
ಬೀಜಿಂಗ್(ಮಾ.06): ರಷ್ಯಾ ಉಕ್ರೇನ್ ಯುದ್ಧ ಆರಂಭವಾದ 10 ದಿನಗಳ ನಂತರ ಚೀನಾ ತನ್ನ ದೇಶದ ಪ್ರಜೆಗಳನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲು ಆರಂಭಿಸಿದೆ.
ಭಾರತ 1 ವಾರದ ಹಿಂದಿನಿಂದಲೇ ತನ್ನ ಪ್ರಜೆಗಳನ್ನು ರಕ್ಷಣೆ ಮಾಡಲು ಆರಂಭಿಸಿತ್ತು. ಆದರೆ ಚೀನಾ ಸುಮ್ಮನಿದ್ದ ಬಗ್ಗೆ ಚೀನೀಯರೇ ಕಿಡಿಕಾರಿದ್ದರು. ಇದಾದ ಕೆಲವು ದಿನಗಳ ಬಳಿಕ ಚೀನಾ ತನ್ನವರ ರಕ್ಷಣೆಗೆ ಮುಂದಾಗಿದೆ.
ಶನಿವಾರ ಚೀನಾದ ಏರ್ ಚೀನಾ ಸಂಸ್ಥೆಯ ಸಿಎ702 ಚಾರ್ಟರ್ಡ್ ವಿಮಾನ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಚೀನಾಗೆ ಬಂದು ತಲುಪಿದೆ. ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಸುಮಾರು 3 ಸಾವಿರ ಚೀನಾ ಪ್ರಜೆಗಳನ್ನು ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ಸ್ಥಳಾಂತರಿಸಿದ್ದು, ಅಲ್ಲಿಂದ ಸ್ವದೇಶಕ್ಕೆ ಕರೆತರುತ್ತಿದೆ.
ಚೀನಾ ಬಳಕೆ ಮಾಡುತ್ತಿರುವ ಈ ವಿಮಾನಗಳು ಒಂದು ಬಾರಿಗೆ ಸುಮಾರು 301 ಜನರನ್ನು ಒಂದು ಬಾರಿಗೆ ಕರೆದೊಯ್ಯಲಿವೆ. ರೊಮೆನಿಯಾದಿಂದ ಚೀನಾದ ಪ್ರಜೆಗಳನ್ನು ಸ್ಥಳಾಂತರಿಸಲು ಶನಿವಾರ ಮತ್ತು ಭಾನುವಾರ ಚೀನಾ ಏರ್‌ನ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
ಭಾರತೀಯರ ತೆರವಿಗೆ ವ್ಯವಸ್ಥೆ: ವಿಶ್ವಸಂಸ್ಥೆಯಲ್ಲೂ ರಷ್ಯಾ ಭರವಸೆ
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ದೇಶಗಳ ನಾಗರಿಕರ ಸ್ಥಳಾಂತರಕ್ಕೆ ಬಸ್ಸುಗಳ ವ್ಯವಸ್ಥೆ ಮಾಡುವುದಾಗಿ ರಷ್ಯಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಶನಿವಾರ ಮಾಹಿತಿ ನೀಡಿದೆ.
ಸದ್ಯ ಪೂರ್ವ ಉಕ್ರೇನ್‌ನ ಖಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದಾಗಿ ರಷ್ಯಾ ತಿಳಿಸಿದೆ.
ರಷ್ಯಾ, ಉಕ್ರೇನ್‌ನಲ್ಲಿರುವ ನ್ಯುಕ್ಲಿಯರ್ ಪವರ್ ಪ್ಲಾಂಟ್ ವಶಕ್ಕೆ ಪಡೆದ ಬೆನ್ನಲ್ಲೇ ಭದ್ರತಾ ಮಂಡಳಿಯ 15 ರಾಷ್ಟ್ರಗಳು ಶುಕ್ರವಾರ ತುರ್ತು ಸಭೆ ನಡೆಸಿದವು. ಈ ಸಭೆಯಲ್ಲಿ ರಷ್ಯಾದ ಶಾಶ್ವತ ಪ್ರತಿನಿಧಿ, ‘ವಿದೇಶಿಯರ ಶಾಂತಿಯುತ ಸ್ಥಳಾಂತರ ಪ್ರಕ್ರಿಯೆಗೆ ರಷ್ಯಾ ಮಿಲಿಟರಿ ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಆದರೆ ಉಕ್ರೇನ್ 3700 ಭಾರತೀಯರು, 2700 ವಿಯೆಟ್ನಾಂ, ಚೀನಾದ 121 ಜನರು ಸೇರಿ ಅನೇಕರನ್ನು ಖಾರ್ಕಿವ್ ಮತ್ತು ಸುಮಿನಲ್ಲಿ ಒತ್ತೆಯಾಗಿರಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ.
‘ರಷ್ಯಾದ ಬೆಲ್‌ಗೋರ್ಡ್ ಪ್ರದೇಶದಲ್ಲಿ ಖಾರ್ಕಿವ್ ಮತ್ತು ಸುನಿಯಿಂದ ಸ್ಥಳಾಂತರ ಪ್ರಕ್ರಿಯೆಗೆ 130 ಬಸ್ಸುಗಳು ಸಜ್ಜಾಗಿವೆ. ಅವರನ್ನು ವಾಪಸ್ ಬೆಲ್‌ಗೋರ್ಡ್‌ಗೆ ಕರೆತಂದು ಅಲ್ಲಿಂದ ಸ್ವದೇಶಕ್ಕೆ ಕಳುಹಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಆದರೆ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ಆರೋಪವನ್ನು ಭಾರತ ತಳ್ಳಿಹಾಕಿದೆ.
ಜನರ ಕಾಪಾಡುವ ರಷ್ಯಾ ‘ಕದನ ವಿರಾಮ’ ವಿಫಲ
ಯುದ್ಧಪೀಡಿತ ಉಕ್ರೇನ್‌ನ ಎರಡು ನಗರಗಳಿಂದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಉದ್ದೇಶಿದಿಂದ ರಷ್ಯಾ 2 ನಗರಗಳಲ್ಲಿ ಶನಿವಾರ ಸಾರಿದ್ದ ಕೆಲ ಹೊತ್ತಿನ ಕದನ ವಿರಾಮ ವಿಫಲವಾಗಿದೆ. ಕದನವಿರಾಮ ಘೋಷಿಸಿದ ಬಳಿಕವೂ ರಷ್ಯಾ ಭಾರೀ ಶೆಲ್ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ಆರೋಪಿಸಿದ್ದು, ಈ ಕದನ ವಿರಾಮ ವಿಫಲವಾದಂತಾಗಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 12:30ರಿಂದ ಮರಿಯುಪೋಲ್ ಮತ್ತು ವೊಲ್ನೋವಖಾದಿಂದ ನಾಗರಿಕರ ತೆರವಿಗೆ ಮಾನವೀಯ ನೆಲೆಯಲ್ಲಿ ಮಿಲಿಟರಿ ಕಾರಾರಯಚರಣೆಯನ್ನು ನಿಲ್ಲಿಸಲಾಗುತ್ತದೆ. ಈ ವೇಳೆ ಆಹಾರ ಮತ್ತು ಔಷಧಿಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ರಷ್ಯಾ ಶನಿವಾರ ಬೆಳಗ್ಗೆ ಘೋಷಿಸಿತ್ತು.
ಅಲ್ಲದೆ, ‘ಮರಿಯುಪೋಲ್‌ನಿಂದ 2 ಲಕ್ಷ ಮಂದಿ ಮತ್ತು ವೊಲ್ನೋವಖಾದಿಂದ 20,000 ಜನರು ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ’ ಎಂದು ರಷ್ಯಾದ ‘ಸ್ಪುಟ್ನಿಕ್’ ಮಾಧ್ಯಮ ವರದಿ ಮಾಡಿತ್ತು.
ಆದರೆ ರಷ್ಯಾ ಎಷ್ಟುಅವಧಿಯವರೆಗೆ ಕದನ ವಿರಾಮ ಇರಲಿದೆ ಎಂಬ ಸ್ಪಷ್ಟಮಾಹಿತಿ ನೀಡಿರಲಿಲ್ಲ. ಇದು ಗೊಂದಲಕ್ಕೆ ಕಾರಣವಾಯಿತು. ಇದರ ನಡುವೆಯೇ, ‘ರಷ್ಯಾ ಮರಿಯುಪೋಲ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಶೆಲ್ ದಾಳಿ ನಡೆಸಿದೆ. ಹೀಗಾಗಿ ಯಾವುದೇ ನಾಗರಿಕರನ್ನು ಸ್ಥಳಾಂತರ ಕಾರ್ಯ ಕೈಗೂಡಲಿಲ್ಲ’ ಎಂದು ಉಕ್ರೇನ್ ಹೇಳಿಕೆ ನೀಡಿದೆ. ಇದರೊಂದಿಗೆ ಕದನವಿರಾಮದ ಆಶಯ ಈಡೇರದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ