
ಜಿನೆವಾ(ಮೇ.19): ಕೊರೋನಾ ವೈರಸ್ ಉಗಮದ ಕುರಿತು ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬರುತ್ತಿರುವಾಗಲೇ, ಭಾರತದ ಅಧ್ಯಕ್ಷತೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಎರಡು ದಿನಗಳ ವಿಡಿಯೋ ಕಾನ್ಫರೆನ್ಸ್ ಸಮಾವೇಶ ಸೋಮವಾರದಿಂದ ಆರಂಭಗೊಂಡಿದೆ. ಆದರೆ, ಈ ಸಭೆ ಆರಂಭದಲ್ಲೇ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ.
ಕೊರೋನಾ ವೈರಸ್‌ನ ಮೂಲದ ಬಗ್ಗೆ ಪಾರದರ್ಶಕ, ಆಮೂಲಾಗ್ರ ತನಿಖೆ ನಡೆಯಬೇಕು ಎಂದು ಐರೋಪ್ಯ ಒಕ್ಕೂಟ ಮಂಡಿಸಿದ ನಿರ್ಣಯಕ್ಕೆ ಭಾರತ ಸೇರಿ 120ಕ್ಕೂ ಹೆಚ್ಚು ದೇಶಗಳು ಬೆಂಬಲ ಸೂಚಿಸಿವೆ. ಆ ವೈರಾಣು ಮೊದಲು ತನ್ನ ದೇಶದಲ್ಲೇ ಪತ್ತೆಯಾಗಿದ್ದರಿಂದ ಹಾಗೂ ಎಲ್ಲ ರಾಷ್ಟ್ರಗಳು ತನ್ನ ವಿರುದ್ಧ ಆಕ್ರೋಶ ಹೊರಹಾಕುತ್ತಿರುವುದರಿಂದ ಎಚ್ಚೆತ್ತಿರುವ ಚೀನಾ ಹೊಸ ದಾಳ ಉರುಳಿಸಿದೆ. ತನಿಖೆಗೆ ಒತ್ತಾಯಿಸುವ ನಿರ್ಣಯವನ್ನು ತಾನೂ ಬೆಂಬಲಿಸುವುದಾಗಿ ಘೋಷಿಸಿ ಅಚ್ಚರಿ ಮೂಡಿಸಿದೆ. ಅಲ್ಲದೇ ಕೊರೋನಾ ವಿರುದ್ಧದ ಹೋರಾಟಕ್ಕೆ ಲಗುಬಗೆಯಲ್ಲಿ 15 ಸಾವಿರ ಕೋಟಿ ರು. ನೆರವು ಪ್ರಕಟಿಸಿದೆ.
ಕೊರೋನಾ ವಿರುದ್ಧದ ಹೋರಾಟಕ್ಕೆ ಎರಡು ವರ್ಷದಲ್ಲಿ 15 ಸಾವಿರ ಕೋಟಿ ರು. ನೆರವು ನೀಡುತ್ತೇವೆ. ಕೊರೋನಾ ವೈರಸ್ ನಿಯಂತ್ರಣ ಮತ್ತು ಚಿಕಿತ್ಸೆ ವೆಚ್ಚವನ್ನು ಚೀನಾ ಹಂಚಿಕೊಳ್ಳುತ್ತೇವೆ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಿಳಿಸಿದ್ದಾರೆ.
ಸಭೆಯ ವೇಳೆ ಕೊರೋನಾ ವೈರಸ್‌ನ ಮೂಲದ ಬಗ್ಗೆ ಪಾರದರ್ಶಕ ಹಾಗೂ ಆಮೂಲಾಗ್ರ ತನಿಖೆ ನಡೆಸಬೇಕು ಎಂದು ಐರೋಪ್ಯ ಒಕ್ಕೂಟ ಮಂಡಿಸಿದ ಗೊತ್ತುವಳಿಯಯನ್ನು ಭಾರತವೂ ಸೇರಿದಂತೆ 120ಕ್ಕೂ ಹೆಚ್ಚು ದೇಶಗಳು ಬೆಂಬಲ ಸೂಚಿಸಿವೆ. ಆಸ್ಪ್ರೇಲಿಯಾ, ಬಾಂಗ್ಲಾದೇಶ, ಬ್ರೆಜಿಲ್, ಕೆನಡಾ, ಜಪಾನ್, ನ್ಯೂಜಿಲೆಂಡ್, ಬ್ರಿಟನ್ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಚೀನಾ ವಿರುದ್ಧ ತನಿಖೆಗೆ ಗೊತ್ತುವಳಿಯನ್ನು ಬೆಂಬಲಿಸುವುದಾಗಿ ಪ್ರಕಟಿಸಿವೆ. ಭಾರತದ ಪರವಾಗಿ ಆರೋಗ್ಯ ಸಚಿವ ಹರ್ಷವರ್ಧನ್ ಸಮಾವೇಶವನ್ನು ಪ್ರತಿನಿಧಿಸಿದ್ದು, ಗೊತ್ತುವಳಿಯನ್ನು ಬೆಂಬಲಿಸುವುದಾಗಿ ಪ್ರಕಟಿಸಿದ್ದಾರೆ. ಗೊತ್ತುವಳಿಯನ್ನು ಬೆಂಬಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕದ ಹೆಸರಿಲ್ಲ. ಆದರೆ, ವಿಶ್ವಕ್ಕೆ ಕೊರೋನಾ ವೈರಸ್ ಹರಡಿದ್ದೇ ಚೀನಾ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಆರೋಪ ಮಾಡಿದ್ದಾರೆ. ಹೀಗಾಗಿ ಗೊತ್ತುವಳಿಯನ್ನು ಅಮೆರಿಕವೂ ಬೆಂಬಲಿಸುವುದು ಬಹುತೇಕ ನಿಶ್ವಿತವಾಗಿದೆ.
ಮೆತ್ತಗಾದ ಚೀನಾ:
ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮಂಡಿಸಲಾದ ಗೊತ್ತುವಳಿಯಿಂದ ಒತ್ತಡಕ್ಕೆ ಸಿಲುಕಿದ ಚೀನಾ , ಕೊರೋನಾ ವಿರುದ್ಧ ಹೊರಾಟಕ್ಕೆ ಎರಡು ವರ್ಷದಲ್ಲಿ 15 ಸಾವಿರ ಕೋಟಿ ರು. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಕೊರೋನಾ ವೈರಸ್ ನಿಯಂತ್ರಣ ಮತ್ತು ಚಿಕಿತ್ಸೆ ವೆಚ್ಚವನ್ನು ಚೀನಾ ಹಂಚಿಕೊಳ್ಳಲಿದೆ. ಈ ನಿಟ್ಟಿನಲ್ಲಿ 2 ವರ್ಷದ ಅವಧಿಯಲ್ಲಿ 15 ಸಾವಿರ ಕೋಟಿ ರು.ಗಳನ್ನು ಚೀನಾ ನೀಡಲಿದೆ ಎಂದಿ ಜಿನ್‌ಪಿಂಗ್ ಹೇಳಿದ್ದಾರೆ. ಅಲ್ಲದೇ ಸಭೆಯಲ್ಲಿ ಭಾಗಿಯಾಗಿದ್ದ ಚೀನಾ ವಿದೇಶಾಂಗ ಕಾರ್ಯದರ್ಶಿ, ಕೊರೋನಾ ವೈರಸ್ ಮೂಲದ ತನಿಖೆಗೆ ಐರೋಪ್ಯ ಒಕ್ಕೂಟ ಮಂಡಿಸಿದ ಗುತ್ತುವಳಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ