ರೂಪಾಂತರಿ ‘617 ವೈರಸ್’ಗೆ ಕೋವ್ಯಾಕ್ಸಿನ್ ರಾಮಬಾಣ| ಅಧ್ಯಯನದಿಂದ ಇದು ಸಾಬೀತಾಗಿದೆ| ಅಮೆರಿಕದ ಖ್ಯಾತ ತಜ್ಞ ಡಾ| ಫೌಸಿ ಹೇಳಿಕೆ
ವಾಷಿಂಗ್ಟನ್(ಏ.29): ಭಾರತದಲ್ಲಿ ಕೊರೋನಾದ 2ನೇ ಅಲೆ ಏಳಲು ಪ್ರಮುಖ ಕಾರಣಕರ್ತ ಎಂದು ಹೇಳಲಾದ ‘617’ ತಳಿಯ ರೂಪಾಂತರಿ ಕೊರೋನಾ (ಡಬಲ್ ರೂಪಾಂತರಿ) ಮೇಲೆ ‘ಕೋವ್ಯಾಕ್ಸಿನ್’ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಉನ್ನತ ಸಾಂಕ್ರಾಮಿಕ ರೋಗ ತಜ್ಞರೊಬ್ಬರು ಹೇಳಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆ ಭಾರತದ ದೇಶೀ ಲಸಿಕೆಯಾಗಿದ್ದು, ಹೈದರಾಬಾದ್‌ನ ‘ಭಾರತ್ ಬಯೋಟೆಕ್’ ಕಂಪನಿ ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಅನುಮೋದನೆ ಪಡೆದ ಮೊತ್ತಮೊದಲ 2 ಲಸಿಕೆಗಳಲ್ಲಿ ಇದೂ ಒಂದು.
undefined
‘ಭಾರತದಲ್ಲಿ ಕೋವ್ಯಾಕ್ಸಿನ್ ಎಂಬ ಲಸಿಕೆ ಲಭ್ಯವಿದೆ. ಇದು ‘617’ ತಳಿಯ ರೂಪಾಂತರಿ ಕೊರೋನಾ ವೈರಸ್ ಮೇಲೂ ಪರಿಣಾಮಕಾರಿಯಾಗಿದೆ ಎಂಬ ದತ್ತಾಂಶವು ಇತ್ತೀಚೆಗೆ ಲಭ್ಯವಾಗಿದೆ. ಹೀಗಾಗಿ ಭಾರತವು ಈಗ 2ನೇ ಕೊರೋನಾ ಅಲೆಯಿಂದ ತತ್ತರಿಸುತ್ತಿದ್ದರೂ ಇಂಥದ್ದೊಂದು ಲಸಿಕೆ ಅಲ್ಲಿ ಲಭ್ಯವಿದೆ ಎಂಬುದು ಮಹತ್ವದ್ದು. ಇಂಥ ಸಂದರ್ಭದಲ್ಲಿ ಈ ಲಸಿಕೆ ವೈರಸ್ಸನ್ನು ಮಣಿಸಲಿದೆ’ ಎಂದು ಅಮರಿಕದ ಖ್ಯಾತ ಸಾಂಕ್ರಾಮಿಕ ರೋಗತಜ್ಞ ಡಾ| ಆ್ಯಂಟನಿ ಫೌಸಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿ.1.617 ಹೆಸರಿನ ಈ ಹೊಸ ತಳಿ ಭಾರತದ 19 ರಾಜ್ಯಗಳಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರವೇ ಇತ್ತೀಚೆಗೆ ಹೇಳಿತ್ತು. ವಿಶ್ವದ 17 ದೇಶಗಳಲ್ಲೂ ಇದು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿತ್ತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona