102 ದಿನ ನಾಪತ್ತೆಯಾಗಿದ್ದ ಕೊರೋನಾ ಮತ್ತೆ ಪ್ರತ್ಯಕ್ಷ: ನ್ಯೂಜಿಲೆಂಡ್‌ನಲ್ಲಿ ಕಂಪ್ಲೀಟ್‌ ಲಾಕ್‌ಡೌನ್!

By Suvarna NewsFirst Published Aug 12, 2020, 11:16 AM IST
Highlights

ನ್ಯೂಜಿಲೆಂಡ್‌ ಕೊರೋನಾ ವೈರಸ್‌ ಮುಕ್ತವಾಗಿ 102 ದಿನ ಕಳೆದಿದೆ ಎಂಬ ಖುಷಿಯ ವಿಚಾರದ ಬೆನ್ನಲ್ಲೇ ದೇಶದಲ್ಲಿ ಮತ್ತೊಮ್ಮೆ ಕೊರೋನಾತಂಕ ಕಾಣಿಸಿಕೊಂಡಿದೆ. ಮಂಗಳವಾರ ನಾಲ್ಕು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಅರ್ಡನ್‌ ತಿಳಿಸಿದ್ದಾರೆ. 

ವೆಲ್ಲಿಂಗ್ಟನ್(ಆ.12): ಕೊರೋನಾ ವೈರಸ್‌ನಿಂದ 102 ದಿನ ಮುಕ್ತವಾಗಿದ್ದ ನ್ಯೂಜಿಲೆಂಡ್‌ನಲ್ಲಿ ಮತ್ತೆ ಈ ಮಹಾಮಾರಿ ಕಾಣಿಸಿಕೊಂಡಿದೆ. ಒಂದೇ ಕುಟುಂಬದ ನಾಲ್ವರು ಸದಸ್ಯರು ಕೊರೋನಾ ಸೋಂಕಿತರಾಗಿದ್ದಾರೆಂದು ತಿಳಿದು ಬಂದಿದೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ದೇಶಾದ್ಯಂತ ಮತ್ತೊಂದು ಬಾರಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಅಲ್ಲದೇ ಈ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

ನ್ಯೂಜಿಲೆಂಡ್‌ನಲ್ಲಿ 100 ದಿನದಿಂದ ಒಂದೇ ಒಂದು ಕೊರೋನಾ ಕೇಸಿಲ್ಲ!

ಇಡೀ ವಿಶ್ವವೇ ಸದ್ಯ ಈ ಮಾಹಾಮಾರಿಯಿಂದ ನಲುಗುತ್ತಿದೆ. ಹೀಗಿರುವಾಗ ನ್ಯೂಜಿಲೆಂಡ್ ಇಡೀ ಜಗತ್ತಿಗೇ ಆದರ್ಶವಾಗಿದೆ. ಇಲ್ಲಿನ ಸರ್ಕಾರ ಮಾರ್ಚ್ ಅಂತ್ಯದಲ್ಲಿ ಕಠಿಣ ಲಾಕ್‌ಡೌನ್ ಜಾರಿಗೊಳಿಸಿ ಈ ಮಹಾಮಾರಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿತ್ತು. ಆಗ ಇಲ್ಲಿ ಕೇವಲ 100 ಮಂದಿಯಲ್ಲಿ ಸೋಂಕು ಇತ್ತು. ಭಾನುವಾರವಷ್ಟೇ ಇಲ್ಲಿ ಹೊಸ ಕೊರೋನಾ ಸೋಂಕು ಕಾಣಿಸಿಕೊಳ್ಳದೇ 100 ದಿನಗಳಾಗಿತ್ತು. ನ್ಯೂಜಿಲೆಂಡ್‌ ಒಟ್ಟು ಸೋಂಕಿತರ ಸಂಖ್ಯೆಯನ್ನು 1500ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಕೇವಲ 22 ಮಂದಿ ಸಾವಿಗೀಡಾಗಿದ್ದರು.

ನ್ಯೂಜಿಲೆಂಡ್‌ ಪೂರ್ಣ ಕೊರೋನಾ ಮುಕ್ತ: ಸಾಮಾಜಿಕ ಅಂತರ, ಮಾಸ್ಕ್ ಬಳಕೆಯೂ ಇಲ್ಲ!

ಹೀಗಿದ್ದರೂ ಇಲ್ಲಿ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಳ್ಳುವ ಭೀತಿ ಇತ್ತು ಇದೀಗ ಈ ಭೀತಿ ನಿಜವಾಗಿದೆ.  ‘ದೇಶದ ಅತಿ ದೊಡ್ಡ ನಗರ ಆಕ್ಲೆಂಡ್‌ನಲ್ಲಿ ಸೋಂಕಿನ ಮೂಲ ಪತ್ತೆಯಾಗದ ಒಂದು ಪ್ರಕರಣ ದಾಖಲಾಗಿದ್ದು, ಈ ನಗರದಲ್ಲಿ ಬುಧವಾರದಿಂದ ಶುಕ್ರವಾರದವರೆಗೆ ಹೈ ಅಲರ್ಟ್‌ ಘೋಷಿಸಲಾಗಿದೆ. ಅದರರ್ಥ ಅಲ್ಲಿನ ಜನರು ಮನೆಯೊಳಗೇ ಇರಬೇಕು. ಬಾರ್‌ಗಳು ಮತ್ತಿತರ ಹಲವು ಉದ್ಯಮಗಳನ್ನು ಮುಚ್ಚಲಾಗಿದೆ. ಆಕ್ಲೆಂಡ್‌ ಪ್ರಯಾಣವನ್ನು ನಿಷೇಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

click me!