ಕೋವಿಡ್‌ ಮೂಲ: ಅಮೆರಿಕ ವರದಿಗೆ ಚೀನಾ ಸಿಡಿಮಿಡಿ!

By Kannadaprabha News  |  First Published Nov 1, 2021, 7:26 AM IST

* ಇದು ರಾಜಕೀಯ ಪ್ರೇರಿತ, ತಪ್ಪು ವರದಿ: ಚೀನಾ ಸರ್ಕಾರ

* ಕೋವಿಡ್‌ ಮೂಲ: ಅಮೆರಿಕ ವರದಿಗೆ ಚೀನಾ ಸಿಡಿಮಿಡಿ


ಬೀಜಿಂಗ್‌(ನ.01): ಕೋವಿಡ್‌ ಉಗಮದ (Covid 19 Origin) ಕುರಿತು ಅಮೆರಿಕದ ಗುಪ್ತಚರ ಸಂಸ್ಥೆಗಳು ಸಲ್ಲಿಕೆ ಮಾಡಿರುವ ವರದಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ (China) ಸರ್ಕಾರ, ಇದು ಸಂಪೂರ್ಣ ರಾಜಕೀಯ ಪ್ರೇರಿತ ಮತ್ತು ತಪ್ಪು ವರದಿ ಎಂದು ಕಿಡಿಕಾರಿದೆ.

ಅಧ್ಯಕ್ಷ ಜೋ ಬೈಡೆನ್‌ (Joe Biden) ಅವರ ಸೂಚನೆ ಮೇರೆಗೆ ಅಮೆರಿಕದ ಗುಪ್ತಚರ ಸಂಸ್ಥೆಗಳು, ಕೋವಿಡ್‌ ಮೂಲವನ್ನು ಪತ್ತೆ ಮಾಡುವ ಕೆಲಸ ಮಾಡಿದ್ದವು. ಆ ವರದಿ ಇದೀಗ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅದರಲ್ಲಿ ‘ಕೋವಿಡ್‌ (Covid 19) ಉಗಮವಾಗಿದ್ದು ಎಲ್ಲಿಂದ? ಹೇಗೆ ಎಂಬುದು ಎಂದಿಗೂ, ಯಾರಿಗೂ ತಿಳಿಯದೇ ಹೋಗಬಹುದು. ನಮಗೆ ಯಾವುದೇ ಹೊಸ ಮಾಹಿತಿ ಸಿಗದ ಹೊರತೂ, ಕೊರೋನಾ ವೈರಸ್‌ ಅದು ಪ್ರಾಣಿಗಳಿಂದ ಮಾನವರಿಗೆ ಹಬ್ಬಿತೋ ಅಥವಾ ಪ್ರಯೋಗಾಲಯದಿಂದ ಸೋರಿಕೆ ಆಯಿತೋ ಎನ್ನುವ ಕುರಿತು ನಾವು ಯಾವುದೇ ಅಂತಿಮ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ. ಇಂಥ ತನಿಖೆಗೆ ಬೀಜಿಂಗ್‌ (Beijing) ಅಡ್ಡಿ ಮಾಡುತ್ತಲೇ ಇದೆ’ ಎಂದು ಹೇಳಿತ್ತು.

Tap to resize

Latest Videos

undefined

ಈ ಕುರಿತು ಭಾನುವಾರ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ವಾಂಗ್‌ ವೆನ್‌ಬಿನ್‌, ‘ಈ ಹಿಂದೆ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ್ದ ವರದಿ ಕುರಿತೂ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಅಂಥದ್ದೇ ವರದಿಯನ್ನೇ ಪದೇ ಪದೇ ಎಷ್ಟೇ ಬಾರಿ ಮಂಡಿಸಿದರೂ, ಅದು ರಾಜಕೀಯ ಪ್ರೇರಿತ ಮತ್ತು ತಪ್ಪು ಎಂಬ ತನ್ನ ಗುಣವನ್ನು ಕಳೆದುಕೊಳ್ಳುವುದಿಲ್ಲ. ಹೀಗಾಗಿ ಈ ವಿಷಯದಲ್ಲಿ ಅಮೆರಿಕ ಚೀನಾದ ಮೇಲೆ ದಾಳಿ ಮಾಡುವ ಕೆಲಸವನ್ನು ನಿಲ್ಲಿಸಬೇಕು’ ಎಂದು ಸಲಹೆ ನೀಡಿದೆ.

ಪಶ್ಚಿಮ ರಾಷ್ಟ್ರಗಳಲ್ಲಿ ಕೋವಿಡ್‌ ಹೊಸ ಅಲೆ!

ಅಮೆರಿಕ, ಬ್ರಿಟನ್‌, ರಷ್ಯಾ, ಉಕ್ರೇನ್‌, ಟರ್ಕಿ, ಜರ್ಮನಿ, ಬ್ರೆಜಿಲ್‌ ಸೇರಿದಂತೆ ಹಲವು ದೇಶಗಳಲ್ಲಿ ಕಳೆದ 2 ತಿಂಗಳ ಬಳಿಕ ಮತ್ತೆ ಹೊಸ ಕೊರೋನಾ ಪ್ರಕರಣ ಮತ್ತು ಸಾವಿನ ಸಂಖ್ಯೆ ಸ್ಫೋಟಗೊಂಡಿದ್ದು, ಭಾರತ ಸೇರಿದಂತೆ ಇತರೆ ದೇಶಗಳಿಗೆ 3ನೇ ಅಲೆಯ ಎಚ್ಚರಿಕೆಯ ಕರೆಗಂಟೆಯಾಗಿ ಕೇಳಿಸಿದೆ.

ಭಾರತದಲ್ಲಿ ಕಳೆದ 126 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದು, ಹೊಸ ಸೋಂಕು ಮತ್ತು ಸಾವು ಎರಡೂ ನಿಯಂತ್ರಣದಲ್ಲಿದೆ ಎಂದು ಕಂಡುಬರುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಅ.28ರಂದು ಬಿಡುಗಡೆ ಮಾಡಿದ ತನ್ನ ವಾರದ ಕೋವಿಡ್‌ ವರದಿಯಲ್ಲಿ, ‘ವಿಶ್ವದ ಎಲ್ಲಾ ದೇಶಗಳು ಇನ್ನೂ ಎರಡೂ ಲಸಿಕೆ ಪಡೆದವರೂ ಸೇರಿದಂತೆ ಎಲ್ಲರಿಗೂ ಹೊಸ ಕೊರೋನಾ ತಳಿಗಳು ಬಾಧಿಸುವ ಅಪಾಯ ಎದುರಿಸುತ್ತಿವೆ’ ಎಂದು ಎಚ್ಚರಿಕೆ ನೀಡಿದೆ. ಇದು ಭಾರತಕ್ಕೂ ಆತಂಕ ಮೂಡಿಸುವ ವಿಚಾರವಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧೋನಾಮ್‌ ಘೇಬ್ರಿಯಾಸಿಸ್‌, ‘ಕಳೆದ 2 ತಿಂಗಳಲ್ಲೇ ಮೊದಲ ಬಾರಿಗೆ ವಿಶ್ವದಾದ್ಯಂತ ಹೊಸ ಪ್ರಕರಣ ಮತ್ತು ಸಾವು ಎರಡರಲ್ಲೂ ಏರಿಕೆ ಕಂಡುಬರುತ್ತಿದೆ. ಇದು ಕೋವಿಡ್‌ ಸಾಂಕ್ರಾಮಿಕದ ಅಪಾಯ ಇನ್ನೂ ಮುಗಿದಿಲ್ಲ ಎಂಬುದರ ಎಚ್ಚರಿಕೆಯ ಗಂಟೆಯಾಗಿದೆ. ಪ್ರತಿ ದೇಶದಲ್ಲೂ ಕೋವಿಡ್‌ ನಿಯಂತ್ರಣವಾಗದ ಹೊರತಾಗಿಯೂ, ವೈರಸ್‌ ಹೊಸ ಹೊಸ ರೂಪ ತಾಳುತ್ತಲೇ ಇರುತ್ತದೆ ಮತ್ತು ಎಲ್ಲೆಡೆ ಹಬ್ಬುತ್ತಲೇ ಇರುತ್ತದೆ. ಶ್ರೀಮಂತ ದೇಶಗಳು ಸೇರಿದಂತೆ ಎಲ್ಲಾ ದೇಶಗಳು ಮತ್ತೆ ಕೋವಿಡ್‌ ಪಿಡುಗಿಗೆ ತುತ್ತಾಗುವ ಭೀತಿಯನ್ನು ಎದುರಿಸುತ್ತಿವೆ. ಹೀಗಾಗಿ ದೇಶಗಳು ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟುಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕಿದೆ’ ಎಂದು ಹೇಳಿದ್ದಾರೆ.

click me!