
ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಪ್ರತಿತೆರಿಗೆ ಶಾಕ್‌ನಿಂದ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ತತ್ತರಿಸುತ್ತಿದ್ದರೆ, ಟ್ರಂಪ್‌ಗೆ ನೇರ ಸವಾಲು ಹಾಕಿದ್ದ ಚೀನಾ, ಇದೀಗ ದೇಶದ ರಫ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.
ಕಳೆದ ನ.30ಕ್ಕೆ ಅಂತ್ಯಗೊಂಡ ವಾರ್ಷಿಕ ವಹಿವಾಟು ಅವಧಿಯಲ್ಲಿ ಚೀನಾ ದೇಶವು ದಾಖಲೆಯ 1 ಲಕ್ಷ ಕೋಟಿ ಡಾಲರ್ (90 ಲಕ್ಷ ಕೋಟಿ ಡಾಲರ್) ಮಿಗತೆ ವಹಿವಾಟು ಸಾಧಿಸಿದೆ. ಅಂದರೆ ದೇಶಕ್ಕೆ ಆಮದು ಮಾಡಿಕೊಂಡ ವಸ್ತುಗಳ ಮೊತ್ತಕ್ಕಿಂತ ರಫ್ತಿನ ಪ್ರಮಾಣ ಹೆಚ್ಚಿದೆ. ಆಮದು ಮತ್ತು ರಫ್ತಿನ ನಡುವಿನ ವ್ಯತ್ಯಾಸ 1 ಲಕ್ಷ ಕೋಟಿ ಡಾಲರ್‌ನಷ್ಟು ದಾಖಲಾಗಿದೆ. ನವೆಂಬರ್ 30ಕ್ಕೆ ಅಂತ್ಯಗೊಂಡ ವರ್ಷದಲ್ಲಿ ಚೀನಾ 2.6 ಲಕ್ಷ ಕೋಟಿ ಡಾಲ್ ಮೊತ್ತದ ವಸ್ತು ಆಮದು ಮಾಡಿಕೊಂಡಿದ್ದರೆ, ಅದೇ ಅವಧಿಯಲ್ಲಿ 3.6 ಲಕ್ಷ ಕೋಟಿ ರು. ಮೊತ್ತದ ವಸ್ತುಗಳನ್ನು ರಫ್ತು ಮಾಡಿದೆ. ಇದು ಇತಿಹಾಸದಲ್ಲೇ ಯಾವುದೇ ದೇಶವೊಂದರ ಗರಿಷ್ಠ ವ್ಯಾಪಾರ ಮಿಗತೆ ಪ್ರಮಾಣವಾಗಿದೆ. ಈ ಮೂಲಕ ಅಮೆರಿಕದ ತೆರಿಗೆ ಬೆದರಿಕೆಗೆ ತನ್ನ ಕಾರ್ಯತಂತ್ರದ ಮೂಲಕ ಉತ್ತರ ನೀಡಿದೆ.
ಅಮೆರಿಕದ ವಸ್ತುಗಳ ಮೇಲೆ ಚೀನಾ ಭಾರೀ ತೆರಿಗೆ ಹೇರುತ್ತಿದೆ ಎಂದು ಆರೋಪಿಸಿದ್ದ ಟ್ರಂಪ್, ಚೀನಾದ ಉತ್ಪನಗಳ ಮೇಲೆ ಶೇ.145ರಷ್ಟು ಪ್ರತಿ ತೆರಿಗೆ ಹೇರಿದ್ದರು. ಬಳಿಕ ಚೀನಾ ಕೂಡಾ ಅಮೆರಿಕದ ವಸ್ತುಗಳ ಆಮದಿನ ಮೇಲೆ ಪ್ರತಿ ತೆರಿಗೆ ಹೆಚ್ಚಿಸಿ ಸವಾಲು ಹಾಕಿತ್ತು.
ಆದರೆ ಸವಾಲು ಹಾಕಿ ಸುಮ್ಮನೆ ಕೂರದ ಚೀನಾ, ಅಮೆರಿಕಕ್ಕೆ ರಫ್ತು ಕಡಿತ ಮಾಡಿ, ತನ್ನ ಉತ್ಪನ್ನಗಳಿಗೆ ಕಡಿಮೆ ತೆರಿಗೆ ಇರುವ ಯುರೋಪ್, ಆಗ್ನೇಯ ಏಷ್ಯಾ, ಭಾರತ ಮತ್ತು ಆಫ್ರಿಕಾ ದೇಶಗಳಿಗೆ ರಫ್ತು ಹೆಚ್ಚು ಮಾಡಿ ಜಾಣತನದಿಂದ ದಾಖಲೆ ಪ್ರಮಾಣ ಆದಾಯ ಸಂಗ್ರಹಿಸಿದೆ. ಈ ಅವಧಿಯಲ್ಲಿ ಅಮೆರಿಕ ಸೇರಿದಂತೆ ಎಲ್ಲಾ ದೇಶಗಳಿಂದ ಆಮದು ಮಾಡಿಕೊಂಡ ಚೀನಾ ರಫ್ತು ಹೆಚ್ಚಿಸಿಕೊಂಡು, ಅಮೆರಿಕದಿಂದ ತೆರಿಗೆ ದಾಳಿಗೆ ಒಳಗಾದ ದೇಶಗಳಿಗೆ ಮಾದರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ