ಮಾರಕ ಕೊರೋನಾ ವೈರಸ್‌ಗೆ ಚೀನಾ ತಲ್ಲಣ! ಮತ್ತಷ್ಟು ಬಲಿ

By Kannadaprabha NewsFirst Published Jan 25, 2020, 7:44 AM IST
Highlights

ಚೀನಾದಲ್ಲಿ ಕರೋನಾ ವೈರಸ್‌ಗೆ ಮರಣ ಹೊಂದುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಲ್ಲದೇ ಸೋಂಕು ಪೀಡಿತರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಲೆ ಇದೆ. 

ಬೀಜಿಂಗ್‌ [ಜ.25]:  ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್‌ ಮತ್ತಷ್ಟು ವ್ಯಾಪಕಗೊಂಡಿದ್ದು ಹೊಸದಾಗಿ 9 ಮಂದಿಯನ್ನು ಬಲಿ ಪಡೆದಿದೆ. ಇದರಿಂದಾಗಿ ಈ ವೈರಾಣುಗೆ ಈವರೆಗೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇದೇ ವೇಳೆ 630ರಷ್ಟಿದ್ದ ಸೋಂಕಿತರ ಸಂಖ್ಯೆ 800ಕ್ಕೆ ಹೆಚ್ಚಳಗೊಂಡಿದ್ದು, ಕಮ್ಯುನಿಸ್ಟ್‌ ದೇಶದಲ್ಲಿ ತೀವ್ರ ಆತಂಕದ ವಾತಾವರಣ ಕಂಡುಬರುತ್ತಿದೆ.

ವೈರಾಣುಬಾಧೆ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಸಾಕಷ್ಟುಕ್ರಮಗಳನ್ನು ಕೈಗೊಂಡ ಹೊರತಾಗಿಯೂ, ಬಾಧೆ ಹಬ್ಬುವುದು ನಿಂತಿಲ್ಲವಾದ ಕಾರಣ, ಐದು ನಗರಗಳಲ್ಲಿ ಗುರುವಾರ ಬಂದ್‌ ಘೋಷಿಸಿದ್ದ ಚೀನಾ ಸರ್ಕಾರ, ಅದನ್ನು ಶುಕ್ರವಾರ 13 ನಗರಗಳಿಗೆ ವಿಸ್ತರಣೆ ಮಾಡಿದೆ. ಇದರಿಂದಾಗಿ ಒಟ್ಟು 4.1 ಕೋಟಿ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ.

440 ಜನರಿಗೆ ಕೊರೋನಾ ವೈರಸ್‌ ಸೋಂಕು, ಮೃತರ ಸಂಖ್ಯೆ ಏರಿಕೆ...

ಕ್ಸಿಯಾನ್ನಿಂಗ್‌, ಕ್ಸಿಯಾವ್‌ಗಾನ್‌, ಎನ್ಶಿ ಹಾಗೂ ಝಿಜಿಯಾಂಗ್‌ ಸೇರಿದಂತೆ 13 ನಗರಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಝಿಜಿಯಾಂಗ್‌ನಲ್ಲಿ ಔಷಧ ಅಂಗಡಿ ಬಿಟ್ಟು ಉಳಿದೆಲ್ಲಾ ಮಳಿಗೆಗಳನ್ನು ಮುಚ್ಚಿಸಲಾಗಿದೆ. ಎನ್ಶಿಯಲ್ಲಿ ಎಲ್ಲ ಮನರಂಜನೆ ತಾಣಗಳಿಗೆ ಬಾಗಿಲು ಎಳೆಯಲಾಗಿದೆ. ಉಳಿದಂತೆ ನಗರಗಳಲ್ಲಿ ರೈಲು, ಬಸ್‌, ದೋಣಿ ಸಂಚಾರ, ಪ್ರವಾಸ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಜ.25ರಂದು ಚೀನಾ ಜನರಿಗೆ ಹೊಸ ವರ್ಷವಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟುಸಂಖ್ಯೆಯ ಜನರು ವಿವಿಧೆಡೆಯಿಂದ ಆಗಮಿಸುತ್ತಾರೆ. ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ. ಇದೀಗ ಸರ್ಕಾರ ಬಂದ್‌ ಘೋಷಿಸಿರುವುದರಿಂದ ಅವುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.

click me!