
ನವದೆಹಲಿ(ಅ.15): ಕೊರೋನಾ ವೈರಸ್ ಹರಡುವುದನ್ನು ತಡೆಯಲು ಜಗತ್ತಿನಾದ್ಯಂತ ಈ ವರ್ಷದ ಮೊದಲಾರ್ಧದಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನ ವೇಳೆಯಲ್ಲಿ ವಾತಾವರಣಕ್ಕೆ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುವ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು 2008ರ ಆರ್ಥಿಕ ಕುಸಿತ, 1979ರ ತೈಲ ಬಿಕ್ಕಟ್ಟು ಅಥವಾ 2ನೇ ವಿಶ್ವ ಮಹಾಯುದ್ಧದ ವೇಳೆಯಲ್ಲಿ ವಾತಾವರಣಕ್ಕೆ ಕಾರ್ಬನ್ ಬಿಡುಗಡೆಯಾಗುವುದು ಕಡಿಮೆಯಾಗಿದ್ದಕ್ಕಿಂತ ಹೆಚ್ಚು ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡ ತಿಳಿಸಿದೆ.
ಚೀನಾ, ಅಮೆರಿಕ, ಜರ್ಮನಿ ಮುಂತಾದ ದೇಶಗಳ ವಿಜ್ಞಾನಿಗಳು ಜಂಟಿಯಾಗಿ ಈ ಕುರಿತು ಅಧ್ಯಯನ ನಡೆಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಮೊದಲ ಆರು ತಿಂಗಳಿನಲ್ಲಿ ಒಟ್ಟಾರೆ ಸಿಒ2 ವಿಷಕಾರಿ ಅನಿಲ ವಾತಾವರಣಕ್ಕೆ ಬಿಡುಗಡೆಯಾಗುವುದು ಶೇ.8.8ರಷ್ಟುಕಡಿಮೆಯಾಗಿದೆ. ಅಂದರೆ 155 ಕೋಟಿ ಟನ್‌ನಷ್ಟುಸಿಒ2 ವಾತಾವರಣಕ್ಕೆ ಬಿಡುಗಡೆಯಾಗುವುದು ತಪ್ಪಿದೆ. ಇದರ ಪೈಕಿ ವಾಹನಗಳು ರಸ್ತೆಗಿಳಿಯದೆ ಇದ್ದುದರ ಪಾಲು ಶೇ.40ರಷ್ಟಿದೆ. ಅಂದರೆ, ಜಗತ್ತಿನಾದ್ಯಂತ ನೌಕರರು ವರ್ಕ್ ಫ್ರಂ ಹೋಂ ಮಾಡಿದ್ದು ಹಾಗೂ ಹೊರಗೆ ಹೋಗಲು ನಿರ್ಬಂಧ ಇದ್ದುದರಿಂದ ವಾತಾವರಣಕ್ಕೆ ಭಾರಿ ಲಾಭವಾಗಿದೆ ಎಂದು ಹೇಳಿದ್ದಾರೆ.
ಸಿಒ2 ಬಿಡುಗಡೆಯನ್ನು ಕಡಿಮೆ ಮಾಡಲು ಕೊರೋನೋತ್ತರ ಅವಧಿಯಲ್ಲಿ ಈ ಅಧ್ಯಯನದಲ್ಲಿ ಕಂಡುಬಂದ ಸಂಗತಿಗಳು ಉತ್ತಮ ಮಾದರಿಯಾಗಲಿವೆ. ಲಾಕ್‌ಡೌನ್ ಅವಧಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಎಲ್ಲಾ ದೇಶಗಳಲ್ಲೂ ವೈರಸ್ ಆತಂಕ ಹೆಚ್ಚಿತ್ತು. ಆಗ ಜಾಗತಿಕವಾಗಿ ಶೇ.16.9ರಷ್ಟುಸಿಒ2 ಬಿಡುಗಡೆ ಕಡಿಮೆಯಾಗಿತ್ತು. ಆದರೆ, ಜುಲೈ ನಂತರ ಬಹುತೇಕ ಎಲ್ಲಾ ದೇಶಗಳಲ್ಲೂ ಲಾಕ್‌ಡೌನ್ ತೆರವುಗೊಳಿಸಿದ್ದರಿಂದ ಸಿಒ2 ಬಿಡುಗಡೆ ಪ್ರಮಾಣ ಮೊದಲಿನ ಮಟ್ಟಕ್ಕೇ ಬಂದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ