ಪೂರ್ವ ಲಡಾಖ್‌ನಿಂದ ಸೇನಾ ಹಿಂಪಡೆತ ಆರಂಭ: ಚೀನಾ

By Suvarna NewsFirst Published Feb 11, 2021, 9:55 AM IST
Highlights

ಪೂರ್ವ ಲಡಾಖ್‌ನಿಂದ ಸೇನಾ ಹಿಂಪಡೆತ ಆರಂಭ: ಚೀನಾ| ಮುಂಚೂಣಿ ವಲಯಗಳಿಂದ ಉಭಯ ದೇಶಗಳ ಸೇನಾ ಕಡಿತ| ಚೀನಾ ಸರ್ಕಾರದ ಹೇಳಿಕೆ ಕುರಿತು ಭಾರತದಿಂದ ಪ್ರತಿಕ್ರಿಯೆ ಇಲ್ಲ

ಬೀಜಿಂಗ್(ಫೆ.11)‌: ಪೂರ್ವ ಲಡಾಖ್‌ನ ಮುಂಚೂಣಿ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ಭಾರತ ಮತ್ತು ಚೀನಾ ಯೋಧರು, ಬುಧವಾರದಿಂದ ಹಂತಹಂತವಾಗಿ ಹಿಂದೆ ಸರಿಯುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಚೀನಾ ಹೇಳಿದೆ. ಉಭಯ ದೇಶಗಳ ನಡುವೆ ನಡೆದ 9ನೇ ಸುತ್ತಿನ ಮಾತುಕತೆಯಂತೆ ಈ ಬೆಳವಣಿಗೆ ಆರಂಭವಾಗಿದೆ ಎಂದು ಚೀನಾದ ಭದ್ರತಾ ಸಚಿವಾಲಯದ ವಕ್ತಾರ ಕರ್ನಲ್‌ ವು ಕ್ವಾನ್‌ ಅವರು ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಬುಧವಾರ ಮಾತನಾಡಿದ ಚೀನಾದ ಅಧಿಕಾರಿ ಕರ್ನಲ್‌ ಕ್ವಾನ್‌, ಜ.24ರಂದು ಉಭಯ ದೇಶಗಳ ನಡುವೆ ನಡೆದ 9ನೇ ಸುತ್ತಿನ ಕಮಾಂಡರ್‌ ಹಂತದ ಮಾತುಕತೆ ವೇಳೆ ಫೆ.10ರಿಂದ ಪ್ಯಾಂಗೋಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ಭಾಗದಿಂದ ಉಭಯ ದೇಶಗಳು ತಮ್ಮ ಸೇನೆಯನ್ನು ಹಂತಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಒಮ್ಮತಕ್ಕೆ ಬರಲಾಗಿತ್ತು. ಅದರಂತೆ ಪ್ರಕ್ರಿಯೆಗಳು ಆರಂಭವಾಗಿದೆ ಎಂದಿದ್ದಾರೆ.

ಚೀನಾ ಸರ್ಕಾರ ಇಂಥದ್ದೊಂದು ಮಹತ್ವದ ಬೆಳವಣಿಗೆ ಬಗ್ಗೆ ಹೇಳಿಕೆ ನೀಡಿದೆಯಾದರೂ, ಭಾರತೀಯ ಸೇನೆ ಅಥವಾ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಲಿ ಸಂಸತ್‌ ಅಧಿವೇಶನ ನಡೆಯುತ್ತಿರುವ ಕಾರಣ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ಅವರು ಗುರುವಾರ ಈ ಕುರಿತು ಅಧಿಕೃತ ಹೇಳಿಕೆ ನೀಡುವ ಸಾಧ್ಯತೆ ಇದೆ.

click me!