ಕೊರೋನಾ ಸಾವು: ಇಟಲಿ ಹಿಂದಿಕ್ಕಿ ಅಮೆರಿಕ ನಂ.1!

By Kannadaprabha NewsFirst Published Apr 12, 2020, 7:24 AM IST
Highlights

ಕೊರೋನಾ ಸಾವು: ಇಟಲಿ ಹಿಂದಿಕ್ಕಿ ಅಮೆರಿಕ ನಂ.1!| ಮೊನ್ನೆ ದಾಖಲೆಯ 2100, ನಿನ್ನೆ 1000 ಮಂದಿ ಸಾವು| 20 ಸಾವಿರ ಸನಿಹಕ್ಕೆ ಮೃತರ ಸಂಖ್ಯೆ| 5 ಲಕ್ಷ ಜನಕ್ಕೆ ಸೋಂಕು| ಕೊರೋನಾ ವಿಷಯದಲ್ಲೂ ಅಮೆರಿಕ ವಿಶ್ವಕ್ಕೇ ‘ದೊಡ್ಡಣ್ಣ’

ವಾಷಿಂಗ್ಟನ್(ಏ.12):  ವಿಶ್ವದಲ್ಲೇ ಸುಸಜ್ಜಿತ ಆರೋಗ್ಯ ಸೇವೆ ಹೊಂದಿರುವ ಅಮೆರಿಕ ದೇಶ ಮಾರಕ ಕೊರೋನಾ ವೈರಸ್‌ನಿಂದ ತೀವ್ರವಾಗಿ ತತ್ತರಿಸಿದೆ. ಶುಕ್ರವಾರ ಒಂದೇ ದಿನ ಅಮೆರಿಕದಲ್ಲಿ ಸಾರ್ವಕಾಲಿಕ ದಾಖಲೆಯ 2100 ಮಂದಿ, ಶನಿವಾರ 1000 ಮಂದಿ ವೈರಾಣುವಿಗೆ ಬಲಿಯಾಗಿದ್ದಾರೆ. ಈ ಸಂಖ್ಯೆಗಳಿಂದಾಗಿ ಈವರೆಗೆ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದ್ದ ಇಟಲಿಯನ್ನು ಅಮೆರಿಕ ಶನಿವಾರ ಹಿಂದಿಕ್ಕಿ, ಪ್ರಥಮ ಸ್ಥಾನಕ್ಕೇರಿದೆ. ಅಮೆರಿಕದಲ್ಲಿನ ಒಟ್ಟು ಸಾವಿನ ಸಂಖ್ಯೆ 20 ಸಾವಿರದ ಗಡಿ ಸನಿಹಕ್ಕೆ ತಲುಪಿದೆ.

ಮತ್ತೊಂದೆಡೆ, ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕೂಡ 5 ಲಕ್ಷ ಗಡಿ ದಾಟಿದೆ. ವಿಶ್ವದಲ್ಲೇ ಈ ಸಂಖ್ಯೆಯೂ ಅಧಿಕ. ಹೀಗಾಗಿ ಕೊರೋನಾ ವಿಷಯದಲ್ಲೂ ಅಮೆರಿಕ ವಿಶ್ವಕ್ಕೆ ‘ದೊಡ್ಡಣ್ಣ’ ಆಗಿಬಿಟ್ಟಿದೆ.

ಕೊರೋನಾ ಮತ್ತೊಂದು ಆತಂಕಕಾರಿ ಬೆಳವಣಿಗೆ, ಗುಣಮುಖರಾದವರಲ್ಲಿ ಮತ್ತೆ ಸೋಂಕು!

ಏ.7ರಂದು ಅಮೆರಿಕದಲ್ಲಿ ಒಂದೇ ದಿನ 1939 ಮಂದಿ ಸಾವಿಗೀಡಾಗಿದ್ದು ಈವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ರಾತ್ರಿ 8.30ಕ್ಕೆ (ಅಮೆರಿಕ ಕಾಲಮಾನ) ಕೊನೆಗೊಂಡ 24 ಗಂಟೆಯಲ್ಲಿ ಅಮೆರಿಕದಲ್ಲಿ 2,108 ಮಂದಿ ಸಾವನ್ನಪ್ಪಿದ್ದಾರೆ.

ಮತ್ತೊಂದೆಡೆ ಶನಿವಾರ 1000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಅಮೆರಿಕದ ಸಾವಿನ ಸಂಖ್ಯೆ 19700ಕ್ಕೇರಿಕೆಯಾಗಿದೆ. ಇಟಲಿಯಲ್ಲಿ ಸಾವಿನ ಸಂಖ್ಯೆ 19000ದಲ್ಲಿದೆ. ಹೀಗಾಗಿ ಇಟಲಿಯನ್ನು ಅಮೆರಿಕ ಹಿಂದಿಕ್ಕಿದೆ.

ಇಟಲಿ+ಸ್ಪೇನ್‌+ಫ್ರಾನ್ಸ್‌= ಅಮೆರಿಕ!

ಕೊರೋನಾ ಸೋಂಕಿನಲ್ಲಿ ಅಮೆರಿಕ 5 ಲಕ್ಷ ಗಡಿ ದಾಟಿದೆ. ವಿಶ್ವದಲ್ಲೇ ಕೊರೋನಾ ಅತಿ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ದೇಶಗಳಾದ ಇಟಲಿ (1.58 ಲಕ್ಷ ಸೋಂಕು), ಸ್ಪೇನ್‌ (1.47 ಲಕ್ಷ ಸೋಂಕು), ಫ್ರಾನ್ಸ್‌ (1.12 ಲಕ್ಷ) ದೇಶಗಳಲ್ಲಿ ಒಟ್ಟು 4.17 ಲಕ್ಷ ಸೋಂಕಿತರು ಇದ್ದಾರೆ. ಆದರೆ ಅಮೆರಿಕ ಮೂರೂ ದೇಶಗಳ ಒಟ್ಟು ಸಂಖ್ಯೆಗಿಂತ ಹೆಚ್ಚು ಸೋಂಕಿತರನ್ನು ಹೊಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಇನ್ಮುಂದೆ ಜಗತ್ತಲ್ಲಿ ಶೇಕ್‌ಹ್ಯಾಂಡ್‌ ಇರಲ್ವಾ ಹಾಗಾದ್ರೆ?

ಅಮೆರಿಕದಲ್ಲಿ 40 ಭಾರತೀಯರು ಬಲಿ

ಅಮೆರಿಕವನ್ನು ಸ್ಮಶಾನ ಭೂಮಿಯನ್ನಾಗಿ ಮಾಡಿರುವ ಕೊರೋನಾ ವೈರಸ್‌ಗೆ 40 ಮಂದಿ ಭಾರತೀಯ ಮೂಲದ ಅಮೆರಿಕನ್ನರು ಕೂಡ ಪ್ರಾಣ ತೆತ್ತಿದ್ದಾರೆ. 1500ಕ್ಕೂ ಹೆಚ್ಚು ಮಂದಿಗೆ ಸೋಂಕು ತಟ್ಟಿದೆ. ಮೃತರ ಪೈಕಿ ಹೆಚ್ಚಿನವರು ಕೇರಳದವಾಗಿದ್ದು, ಅಲ್ಲಿನ 17 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ ಗುಜರಾತ್‌ನ 10, ಪಂಜಾಬಿನ 4, ಆಂಧ್ರಪ್ರದೇಶದ ಇಬ್ಬರು ಹಾಗೂ ಒಡಿಶಾದ ಒಬ್ಬರು ಸಾವಿಗೀಡಾಗಿದ್ದಾರೆ. ಸತ್ತವರಲ್ಲಿ ಒಬ್ಬರು ಮಾತ್ರ 21 ವರ್ಷದವರಾಗಿದ್ದು, ಉಳಿದವರು 60 ವರ್ಷಕ್ಕೂ ಮೇಲ್ಪಟ್ಟವರು. ನ್ಯೂಜೆರ್ಸಿಯಲ್ಲಿ ಅತೀ ಹೆಚ್ಚು ಅಂದರೆ 12ಕ್ಕೂ ಅಧಿಕ ಮಂದಿ ಭಾರತೀಯ ಮೂಲದ ನಿವಾಸಿಗಳು ಸಾವನ್ನಪ್ಪಿದ್ದು, ನ್ಯೂಯಾರ್ಕ್ನಲ್ಲಿ 15, ಪೆನ್ಸಿಲ್ವೆನಿಯಾ ಹಾಗೂ ಫೆä್ಲೕರಿಡಾದಲ್ಲಿ ತಲಾ 4, ಟೆಕ್ಸಾಸ್‌ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ತಲಾ ಒಬ್ಬರು ಮರಣ ಹೊಂದಿದ್ದಾರೆ.

click me!