
ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ವಾಲಿ ಜಿಲ್ಲೆಯ ಬಳಿ ಹೊಂಗ್ಡು ಜೆಎಲ್-8 ತರಬೇತಿ ಯುದ್ಧವಿಮಾನ ಪತನವಾಗಿದೆ. ಜೆಟ್ ನಿಯಮಿತ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅನಾಹುತ ನಡೆದಿದೆ. ತಾಂತ್ರಿಕ ದೋಷ ಇದಕ್ಕೆ ಕಾರಣ ಎನ್ನಲಾಗಿದೆ. ಈ ಏರ್ ಜೆಟ್ ಅನ್ನು ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಅಭಿವೃದ್ಧಿ ಪಡಿಸಿತ್ತು. ಇತ್ತೀಚಿನ ದಿನಗಳಲ್ಲಿ ಪಾಕ್‌ನಲ್ಲಿ ಪತನವಾದ 7ನೇ ವಿಮಾನ ಇದು ಎಂದು ಗೊತ್ತಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಇಬ್ಬರು ಪೈಲಟ್‌ಗಳು ಜೆಟ್‌ನಿಂದ ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಪತನದ ಬಗ್ಗೆ ಇದುವರೆಗೂ ಪಾಕಿಸ್ತಾನ ವಾಯು ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಮಾನವು ಪತನಗೊಳ್ಳುವ ಕೆಲವೇ ಕ್ಷಣಗಳ ಮುನ್ನ ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ‘ಎಜೆಕ್ಟ್’ (Eject) ಆಗುವ ಮೂಲಕ ಪ್ಯಾರಾಚೂಟ್ ಸಹಾಯದಿಂದ ಕೆಳಕ್ಕೆ ಜಿಗಿದು ಅತ್ಯಂತ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸ್ಥಳದಲ್ಲಿ ಯುದ್ಧವಿಮಾನದ ಅವಶೇಷಗಳು ಹೊತ್ತಿ ಉರಿಯುತ್ತಿರುವ ಮತ್ತು ಪೈಲಟ್‌ಗಳು ಗಾಳಿಯಲ್ಲಿ ತೇಲಿ ಬರುತ್ತಿರುವ ನಾಟಕೀಯ ದೃಶ್ಯಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ. ಈ ಅಪಘಾತದ ತೀವ್ರತೆಗೆ ವಿಮಾನವು ಸಂಪೂರ್ಣವಾಗಿ ಜಖಂಗೊಂಡಿದೆ.
ಈ ಹೊಂಗ್ಡು ಜೆಎಲ್-8 (ಕರಕೋರಂ-8 ಎಂದೂ ಕರೆಯಲ್ಪಡುವ) ಜೆಟ್ ವಿಮಾನವನ್ನು ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದವು. ಪಾಕ್ ವಾಯುಪಡೆಯು ತನ್ನ ಪೈಲಟ್‌ಗಳಿಗೆ ಸುಧಾರಿತ ತರಬೇತಿ ನೀಡಲು ಈ ವಿಮಾನಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತದೆ. ಆದರೆ ಈಗಿನ ಅಪಘಾತವು ಚೀನಾ ನಿರ್ಮಿತ ರಕ್ಷಣಾ ಸಾಮಗ್ರಿಗಳ ಗುಣಮಟ್ಟ ಮತ್ತು ನಿರ್ವಹಣೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.
ಪಾಕಿಸ್ತಾನದ ಮಿಯಾನ್ವಾಲಿ ಪ್ರದೇಶವು ಐತಿಹಾಸಿಕವಾಗಿ ವಾಯುಪಡೆಯ ಹಲವು ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿದೆ. ಕಳೆದ ಎರಡು ದಶಕಗಳಲ್ಲಿ ಇಲ್ಲಿ ಹಳೆಯ ಮಾದರಿಯ ಮತ್ತು ತರಬೇತಿ ವಿಮಾನಗಳು ಸರಣಿ ಅಪಘಾತಕ್ಕೀಡಾಗಿರುವುದು ವಾಯುಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದೇ ಮಿಯಾನ್ವಾಲಿ ಬಳಿ ತರಬೇತಿ ನಿರತ ‘FT-7’ ವಿಮಾನವೊಂದು ಪತನಗೊಂಡು, ಅದರಲ್ಲಿದ್ದ ಇಬ್ಬರೂ ಪೈಲಟ್‌ಗಳು ದುರ್ಮರಣಕ್ಕೀಡಾಗಿದ್ದರು. ಒಂದು ಅಂಕಿ-ಅಂಶದ ಪ್ರಕಾರ, ಕಳೆದ 18 ವರ್ಷಗಳಲ್ಲಿ ಸುಮಾರು 14 'FT-7' ಮತ್ತು ಅದರ ಇತರ ರೂಪಾಂತರದ ವಿಮಾನಗಳು ಪತನಗೊಂಡಿವೆ.
ಇದೇ ಭಾಗದಲ್ಲಿ 'F-7' ಫೈಟರ್ ಜೆಟ್ ತಾಂತ್ರಿಕ ವೈಫಲ್ಯದಿಂದಾಗಿ ಪತನಗೊಂಡಿತ್ತು. ಆ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಹೊರಬರಲು ಸಾಧ್ಯವಾಗದೆ ವಿಂಗ್ ಕಮಾಂಡರ್ ಮೊಹಮ್ಮದ್ ಶಹಜಾದ್ ಅವರು ಪ್ರಾಣ ಕಳೆದುಕೊಂಡಿದ್ದರು. ಒಂದು ದಶಕದ ಅವಧಿಯಲ್ಲಿ ಕನಿಷ್ಠ ಹತ್ತು F-7PG ಮತ್ತು FT-7 ವಿಮಾನಗಳು ಇಲ್ಲಿ ಅಪಘಾತಕ್ಕೀಡಾಗಿವೆ.
2020 ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಗಣರಾಜ್ಯೋತ್ಸವದ ಪೂರ್ವಾಭ್ಯಾಸದ ವೇಳೆಯಲ್ಲಿ ಪಾಕಿಸ್ತಾನದ ಅತ್ಯಾಧುನಿಕ ಎಫ್-16 (F-16) ಯುದ್ಧವಿಮಾನ ಪತನಗೊಂಡು ದೊಡ್ಡ ಮಟ್ಟದ ಸುದ್ದಿಯಾಗಿತ್ತು.
ಪಾಕಿಸ್ತಾನ ವಾಯುಪಡೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಈ ಅಪಘಾತಗಳಿಗೆ ಅಲ್ಲಿನ ವಾಯುನೆಲೆಯಲ್ಲಿರುವ ಹಳೆಯ ವಿಮಾನಗಳ ಅತಿಯಾದ ಬಳಕೆ ಹಾಗೂ ಸರಿಯಾದ ತಾಂತ್ರಿಕ ನಿರ್ವಹಣೆ ಇಲ್ಲದಿರುವುದೇ ಮುಖ್ಯ ಕಾರಣ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ತನ್ನ ಯುದ್ಧವಿಮಾನಗಳ ಆಧುನೀಕರಣ ಮತ್ತು ಬಿಡಿಭಾಗಗಳ ಪೂರೈಕೆ ದೊಡ್ಡ ಸವಾಲಾಗಿದೆ.
ಪ್ರತಿ ಅಪಘಾತದ ನಂತರವೂ ಪಾಕಿಸ್ತಾನ ವಾಯುಪಡೆಯು ಮೂಲ ಕಾರಣವನ್ನು ಪತ್ತೆಹಚ್ಚಲು ಔಪಚಾರಿಕ ತನಿಖಾ ಸಮಿತಿಗಳನ್ನು ರಚಿಸುತ್ತದೆ. ಆದರೆ, ಈ ತನಿಖಾ ವರದಿಗಳು ಸಾರ್ವಜನಿಕವಾಗಿ ಹೊರಬರಲು ದೀರ್ಘ ಸಮಯ ತೆಗೆದುಕೊಳ್ಳುವುದರಿಂದ ವಾಯುಪಡೆಯ ಆಂತರಿಕ ದೋಷಗಳು ನಿರಂತರವಾಗಿ ಮುಚ್ಚಿಹೋಗುತ್ತಿವೆ ಎಂಬ ಟೀಕೆಗಳೂ ಕೇಳಿಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ