ಅರುಣಾಚಲಕ್ಕೆ ಚೀನಾ 3.5 ಲಕ್ಷ ರೂ. ಕೋಟಿ ರೈಲ್ವೆ ಮಾರ್ಗ!| ತ್ವರಿತವಾಗಿ ಪೂರ್ಣಗೊಳಿಸಲು ಕ್ಸಿ ಸೂಚನೆ
ಬೀಜಿಂಗ್(ನ.09): ಭಾರತದ ಅರುಣಾಚಲ ಪ್ರದೇಶ ತನ್ನದು ಎಂದು ಹೇಳುತ್ತಾ ಬಂದಿರುವ ಚೀನಾ ಇದೀಗ ಅರುಣಾಚಲ ಪ್ರದೇಶದ ಗಡಿಯವರೆಗೆ ಹೊಸ ರೈಲ್ವೆ ಮಾರ್ಗ ನಿರ್ಮಾಣವನ್ನು ತ್ವರಿತಗೊಳಿಸಿದೆ. ಈ ಹಿಂದೆಯೇ ಒಪ್ಪಿಗೆ ನೀಡಿದ್ದ ಸುಮಾರು 3.5 ಲಕ್ಷ ಕೋಟಿ ರು. ವೆಚ್ಚದ ಸಿಚುವಾನ್-ಟಿಬೆಟ್ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯನ್ನು ಬೇಗ ಪೂರ್ಣಗೊಳಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಭಾನುವಾರ ಸೂಚನೆ ನೀಡಿದ್ದಾರೆ.
ಚೀನಾದ ಸಿಚುವಾನ್ ಪ್ರಾಂತದ ಯಾನ್‌ನಿಂದ ಟಿಬೆಟ್‌ನ ಲಿಂಝಿವರೆಗಿನ 1,011 ಕಿ.ಮೀ. ಮಾರ್ಗದಲ್ಲಿ ರೈಲ್ವೆ ಹಳಿ ನಿರ್ಮಾಣವಾಗಲಿದೆ. ಲಿಂಝಿ (ನಿಂಗ್ಚಿ) ಊರು ಅರುಣಾಚಲ ಪ್ರದೇಶದ ಗಡಿಯ ಸಮೀಪದಲ್ಲಿದೆ. ಉದ್ದೇಶಿತ ಮಾರ್ಗದಲ್ಲಿ 26 ಸ್ಟೇಶನ್‌ಗಳು ನಿರ್ಮಾಣವಾಗಲಿದ್ದು, 120-200 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದೆ. ಈ ರೈಲ್ವೆ ಮಾರ್ಗವು ಚೆಂಗ್ಡು-ಲ್ಹಾಸಾ (ಟಿಬೆಟ್‌ನ ರಾಜಧಾನಿ) ನಡುವಿನ ಪ್ರಯಾಣದ ಸಮಯವನ್ನು 48 ಗಂಟೆಗಳಿಂದ 13 ಗಂಟೆಗೆ ಕಡಿಮೆ ಮಾಡಲಿದೆ. ಈಗಾಗಲೇ ಲಿಂಝಿಯಲ್ಲಿ ಚೀನಾದ ವಿಮಾನ ನಿಲ್ದಾಣ ಕೂಡ ಇದೆ.
ಈ ರೈಲ್ವೆ ಮಾರ್ಗವು ಟಿಬೆಟ್‌ನಲ್ಲಿ ಚೀನಾ ನಿರ್ಮಿಸುತ್ತಿರುವ 2ನೇ ರೈಲ್ವೆ ಮಾರ್ಗವಾಗಿದೆ. ಈಗಾಗಲೇ ಕ್ವಿಂಘಾಯ್-ಟಿಬೆಟ್ ನಡುವೆ ರೈಲ್ವೆ ಸೇವೆಯಿದೆ. ಅರುಣಾಚಲದ ಗಡಿಗೆ ರೈಲ್ವೆ ಮಾರ್ಗ ನಿರ್ಮಿಸುವ ಮೂಲಕ ಮುಂದೆ ಭಾರತದೊಂದಿಗೆ ಅರುಣಾಚಲಕ್ಕಾಗಿ ಘರ್ಷಣೆ ನಡೆಸುವ ಸಂದರ್ಭ ಬಂದರೆ ಯುದ್ಧ ಸಾಮಗ್ರಿಗಳನ್ನು ಅಲ್ಲಿಗೆ ಸಾಗಿಸುವುದು ಚೀನಾಕ್ಕೆ ಸುಲಭವಾಗಲಿದೆ.