
ಒಳ್ಳೆಯ ಕ್ರೈಮ್-ಥ್ರಿಲ್ಲರ್ ಸಿನಿಮಾಗಳಲ್ಲೂ ಊಹಿಸಲು ಸಾಧ್ಯವಾಗದಂತಹ ನೈಜ ಘಟನೆಯೊಂದು ಬೆಳಕಿಗೆ ಬಂದಿದೆ. ತಾನು ಮಾಡಿದ್ದ ಅಪರಾಧದಿಂದ ಬಚಾವಾಗಲು, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ತನ್ನದೇ ಅವಳಿ ಸಹೋದರನ ಗುರುತನ್ನು ಕದ್ದು, ಬರೋಬ್ಬರಿ 19 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ ಬದುಕಿದ್ದ ಚಾಲಾಕಿ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ವಿಶೇಷವೆಂದರೆ, ಇವನ ಇಡೀ ಕುಟುಂಬವೇ ಹೆಣೆದಿದ್ದ ಸುಳ್ಳಿನ ಜಾಲವನ್ನು ಮುರಿದು ಇವನನ್ನು ಕಂಬಿ ಎಣಿಸುವಂತೆ ಮಾಡಿದ್ದು 'ಮಾಜಿ ಪ್ರೇಯಸಿ'!
ಈ ರೋಚಕ ಕಥೆ ಶುರುವಾಗಿದ್ದು 2002ರಲ್ಲಿ. ಚೀನಾದ ಝೆಜಿಯಾಂಗ್ ಪ್ರಾಂತ್ಯದ ಯುಹುವಾನ್ ನಗರದಲ್ಲಿ 7 ಜನರ ಗ್ಯಾಂಗ್ ವ್ಯಕ್ತಿಯೊಬ್ಬನನ್ನು ಅಪಹರಿಸಿ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿತ್ತು. ಈ ಪ್ರಕರಣದಲ್ಲಿ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದರೂ, 'ಚೆನ್' ಎಂಬ ಪ್ರಮುಖ ಆರೋಪಿ ಮಾತ್ರ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದ. ಪೊಲೀಸರು ಆತನಿಗಾಗಿ ಎಷ್ಟು ಹುಡುಕಾಡಿದರೂ ಸುಳಿವು ಸಿಗಲಿಲ್ಲ.
ಘಟನೆ ನಡೆದು ಐದು ವರ್ಷಗಳ ನಂತರ (2007ರಲ್ಲಿ), ಪೊಲೀಸರಿಗೆ ಅನ್ಹುಯಿ ಪ್ರಾಂತ್ಯದಿಂದ ಅಧಿಕೃತ ದಾಖಲೆಯೊಂದು ಬರುತ್ತದೆ. ಅದರಲ್ಲಿ 'ಆರೋಪಿ ಚೆನ್ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು, ಆತನ ಹೆಸರನ್ನು ಪೌರತ್ವ ದಾಖಲೆಗಳಿಂದ ರದ್ದುಗೊಳಿಸಲಾಗಿದೆ' ಎಂದು ನಮೂದಿಸಲಾಗಿತ್ತು. ಆರೋಪಿ ಸತ್ತೇ ಹೋದ ಎಂದು ನಂಬಿದ ಪೊಲೀಸರು ಆ ಕೇಸ್ ಫೈಲ್ ಅನ್ನು ಶಾಶ್ವತವಾಗಿ ಕ್ಲೋಸ್ ಮಾಡಿದ್ದರು.
ಹಲವು ವರ್ಷಗಳು ಉರುಳಿದವು. ಬರೋಬ್ಬರಿ 19 ವರ್ಷಗಳ ನಂತರ ಹಳೆಯ ಕಡತಗಳನ್ನು ಮರುಪರಿಶೀಲಿಸುವಾಗ ಅಧಿಕಾರಿಗಳಿಗೆ ಒಂದು ವಿಚಿತ್ರ ಮಾಹಿತಿ ಸಿಗುತ್ತದೆ. ಅಪಘಾತದಲ್ಲಿ ಸತ್ತ ವ್ಯಕ್ತಿ ಚೆನ್ ಅಲ್ಲ, ಬದಲಿಗೆ ಆತನ ಅವಳಿ ಸಹೋದರ! ಆರೋಪಿ ಚೆನ್, ತನ್ನದೇ ಮುಖಚರ್ಯೆಯನ್ನು ಹೊಂದಿದ್ದ ಅಣ್ಣನ ಸಾವನ್ನು ದುರುಪಯೋಗಪಡಿಸಿಕೊಂಡು, ಸತ್ತಿದ್ದು ತಾನೇ ಎಂದು ಬಿಂಬಿಸಿದ್ದನು. ಅಷ್ಟೇ ಅಲ್ಲದೆ, ಅಣ್ಣನ ಗುರುತಿನ ಚೀಟಿ, ಹೆಸರು ಹಾಗೂ ದಾಖಲೆಗಳನ್ನು ಬಳಸಿಕೊಂಡು ಹೊಸ ಮನುಷ್ಯನಂತೆ ಸಮಾಜದಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದನು. ವಿಚಾರಣೆ ನಡೆಸಲು ತೆರಳಿದ ವಿಶೇಷ ತನಿಖಾ ದಳಕ್ಕೆ ಚೆನ್ನ ತಾಯಿ, ಸಹೋದರಿ ಹಾಗೂ ಇಡೀ ಗ್ರಾಮಸ್ಥರು ಸುಳ್ಳು ಹೇಳಿ ದಾರಿ ತಪ್ಪಿಸಿದ್ದರು. ಅಪಘಾತದಲ್ಲಿ ಸತ್ತಿದ್ದು ಕಿರಿಯವನೇ (ಆರೋಪಿ) ಎಂದು ಕುಟುಂಬಸ್ಥರು ನಂಬಿಸಿದ್ದರು.
ಕುಟುಂಬಸ್ಥರು ಬಾಯಿ ಬಿಡದಿದ್ದಾಗ, ಪೊಲೀಸರು ಹಳೆಯ ಗುರುತಿನ ಚೀಟಿಗಳ ಫೋಟೋಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರು. ಇಬ್ಬರೂ ಅವಳಿ ಜವಳಿಗಳಾಗಿದ್ದರೂ ಮುಖದ ಸೂಕ್ಷ್ಮ ರೇಖೆಗಳಲ್ಲಿ ವ್ಯತ್ಯಾಸವಿತ್ತು. 2007ರಲ್ಲಿ ಚೆನ್ ಸತ್ತಿದ್ದಾನೆಂದು ದಾಖಲಾದ ಕೇವಲ 9 ದಿನಗಳಲ್ಲೇ, ಅಣ್ಣನ ಹೆಸರಿನಲ್ಲಿದ್ದ ವ್ಯಕ್ತಿ ಹೊಸ ಫೋಟೋ ನೀಡಿ ಕಾರ್ಡ್ ನವೀಕರಿಸಿದ್ದು ಪೊಲೀಸರ ಅನುಮಾನವನ್ನು ಹೆಚ್ಚಿಸಿತ್ತು. ಆದರೆ, ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಖಚಿತ ಸಾಕ್ಷಿ ಬೇಕಿತ್ತು. ಆಗ ಪೊಲೀಸರ ನೆರವಿಗೆ ಬಂದಿದ್ದೇ ಸತ್ತ ಅಣ್ಣನ ಮಾಜಿ ಪ್ರೇಯಸಿ ಡೆಂಗ್.
ಅಪಘಾತ ನಡೆಯುವ ಮುನ್ನ ಈಕೆ ಚೆನ್ನ ಅಣ್ಣನನ್ನು ಗಾಢವಾಗಿ ಪ್ರೀತಿಸುತ್ತಿದ್ದು, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಅಪಘಾತದ ಬೆನ್ನಲ್ಲೇ ಸಂಬಂಧ ಮುರಿದುಬಿದ್ದಿತ್ತು. ಪೊಲೀಸರು ಈಕೆಯನ್ನು ಸಂಪರ್ಕಿಸಿ ವಿಚಾರಿಸಿದಾಗ, 'ಅಂದು ಅಪಘಾತದಲ್ಲಿ ಸತ್ತಿದ್ದು ನನ್ನ ಪ್ರಿಯಕರ (ದೊಡ್ಡವನು), ಈಗ ಅಣ್ಣನ ಹೆಸರಲ್ಲಿ ಬದುಕುತ್ತಿರುವುದು ಆತನ ತಮ್ಮ ಕಳ್ಳ ಚೆನ್' ಎಂದು ಆಕೆ ಸತ್ಯ ಬಿಚ್ಚಿಟ್ಟಳು.
ಮಾಜಿ ಪ್ರೇಯಸಿ ನೀಡಿದ ಬಲವಾದ ಸಾಕ್ಷಿಯ ಆಧಾರದ ಮೇಲೆ, ದರೋಡೆ ನಡೆದು 24 ವರ್ಷಗಳ ಬಳಿಕ ಹಾಗೂ 19 ವರ್ಷಗಳ ಕಾಲ ಸತ್ತಂತೆ ನಟಿಸಿದ್ದ ಖದೀಮ ಚೆನ್ನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಚೀನಾ ಕಾನೂನಿನ ಪ್ರಕಾರ 3 ರಿಂದ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ತನ್ನ ಪಾಪದ ಕೃತ್ಯ ಮರೆಮಾಚಲು ಸ್ವಂತ ಅಣ್ಣನ ಸಾವನ್ನೇ ದಾಳವಾಗಿಸಿಕೊಂಡಿದ್ದ ಖದೀಮನ ಮುಖವಾಡ ಕೊನೆಗೂ ಕಳಚಿಬಿದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ