್ಣಗೊಳಿಸಬೇಕು. ಇದಕ್ಕಾಗಿ ಜನರ ಮನವೊಲಿಸಬೇಕು ಎಂದು ಹೇಳಿದರು.

12 ಕೋಟಿಗಿಂತ ಅಧಿಕ ಮಂದಿ ಈವರೆಗೆ ಎರಡನೇ ಡೋಸ್‌ ಪಡೆದಿಲ್ಲ. ಜನರು ಲಸಿಕೆ ಪಡೆಯಲು ಮುಂದಾಗುವಂತೆ ಮಾಡಲು ಮಕ್ಕಳನ್ನು ಬಳಸಿಕೊಳ್ಳಬೇಕು. ಲಸಿಕೆ ಪಡೆಯುವಂತೆ ಮಕ್ಕಳೇ ಪೋಷಕರ ಮನವೊಲಿಸುವಂತಾಗಬೇಕು. ಈ ಕಾರ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳಿ ಎಂದು ಹೇಳಿದರು.

ಬಸ್‌, ರೈಲು ನಿಲ್ದಾಣಗಳಲ್ಲಿ ಲಸಿಕೆ ವಿತರಣೆ ಆರಂಭಿಸೋಣ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಈ ಕಾರ್ಯ ಆರಂಭವಾಗಿದೆ. ಬಸ್‌, ರೈಲು, ರಿಕ್ಷಾ ಇಳಿದವರನ್ನು ಮನವೊಲಿಸಿ ಲಸಿಕೆ ನೀಡಲಾಗುತ್ತಿದೆ. ಇದರ ಜತೆಗೆ ಪ್ರತಿ ವರ್ಗಕ್ಕೂ ಒಂದೊಂದು ದಿನ ನಿಗದಿಗೊಳಿಸಿ ಲಸಿಕೆ ನೀಡಿ. ಉದಾಹರಣೆಗೆ ವ್ಯಾಪಾರಿಗಳು, ಅಂಗಡಿ- ಮಳಿಗೆಗಳ ನೌಕರರು, ರಿಕ್ಷಾ ಎಳೆಯುವವರು ಹಾಗೂ ಆಟೋ ಚಾಲಕರಿಗೆಂದು ಒಂದೊಂದು ದಿನ ಮೀಸಲಿಡಿ ಎಂದು ತಿಳಿಸಿದರು.

ಕರ್ನಾಟಕದ ಪರವಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು ಕೇಂದ್ರ ಸಚಿವರ ಸಭೆಯಲ್ಲಿ ಭಾಗಿಯಾಗಿದ್ದರು.

ಜರ್ಮನಿಯಲ್ಲಿ ಗುರುವಾರ 50000 ಜನರಿಗೆ ಸೋಂಕು

ಬರ್ಲಿನ್‌: ಜರ್ಮನಿಯಲ್ಲಿ ಏಕಾಏಕಿ ಕೋವಿಡ್‌ ಸೋಂಕು ಸ್ಫೋಟಗೊಳ್ಳುತ್ತಿದ್ದು, ಗುರುವಾರ ಒಂದೇ ದಿನ 50,196 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. 237 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 33,949ಕ್ಕೆ ಏರಿಕೆಯಾಗಿದೆ. ಕಳೆದ ವಾರ ನಿತ್ಯ ಅಂದಾಜು 33,949 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಏಕಾಏಕಿ ಸೋಂಕು ಏರಿಕೆಯಾಗುತ್ತಿರುವ ಕಾರಣ ಕೆಲ ಆಸ್ಪತ್ರೆಗಳು ಮೊದಲೇ ನಿಗದಿಯಾಗಿದ್ದ ಶಸ್ತ್ರಚಿಕಿತ್ಸೆಗಳನ್ನು ರದ್ದು ಮಾಡಿ, ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಸಿಬ್ಬಂದಿಗಳನ್ನು ನಿಯೋಜಿಸುತ್ತಿವೆ.

ಈ ನಡುವೆ ದೇಶದ ವೈರಾಣು ತಜ್ಞ ವೈದ್ಯ ಕ್ರಿಶ್ಚಿಯನ್‌ ಡ್ರೋಸ್ಟೆನ್‌, ದೇಶದಲ್ಲಿ ಲಸಿಕಾಕರಣವನ್ನು ಚುರುಕುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಸೋಂಕಿಗೆ ಮತ್ತೆ 1,00,000 ಜನರು ಬಲಿಯಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ದೇಶದ 8.3 ಕೋಟಿ ಜನಸಂಖ್ಯೆಯ ಪೈಕಿ ಶೇ.76ರಷ್ಟುಜನರಿಗೆ ಪೂರ್ಣ ಪ್ರಮಾಣದ ಲಸಿಕೆ ವಿತರಣೆ ಮಾಡಲಾಗಿದೆ.

click me!