ಎನ್‌ವಿಡಿಯಾ ಮುಖ್ಯಸ್ಥ ಜೆನ್‌ಸೆನ್‌ ಹುವಾಂಗ್‌ ಹನಿಟ್ರ್ಯಾಪ್‌ಗೆ ಚೀನಾ ಮಹಿಳೆ ಯತ್ನ!

Published : Oct 31, 2026, 08:08 AM IST
Jensen Huang

ಸಾರಾಂಶ

ಎನ್‌ವಿಡಿಯಾ ಮುಖ್ಯಸ್ಥ ಜೆನ್‌ಸೆನ್‌ ಹುವಾಂಗ್‌ ಅವರೊಂದಿಗೆ ಸಂಪರ್ಕದಲ್ಲಿದ್ದ ಚೀನೀ ಮಹಿಳೆ ಆಲಿಸ್‌ ಹುವಾಂಗ್‌ ಓರ್ವ ಗೂಢಚಾರಿಣಿ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಆರೋಪಿಸಿದೆ. ಈಕೆಯ ಮೂಲಕ ಅಮೆರಿಕದ ಸೂಕ್ಷ್ಮ ಮಾಹಿತಿಗಳು ಹಾಗೂ ನಿರ್ಬಂಧಿತ ಚಿಪ್‌ಗಳು ಚೀನಾಗೆ ರವಾನೆಯಾಗಿರುವ ಆತಂಕ ವ್ಯಕ್ತವಾಗಿದೆ.

ನ್ಯೂಯಾರ್ಕ್‌: ಚಿಪ್‌ ಉತ್ಪಾದನೆಯಲ್ಲಿ ಜಗತ್ತಿನ ಮುಂಚೂಣಿ ಕಂಪನಿಯಾದ ಎನ್‌ವಿಡಿಯಾ ಮುಖ್ಯಸ್ಥ ಜೆನ್‌ಸೆನ್‌ ಹುವಾಂಗ್‌ ಅವರೊಂದಿಗೆ ಸಂಬಂಧದಲ್ಲಿದ್ದ ಚೀನೀ ಮಹಿಳೆಯೊಬ್ಬಳು ಆ ರಾಷ್ಟ್ರದ ಗೂಢಚಾರಿಣಿ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಹೇಳಿರುವುದಾಗಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಇದರ ಬೆನ್ನಲ್ಲೇ, ಅಮೆರಿಕದಿಂದ ಕೆಲ ಸೂಕ್ಷ್ಮ ಮಾಹಿತಿಗಳು ಚೀನಾಗೆ ಸೋರಿಕೆಯಾಗಿರುವ ಆತಂಕ ಮನೆಮಾಡಿದೆ. ಆದರೆ ಈ ಆರೋಪವನ್ನು ಚೀನಾ ತಳ್ಳಿಹಾಕಿದೆ.

ಆಲಿಸ್‌ ಹುವಾಂಗ್‌ (ಹುವಾಂಗ್‌ ಲೆ) ಎಂದು ಗುರುತಿಸಲಾಗಿರುವ ಮಹಿಳೆ ಚೀನಾದ ಪ್ರಜೆಯಾಗಿದ್ದು, ಸಿಂಗಾಪುರ ಮೂಲದ ಡೇಟಾ ಸೆಂಟರ್‌ ಕಂಪನಿಯಲ್ಲಿ ಹಿರಿಯ ಕಾರ್ಯನಿರ್ವಾಹಕಿಯಾಗಿದ್ದಾರೆ.

ಆತಂಕವೇಕೆ?

ಎನ್‌ವಿಡಿಯಾ ಸಿಇಒಗೆ ಹತ್ತಿರವಾಗುವ ಮೂಲಕ ಆ ಮಹಿಳೆ ಕಂಪನಿಯ ಆಂತರಿಕ ವಿಷಯಗಳು ಹಾಗೂ ಟ್ರಂಪ್‌ ಅವರ ಚಿಂತನೆಗಳ ಬಗ್ಗೆ ಮಾಹಿತಿ ಕಲೆಹಾಕಿ ಅದನ್ನು ತನ್ನ ತವರುದೇಶಕ್ಕೆ ರವಾನಿಸಿರುವ ಆತಂಕವಿದೆ. ಜತೆಗೆ, ಚಿಪ್‌ಗಳು ಚೀನಾಗೆ ರಫ್ತಾಗುವುದರ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಆದರೆ ಸಿಂಗಾಪುರದ ಮೆಗಾಸ್ಪೀಡ್ ಎಂಬ ಕಂಪನಿಯು ಎನ್‌ವಿಡಿಯಾ ಚಿಪ್‌ ಖರೀದಿಸಿ ಅದನ್ನು ಚೀನಾಗೆ ನೀಡುತ್ತಿತ್ತು. ಇದೇ ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಹುವಾಂಗ್‌, ಚಿಪ್‌ಗಳನ್ನೂ ಚೀನಾಗೆ ರಹಸ್ಯವಾಗಿ ರವಾನಿಸಿದ ಶಂಕೆಯಿದೆ. ಆದರೆ ಇದನ್ನು ಎನ್‌ವಿಡಿಯಾ ತಿರಸ್ಕರಿಸಿದೆ.

ಚೀನಾ ಪ್ರತಿಕ್ರಿಯೆ

ಅಮೆರಿಕದ ಗುಪ್ತಚರ ಸಂಸ್ಥೆಯ ವರದಿಯನ್ನು ತಳ್ಳಿಹಾಕಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್‌, ಆರೋಪಗಳನ್ನು ಆಧಾರರಹಿತ ಎಂದಿದ್ದು, ‘ಇದು ಚೀನಾದ ವಿರುದ್ಧದ ಅಪಪ್ರಚಾರ'' ಎಂದು ಕಿಡಿ ಕಾರಿದ್ದಾರೆ.

ಟ್ರಂಪ್‌ ಮೌನ

ಹುವಾಂಗ್‌ ಜೆನ್‌ಸೆನ್‌ ಜತೆ ಆಪ್ತವಾಗಿರುವ ಬಗೆಗಿನ ಗುಪ್ತಚರ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು ವರ್ಷದ ಹಿಂದೆಯೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಿಳಿಸಿದ್ದರು. ಆದರೆ, ಎನ್‌ವಿಡಿಯಾದ ಚಿಪ್‌ಗಳ ಮಾರಾಟಕ್ಕೆ ಅಡ್ಡಿಯಾಗಬಹುದು ಮತ್ತು ಚೀನಾದೊಂದಿಗಿನ ವ್ಯಾಪಾರ ಸಂಬಂಧ ಹದಗೆಡಬಹುದು ಎಂಬ ಕಾರಣಕ್ಕೆ ಟ್ರಂಪ್‌ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Israel US Election: ಜಾಗತಿಕ ರಾಜಕೀಯದ ಚದುರಂಗದಾಟ; ಯಾರೇ ಗೆದ್ದರೂ 'ಚೆಕ್‌ಮೇಟ್‌' ಮಾತ್ರ ಭಾರತದ್ಧೆ!
ಶಾಲೆ ಬಿಟ್ಟು 100 ರೂ ಸಂಬಳಕ್ಕೆ ಸೇರಿಕೊಂಡ ಈಕೆ ಈಗ ನಂ.1 ಶ್ರೀಮಂತೆ, ₹1.80 ಲಕ್ಷ ಕೋಟಿ ಸಂಪತ್ತು