
ಬೀಜಿಂಗ್: ಜನಸಂಖ್ಯಾ ಕುಸಿತ ತಡೆಯುವ ನಿಟ್ಟಿನಲ್ಲಿ ಕಾಂಡೋಮ್ ಸೇರಿ ಗರ್ಭನಿರೋಧಕ ಉತ್ಪನ್ನಗಳು ಹಾಗೂ ಔಷಧಗಳ ಮೇಲೆ ಜ.1ರಿಂದ ಹೆಚ್ಚಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸಲು ಚೀನಾ ಸರ್ಕಾರ ನಿರ್ಧರಿಸಿದೆ. ಗರ್ಭನಿರೋಧಕಗಳ ಮೇಲೆ ಚೀನಾ ಈ ರೀತಿ ತೆರಿಗೆ ವಿಧಿಸುತ್ತಿರುವುದು ಮೂರು ದಶಕಗಳಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ.
ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣಕ್ಕೆ ಚೀನಾವು ದಶಕಗಳ ಹಿಂದೆ ಒಂದೇ ಮಗು ಕಡ್ಡಾಯ ಸೇರಿ ಹಲವು ಕ್ರಮಗಳನ್ನು ಜಾರಿಗೆ ತಂದಿತ್ತು. ಆಗ ಗರ್ಭನಿರೋಧಕಗಳ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಮಾಡಿತ್ತು. ಇದೀಗ ಜನಸಂಖ್ಯಾ ಪ್ರಮಾಣ ತೀವ್ರವಾಗಿ ಕುಸಿಯುತ್ತಿದ್ದಂತೆ ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಕುಟುಂಬ ಹೊಂದುವಂತೆ ಸರ್ಕಾರ ಜನರಿಗೆ ಪ್ರೋತ್ಸಾಹ ನೀಡಲು ಆರಂಭಿಸಿದೆ. ಅದರ ಭಾಗವಾಗಿ ಜ.1ರಿಂದ ಗರ್ಭನಿರೋಧಕ ಔಷಧಗಳು ಮತ್ತು ಕಾಂಡೋಮ್‌ನಂಥ ಉತ್ಪನ್ನಗಳಿಗೆ ಮೌಲ್ಯವರ್ಧಿತ ತೆರಿಗೆಯಿಂದ ಸಿಗುತ್ತಿದ್ದ ವಿನಾಯ್ತಿಯನ್ನು ರದ್ದು ಮಾಡಿ ಹೆಚ್ಚಿನ ವ್ಯಾಟ್ ವಿಧಿಸಲು ನಿರ್ಧರಿಸಿದೆ. ಅದರಂತೆ ಹೊಸ ವರ್ಷದಿಂದ ಕಾಂಡೋಮ್‌ಗಳ ಮೇಲೆ ಶೇ.13ರಷ್ಟು ವ್ಯಾಟ್ ಬೀಳಲಿದೆ ಎಂದು ಹೇಳಲಾಗಿದೆ.
ಸರ್ಕಾರ ನಿಯಂತ್ರಿತ ಸುದ್ದಿ ಸಂಸ್ಥೆಗಳು ಈ ಸುದ್ದಿಗೆ ಹೆಚ್ಚಿನ ಮಹತ್ವ ನೀಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ಸರ್ಕಾರದ ಈ ನಡೆ ವೈರಲ್ ಆಗಿದೆ. ಮಕ್ಕಳನ್ನು ಬೆಳೆಸುವುದಕ್ಕಿಂತ ಕಾಂಡೋಮ್ ಖರೀದಿಸುವುದೇ ಕಡಿಮೆ ವೆಚ್ಚದಾಯಕ ಎಂದು ಅರ್ಥ ಮಾಡಿಕೊಳ್ಳದಷ್ಟು ಜನ ದಡ್ಡರಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡಲು ಆರಂಭಿಸಿವೆ.
ತಜ್ಞರ ಆತಂಕ:
ಸರ್ಕಾರದ ಈ ಕ್ರಮದಿಂದ ಲೈಂಗಿಕ ರೋಗಗಳು ಹೆಚ್ಚಾಗಬಹುದು, ಅನವಶ್ಯಕ ಗರ್ಭಧಾರಣೆ ಪ್ರಕರಣಗಳೂ ಹೆಚ್ಚಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಚೀನಾದ ಕಮ್ಯುನಿಸ್ಟ್ ಸರ್ಕಾರವು ಒಂದೇ ಮಗು ನೀತಿಯನ್ನು 1980ರಿಂದ 2015ರ ವರೆಗೆ ಜಾರಿ ಮಾಡಿತ್ತು. ಆಗ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರ ಮೇಲೆ ಭಾರೀ ಪ್ರಮಾಣದ ದಂಡ ಅಥವಾ ಒಂದು ಮಗುವಿದ್ದರೂ ಮತ್ತೊಮ್ಮೆ ಗರ್ಭಿಣಿಯಾದರೆ ಬಲವಂಥದ ಅಬಾರ್ಷನ್‌ನಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ