
ಯುನಾನ್ (ಸೆ.13) ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಸುಖಾಂತ್ಯ ಕಂಡ ಕೇಸ್ ಸಂಖ್ಯೆ ಕಡಿಮೆ. ನಾಪತ್ತೆಯಾದ ಮಕ್ಕಳ ಹುಡುಕಾಟದಲ್ಲೇ ಜೀವನ ಸವೆಸೆದ ಅದೆಷ್ಟೋ ಪೋಷಕರಿದ್ದಾರೆ. ಹೀಗೆ ವಿವಿದೆಡೆ ನಾಪತ್ತೆಯಾದ 90ಕ್ಕೂ ಹೆಚ್ಚು ಮಕ್ಕಳ ಫೋಟೋವನ್ನು ವ್ಯಕ್ತಿಯೊಬ್ಬ ತನ್ನ ದುಬಾರಿ ಪೊರ್ಶೆ ಕಾರಿನ ಮೇಲೆ ಅಂಟಿಸಿದ್ದಾನೆ. ಬಳಿಕ ತನ್ನ ಬಿಡುವಿನ ವೇಳೆಯಲ್ಲಿ ನಗರ, ಪಟ್ಟಣ, ಗ್ರಾಮಗಳಲ್ಲಿ ಸುತ್ತಾಟ ಆರಂಭಿಸಿದ್ದಾನೆ. ಈತನ ಕಾರು ನೋಡಿದ ನಾಪತ್ತೆ ಮಕ್ಕಳ ಫೋಟೋ ಅಂಟಿಸಿ ಪ್ರಚಾರ ಗಿಟ್ಟಿಸುತ್ತಿದ್ದಾನೆ ಎಂದು ಟೀಕಿಸಿದ್ದರು. ಆದರೆ ಈ ಟೀಕೆಗಳ ನಡುವೆ ಅಚ್ಚರಿ ಫಲಿತಾಂಶ ಸಿಕ್ಕಿದೆ. 90 ಮಕ್ಕಳ ಪೈಕಿ ಒಂದು ಮಗು ಪೋಷಕರ ಮಡಿಲು ಸೇರಿದೆ.
ಚೀನಾದ ಯುನಾನ್ ಪ್ರಾಂತ್ಯದ ಡು ಲಿನ್ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ. ನಾಪತ್ತೆಯಾದ ಮಕ್ಕಳ ಪತ್ತೆಗೆ ತನ್ನ ಕೈಲಾದ ಸಹಾಯ ಮಾಡಲು ಡು ಲಿನ್ ಮುಂದಾಗಿದ್ದಾನೆ. ಇದಕ್ಕಾಗಿ ತನ್ನ ದುಬಾರಿ ಪೊರ್ಶೆ ಕಾರಿಗೆ ವಿವೆದೆಡೆ ನಾಪತ್ತೆಯಾದ 90 ಮಕ್ಕಳ ಫೋಟೋವನ್ನು ಪ್ರಿಂಟ್ ತೆಗೆದು ಅಂಟಿಸಿದ್ದಾನೆ. ಅವರ ಹೆಸರು, ಪೋಷಕರ ಹೆಸರು, ಸಂಪರ್ಕ ಸಂಖ್ಯೆ ಸೇರಿದಂತೆ ಕೆಲ ಮಾಹಿತಿ ಒಳಗೊಂಡ ಫೋಟೋ ಅಂಟಿಸಿದ್ದಾನೆ. ಬಳಿಕ ತನ್ನ ಬಿಡುವಿನ ವೇಳೆಯಲ್ಲಿ ಕಾರಿನ ಮೂಲಕ ಸುತ್ತಾಟ ಆರಂಭಿಸಿದ್ದಾನೆ.
ಪ್ರತಿ ನಗರ,ಪಟ್ಟಣ, ಗ್ರಾಮಕ್ಕೆ ತೆರಳಿದಾಗ ತನ್ನ ಮೊಬೈಲ್ ಮೂಲಕ ಕಾರು ಆ ಪಟ್ಟಣದ ವಿಡಿಯೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ. ಈತನ ಪೋಸ್ಟ್, ಕಾರು ನೋಡಿದ ಹಲವರು ಪ್ರಚಾರದ ಗಿಮಿಕ್ ಎಂದಿದ್ದರು. ಹಲವರು ಕಾರಿನ ವಿಡಿಯೋ ತೆಗೆದು ಪೋಸ್ಟ್ ಮಾಡಿ ಮೆಚ್ತುಗೆ ಸೂಚಿಸಿದ್ದರೆ, ಮತ್ತೆ ಹಲವರು ಇದು ಪಬ್ಲಿಸಿಟಿ ಎಂದು ಟೀಕಿಸಿದ್ದರು. ಆದರೆ ಡು ಲಿನ್ ಈ ಟೀಕೆಗೆ ತಲೆಕೆಡಿಸಿಕೊಂಡಿರಲಿಲ್ಲ. ತನ್ನ ಪಾಡಿಗೆ ಕಾರಿನಲ್ಲಿ ಸುತ್ತಾಟ ಮುಂದುವರಿಸಿದ್ದಾನೆ.
ಈತನ ಕಾರು ಹಲವೆಡೆ ತಲುಪಿದೆ. ಈ ಪೈಕಿ ಒಂದು ಪಟ್ಟಣದಲ್ಲಿ ಕಾರಿನಲ್ಲಿ ಅಂಟಿಸಿದ ನಾಪತ್ತೆ ಮಗುವಿನ ಫೋಟೋ ನೋಡಿ ಕೆಲವರು ಗುರುತಿಸಿದ್ದಾರೆ. ಈ ಮಗುವನ್ನು ತಾವು ನೋಡಿರುವುದಾಗಿ ಹೇಳಿದ್ದಾರೆ. ಟ್ರೇಸ್ ಮಾಡಿದಾಗ ಮಗು ಪತ್ತೆಯಾಗಿದೆ. ಪೊಲೀಸರ ನೆರವಿನೊಂದಿಗೆ ಮಗು ಪೋಷಕರ ಮಡಿಲು ಸೇರಿದೆ.
ತನ್ನ ಪ್ರಯತ್ನದಿಂದ ಒಂದು ಮಗು ಪೋಷಕರ ಮಡಿಲು ಸೇರಿದೆ. ಒಂದು ಕುಟುಂಬದಲ್ಲಿ ನಗು, ಸಂತೋಷ ಮರಳಿ ಬಂದಿದೆ ಎಂದು ಡು ಲಿನ್ ಸಂತಸ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಟೀಕೆಗಳು ಬರುತ್ತಿದೆ. ಆದರೆ ನಾನು ಪ್ರತಿಕ್ರಿಯೆ ನೀಡಿಲ್ಲ. 90 ಮಕ್ಕಳು ಪೋಷಕರ ಮಡಿಲು ಸೇರಬೇಕು ಅನ್ನೋದು ನನ್ನ ಬಯಕೆ. ಇದಕ್ಕಾಗಿ ಹೆಚ್ಚಿನ ಮಂದಿ ಕಾರಿನ ವಿಡಿಯೋ, ಫೋಟೋ ಹಂಚಿಕೊಂಡರೆ ಹೆಚ್ಚಿನ ಜನರಿಗೆ ತಲುಪಲಿದೆ. ಇದರಿಂದ ಮಕ್ಕಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಪ್ರಚಾರಕ್ಕಾಗಿ ಹಲವು ದಾರಿಗಳಿವೆ. ಇದನ್ನೇ ಮಾಡಬೇಕಿಲ್ಲ ಎಂದು ಡು ಲಿನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ