ವುಹಾನ್‌ನಿಂದಲೇ ಕೊರೋನಾ ಸೃಷ್ಟಿ ಆರೋಪಕ್ಕೆ ಮತ್ತಷ್ಟು ಪುಷ್ಟಿ!

By Kannadaprabha NewsFirst Published Jun 6, 2021, 7:58 AM IST
Highlights

* ಅಮೆರಿಕ ತಜ್ಞ ಆ್ಯಂಟನಿ ಫೌಸಿ ಇ-ಮೇಲ್‌ಗಳಿಂದ ಬಯಲು

* ವುಹಾನ್‌ನಿಂದಲೇ ಕೊರೋನಾ ಸೃಷ್ಟಿಆರೋಪಕ್ಕೆ ಮತ್ತಷ್ಟು ಪುಷ್ಟಿ

* 2020ರ ಫೆಬ್ರುವರಿ- ಮಾರ್ಚ್ ತಿಂಗಳಲ್ಲೇ ಮಾಹಿತಿ ಇತ್ತು. ಆದರೂ ಅವರು ಅದನ್ನು ಉದ್ದೇಶಪೂರ್ವಕವಾಗಿ ರಹಸ್ಯವಾಗಿ ಇಟ್ಟಿದ್ದರು

ವಾಷಿಂಗ್ಟನ್‌/ಬೀಜಿಂಗ್‌(ಜೂ.06): ಅಮೆರಿಕದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಅಮೆರಿಕ ಸರ್ಕಾರದ ವೈರಾಣು ಸಲಹೆಗಾರ ಡಾ. ಆ್ಯಂಟೋನಿ ಫೌಸಿ, ಅವರಿಗೆ ವೈರಾಣು ಮೂಲದ ಬಗ್ಗೆ 2020ರ ಫೆಬ್ರುವರಿ- ಮಾಚ್‌ರ್‍ ತಿಂಗಳಲ್ಲೇ ಮಾಹಿತಿ ಇತ್ತು. ಆದರೂ ಅವರು ಅದನ್ನು ಉದ್ದೇಶಪೂರ್ವಕವಾಗಿ ರಹಸ್ಯವಾಗಿ ಇಟ್ಟಿದ್ದರು ಎಂಬ ಆರೋಪವೊಂದು ಇದೀಗ ಕೇಳಿಬಂದಿದೆ.

ಈ ಆರೋಪ ದೃಢೀಕರಿಸುವಂತೆ ಡಾ.ಫೌಸಿ ಅವರು ಹಲವರೊಂದಿಗೆ ಮಾಡಿಕೊಂಡ ಇ ಮೇಲ್‌ ಮಾಹಿತಿಗಳನ್ನು ಇದೀಗ ಅಮೆರಿಕದಲ್ಲಿ ಮಾಹಿತಿ ಹಕ್ಕು ಅಡಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ವೈರಸ್‌ನ ಮೂಲ ‘ವುಹಾನ್‌ ಲ್ಯಾಬ್‌’ ಎಂಬ ಬಗ್ಗೆ ಡಾ.ಫೌಸಿ ಪ್ರಸ್ತಾಪಿಸಿರುವ ಹಲವು ವಿಷಯಗಳಿವೆ.

ಈ ಕುರಿತು ಪ್ರತಿಕ್ರಿಯಿಸಿರುವ, ವೈರಸ್‌ನಲ್ಲಿ ಚೀನಾ ಕೈವಾಡದ ಕುರಿತು ಮೊದಲಿಗೆ ಮಾತನಾಡಿದ್ದ ಚೀನಾ ಮೂಲದ ವೈರಾಣು ತಜ್ಞ ಡಾ, ಲಿ ಮೆಂಗ್‌ ಯನ್‌ ಅವರು, ‘ಡಾ| ಫೌಸಿಗೆ ಎಲ್ಲವೂ ಆರಂಭದಿಂದಲೂ ಗೊತ್ತಿತ್ತು. ನನ್ನ ದಾಖಲೆಗಳನ್ನು ಅವರು ಆರಂಭದಿಂದಲೂ ಗಮನಿಸಿಕೊಂಡೇ ಬಂದಿದ್ದರು. ಆದರೂ ಅವರು ಕಮ್ಯುನಿಸ್ಟ್‌ ಪಕ್ಷ ಮತ್ತು ತಮ್ಮ ಲಾಭಕಾಗಿ ಎಲ್ಲವನ್ನೂ ಮುಚ್ಚಿಟ್ಟಿದ್ದರು ಎಂಬುದನ್ನು ದಾಖಲೆಗಳೇ ಹೇಳಿವೆ’ ಎಂದು ದೂರಿದ್ದಾರೆ.

ಆದರೆ ಇಂಥ ಆರೋಪ ತಳ್ಳಿಹಾಕಿರುವ ಫೌಸಿ, ‘ವೈರಾಣು ಮೂಲದ ತನಿಖೆ ಕುರಿತು ನಾನು ಮುಕ್ತ ಮನಸ್ಸು ಹೊಂದಿದ್ದೆ’ ಎಂದಿದ್ದಾರೆ.

ಚೀನಾಗೆ ಫೌಸಿ ಆಗ್ರಹ:

ಈ ನಡುವೆ, ಕೊರೋನಾ ವೈರಸ್‌ನ ಮೂಲವನ್ನು 90 ದಿನಗಳಲ್ಲಿ ಪತ್ತೆ ಮಾಡಿ ಎಂದು ಗುಪ್ತಚರ ಇಲಾಖೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೂಚನೆ ನೀಡಿದ ಬೆನ್ನಲ್ಲೇ, ವುಹಾನ್‌ ಲ್ಯಾಬ್‌ನ ಸಿಬ್ಬಂದಿಯ ವೈದ್ಯಕೀಯ ವರದಿ ಬಿಡುಗಡೆ ಮಾಡಿ ಎಂದು ಡಾ| ಆ್ಯಂಟನಿ ಫೌಸಿ, ಚೀನಾ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘2019ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾದ ವುಹಾನ್‌ ಲ್ಯಾಬ್‌ನ ಮೂವರು ಸಿಬ್ಬಂದಿಗಳ ವೈದ್ಯಕೀಯ ವರದಿಯನ್ನು ನಾನು ನೋಡಬಯಸುತ್ತೇನೆ. ಅವರು ನಿಜವಾಗಿಯೂ ಅನಾರೋಗ್ಯಕ್ಕೆ ತುತ್ತಾಗಿದ್ದರೆ? ತುತ್ತಾಗಿದ್ದರೆ, ಅವರ ಅನಾರೋಗ್ಯಕ್ಕೆ ಕಾರಣವೇನು ಎಂಬುದನ್ನು ತಿಳಿಯಬಯಸುತ್ತೇನೆ ಎಂದು ಚೀನಾ ಸರ್ಕಾರಕ್ಕೆ ಫೌಸಿ ಆಗ್ರಹಿಸಿದ್ದಾರೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ವುಹಾನ್‌ನ ವೈರಾಣು ಪ್ರಯೋಗಾಲಯದಲ್ಲೇ ಚೀನಾ ವಿಜ್ಞಾನಿಗಳು ಕೊರೋನಾ ವೈರಸ್‌ ಸೃಷ್ಟಿಸಿದ್ದರು. ಅದು ಸೋರಿಕೆಯಾಗಿ ಅಲ್ಲಿನ ಮೂವರು ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈರಸ್‌ ಕುರಿತು ಇಡೀ ಜಗತ್ತಿಗೆ ಮಾಹಿತಿ ನೀಡುವ ಮೊದಲೇ ನಡೆದ ಈ ಘಟನೆಯನ್ನು ಚೀನಾ ಮುಚ್ಚಿಹಾಕಿತ್ತು ಎಂಬುದು ಬಹುತೇಕ ದೇಶಗಳ ಅನುಮಾನ. ಆದರೆ ಈ ವಾದವನ್ನು ಚೀನಾ ಸತತವಾಗಿ ನಿರಾಕರಿಸುತ್ತಲೇ ಬಂದಿದೆ.

click me!