'6 ದಿನ'ದ ಸೀಕ್ರೆಟ್: ಚೀನಾ ಮಾಡಿದ ದೊಡ್ಡ ಎಡವಟ್ಟು ಬಹಿರಂಗ!

By Kannadaprabha NewsFirst Published Apr 16, 2020, 8:46 AM IST
Highlights

ಚೀನಾ ಮಾಡಿದ ದೊಡ್ಡ ಎಡವಟ್ಟು ಬೆಳಕಿಗೆ| 6 ದಿನ ಮೊದಲೇ ಗೊತ್ತಿದ್ದರೂ ಯಾರಿಗೂ ಹೇಳಲಿಲ್ಲ| ವೈರಸ್‌ ಪತ್ತೆಯಾದ ಮೇಲೂ ವುಹಾನ್‌ನಲ್ಲಿ ಭಾರಿ ಔತಣ| ಅಲ್ಲಿಂದ 3000 ಜನರಿಗೆ ಸೋಂಕು, ನಂತರ 20 ಲಕ್ಷ ಜನರಿಗೆ

ವುಹಾನ್(ಏ.16): ಕೊರೋನಾ ವೈರಸ್‌ ವಿಷಯದಲ್ಲಿ ಚೀನಾ ಮಾಡಿದ ಒಂದೊಂದೇ ಎಡವಟ್ಟುಗಳು ಬೆಳಕಿಗೆ ಬರುತ್ತಿದ್ದು, ವುಹಾನ್‌ನಲ್ಲಿ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಸಂಗತಿ ತಿಳಿದ ಮೇಲೂ 6 ದಿನಗಳ ಕಾಲ ಯಾರಿಗೂ ಹೇಳದೆ ಬಚ್ಚಿಟ್ಟಿದ್ದ ಕುರಿತು ದಾಖಲೆಗಳು ಲಭ್ಯವಾಗಿವೆ. ಏಳನೇ ದಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಈ ವಿಷಯ ಪ್ರಕಟಿಸುವ ವೇಳೆಗೆ ಸಾವಿರಾರು ಜನರಿಗೆ ಸೋಂಕು ಹರಡಿತ್ತು ಎಂದು ಚೀನಾದ ಸರ್ಕಾರಿ ಇಲಾಖೆಗಳ ನಡುವೆ ವಿನಿಮಯಗೊಂಡ ದಾಖಲೆಗಳನ್ನು ಆಧರಿಸಿ ಅಸೋಸಿಯೇಟೆಡ್‌ ಪ್ರೆಸ್‌ ಏಜೆನ್ಸಿ ವರದಿ ಮಾಡಿದೆ.

ಜಗತ್ತಿಗೆ ಕೊರೋನಾ ಹರಡಿದ ಚೀನಾದಿಂದಲೇ ಔಷಧ ಪತ್ತೆ!

ಜ.14ಕ್ಕೇ ವುಹಾನ್‌ನಲ್ಲಿ ವೈರಸ್‌ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವುದು ಅಲ್ಲಿನ ಆರೋಗ್ಯಾಧಿಕಾರಿಗಳಿಗೆ ಗೊತ್ತಾಗಿತ್ತು. ಆದರೆ, ಅವರು ಜ.20ರವರೆಗೂ ಅದನ್ನು ಬಚ್ಚಿಟ್ಟಿದ್ದರು. ಈ ನಡುವೆ ವುಹಾನ್‌ನಲ್ಲೇ ಸಾವಿರಾರು ಜನರು ಪಾಲ್ಗೊಂಡ ಔತಣ ಕೂಡ ಏರ್ಪಡಿಸಲಾಗಿತ್ತು. ನಂತರ ಅದರಲ್ಲಿ ಪಾಲ್ಗೊಂಡವರೂ ಸೇರಿದಂತೆ ಲಕ್ಷಾಂತರ ಜನರು ವುಹಾನ್‌ನಿಂದ ಲೂನಾರ್‌ ಹಬ್ಬ ಆಚರಣೆಗೆ ಎಲ್ಲೆಡೆ ತೆರಳಿದರು. ಜ.21ರಂದು ಅಧ್ಯಕ್ಷ ಕ್ಸಿ ಇದನ್ನು ಪ್ರಕಟಿಸುವುದರೊಳಗೆ 3000 ಜನರಿಗೆ ಸೋಂಕು ತಗಲಿತ್ತು. ಅವರಿಂದ 20 ಲಕ್ಷ ಜನರಿಗೆ ಹರಡಿತು. ಆ ಪೈಕಿ 1,26,000 ಜನರು ಮೃತಪಟ್ಟರು ಎಂದು ವರದಿ ಹೇಳಿದೆ.

‘ಆರು ದಿನ ತಡ ಮಾಡದೆ ಮೊದಲೇ ಚೀನಾ ಹೇಳಿದ್ದರೆ ಕೊರೋನಾ ವೈರಸ್‌ ಈ ಪರಿ ತೀವ್ರವಾಗಿ ಜಗತ್ತಿಗೆ ಹರಡುತ್ತಿರಲಿಲ್ಲ. ಆರಂಭಿಕ ಡೇಟಾಗಳು ಜಗತ್ತಿಗೆ ಬೇಗ ಲಭ್ಯವಾಗಿದ್ದರೆ ಬೇರೆ ಬೇರೆ ದೇಶಗಳು ಸೋಂಕನ್ನು ಯಶಸ್ವಿಯಾಗಿ ತಡೆಯಬಹುದಿತ್ತು’ ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಸಾಂಕ್ರಾಮಿಕ ವಿಭಾಗ ಅಭಿಪ್ರಾಯಪಟ್ಟಿದೆ.

ಚೀನಾ ಸಂಶೋಧನೆ, ಅಮೆರಿಕದ ಹಣ: ಬಯಲಾಯ್ತು ಕೊರೋನಾ ಸೋರಿಕೆ ಸೀಕ್ರೆಟ್!

ಸೋಂಕು ಹರಡುತ್ತಿರುವ ಕುರಿತು ಜಗತ್ತಿಗೆ ತಿಳಿಸದೆ ಚೀನಾ ಬಚ್ಚಿಟ್ಟಿತ್ತು ಎಂಬ ವರದಿಗಳನ್ನು ಈ ಹಿಂದೆ ಚೀನಾ ನಿರಾಕರಿಸಿತ್ತು. ವೈರಸ್‌ ಸೋಂಕು ಪತ್ತೆಯಾದ ತಕ್ಷಣ ತಾನು ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಿದ್ದಾಗಿಯೂ ಹೇಳಿತ್ತು.

click me!