ಚೀನಾದಿಂದ ಇಡೀ ಭೂಮಿ ಸುತ್ತಬಲ್ಲ ಶಬ್ದಾತೀತ ಕ್ಷಿಪಣಿ ಪರೀಕ್ಷೆ?

By Kannadaprabha News  |  First Published Oct 19, 2021, 8:46 AM IST

* ಚೀನಾದಿಂದ ಇಡೀ ಭೂಮಿ ಸುತ್ತಬಲ್ಲ ಶಬ್ದಾತೀತ ಕ್ಷಿಪಣಿ ಪರೀಕ್ಷೆ?

* ಅಮೆರಿಕದ ಗುಪ್ತಚರ ಸಂಸ್ಥೆಗೇ ಅಚ್ಚರಿ: ಬ್ರಿಟಿಷ್‌ ಪತ್ರಿಕೆ ವರದಿ

* ಅದು ಕ್ಷಿಪಣಿ ಅಲ್ಲ, ಅಂತರಿಕ್ಷ ವಾಹನ ಅಷ್ಟೆ: ಚೀನಾ ಸ್ಪಷ್ಟನೆ


ಬೀಜಿಂಗ್‌(ಅ.19): ಇಡೀ ಭೂಮಂಡಲವನ್ನು ಸುತ್ತಿ ಬಂದು ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯದ ಶಬ್ದಾತೀತ ವೇಗದ ಅಣ್ವಸ್ತ್ರ ಕ್ಷಿಪಣಿಯನ್ನು(Nuclear-Capable Hypersonic Missile) ಚೀನಾ(China) ಪರೀಕ್ಷೆ ನಡೆಸಿದೆ ಎಂದು ಬ್ರಿಟಿಷ್‌ ಪತ್ರಿಕೆಯೊಂದು ವರದಿ ಮಾಡಿದ್ದು, ಜಗತ್ತು ಅಚ್ಚರಿಗೊಂಡಿದೆ. ಬ್ರಿಟನ್‌ನ ಫೈನಾನ್ಷಿಯಲ್‌ ಟೈಮ್ಸ್‌ ಪತ್ರಿಕೆ ಈ ವರದಿ ಮಾಡಿದೆ. ಚೀನಾದ ಶಬ್ದಾತೀತ ವೇಗದ ಅಣ್ವಸ್ತ್ರ ಕ್ಷಿಪಣಿ ನೋಡಿ ಅಮೆರಿಕದ(USA) ಗುಪ್ತಚರ ಸಂಸ್ಥೆ ಕಂಗಾಲಾಗಿದೆ ಎಂದೂ ವರದಿಯಲ್ಲಿ ತಿಳಿಸಿದೆ.

ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಚೀನಾ, ‘ನಾವು ಪರೀಕ್ಷೆ ನಡೆಸಿರುವುದು ಶಬ್ದಾತೀತ ವೇಗದ ಅಣ್ವಸ್ತ್ರ ಕ್ಷಿಪಣಿ ಅಲ್ಲ. ಅದು ಶಬ್ದಾತೀತ ವೇಗದ ಅಂತರಿಕ್ಷ ವಾಹನ’ ಎಂದು ಹೇಳಿದೆ.

Tap to resize

Latest Videos

undefined

24 ಮೈಲು ದೂರದಲ್ಲಿ ಗುರಿ ಮಿಸ್‌:

‘ಆಗಸ್ಟ್‌ ತಿಂಗಳಿನಲ್ಲಿ ಚೀನಾ ತನ್ನ ಹೈಪರ್‌ಸಾನಿಕ್‌ ಅಣ್ವಸ್ತ್ರ ಕ್ಷಿಪಣಿಯನ್ನು(Nuclear-Capable Hypersonic Missile) ಪರೀಕ್ಷೆ ಮಾಡಿದೆ. ಅದು ಇಡೀ ಭೂಮಿಯನ್ನು ಸುತ್ತಿ ತನ್ನ ಗುರಿಯತ್ತ ಸಾಗಿದೆ. ಚೀನಾದ ಈ ಅತ್ಯಾಧುನಿಕ ಅಂತರಿಕ್ಷ ತಂತ್ರಜ್ಞಾನವನ್ನು(Technology) ನೋಡಿ ಅಮೆರಿಕದ ಗುಪ್ತಚರ ಇಲಾಖೆ ಅಚ್ಚರಿಗೊಂಡಿದೆ. ಚೀನಾದ ಸೇನಾಪಡೆ ಈ ಪರೀಕ್ಷೆ ನಡೆಸಿದ್ದು, ರಾಕೆಟ್‌ನಲ್ಲಿ ಹೈಪರ್‌ಸಾನಿಕ್‌ ಕ್ಷಿಪಣಿ ಇರಿಸಿ ಭೂಮಿಗೆ ಹತ್ತಿರದ ಕಕ್ಷೆಯಲ್ಲಿ ಹಾರಿಸಿದೆ ಎಂದು ಈ ವಿದ್ಯಮಾನವನ್ನು ನೋಡಿದ ಐವರು ತಿಳಿಸಿದ್ದಾರೆ. ಆದರೆ, ಕ್ಷಿಪಣಿ ಸುಮಾರು 24 ಮೈಲುಗಳಷ್ಟುದೂರದಲ್ಲಿ ತನ್ನ ಗುರಿಯನ್ನು ತಪ್ಪಿದೆ ಎಂದು ಇವರಲ್ಲಿ ಮೂವರು ಹೇಳಿದರೆ, ಇನ್ನಿಬ್ಬರು ಚೀನಾ ತನ್ನ ಹೈಪರ್‌ಸಾನಿಕ್‌ ಶಸ್ತ್ರಾಸ್ತ್ರಗಳ ಮೂಲಕ ಅಮೆರಿಕಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ’ ಎಂದು ಬ್ರಿಟಿಷ್‌ ಪತ್ರಿಕೆ ವರದಿ ಮಾಡಿದೆ.

ಈ ವರದಿ ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದ್ದಂತೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್‌ ಸ್ಪಷ್ಟನೆ ನೀಡಿ, ನಾವು ಶಬ್ದಾತೀತ ವೇಗದ ಅಂತರಿಕ್ಷ ವಾಹನವನ್ನಷ್ಟೇ ಪರೀಕ್ಷೆ ನಡೆಸಿದ್ದೇವೆ. ಅದು ಕ್ಷಿಪಣಿ ಅಲ್ಲ. ಈ ವಾಹನವು ಅಂತರಿಕ್ಷ ತಂತ್ರಜ್ಞಾನದಲ್ಲಿ ಉತ್ತಮ ಸಾಧನೆ. ಇದು ಬಾಹ್ಯಾಕಾಶ ಪ್ರಯಾಣಗಳ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ ಎಂದು ಹೇಳಿದ್ದಾರೆ.

ಏನಿದು ಹೈಪರ್‌ಸಾನಿಕ್‌ ಅಣ್ವಸ್ತ್ರ ಕ್ಷಿಪಣಿ?

ಚೀನಾ ಪರೀಕ್ಷೆ ನಡೆಸಿರುವ ಅಣ್ವಸ್ತ್ರ ಕ್ಷಿಪಣಿ(Missile) ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸುತ್ತದೆ ಎಂದು ಹೇಳಲಾಗಿದೆ. ಇದಕ್ಕೆ ಮ್ಯಾಕ್‌ 5 ವೇಗ ಎನ್ನಲಾಗುತ್ತದೆ. ಗಂಟೆಗೆ 6115 ಕಿ.ಮೀ. ವೇಗದಲ್ಲಿ ಈ ಕ್ಷಿಪಣಿ ಚಲಿಸುತ್ತದೆ. ಇದರಲ್ಲಿ ಬ್ಯಾಲಿಸ್ಟಿಕ್‌ ಕ್ಷಿಪಣಿ ಮತ್ತು ಕ್ರೂಸ್‌ ಕ್ಷಿಪಣಿಗಳೆರಡರ ತಂತ್ರಜ್ಞಾನವೂ ಮಿಳಿತವಾಗಿದೆ. ರಷ್ಯಾ 2019ರಲ್ಲಿ ಮತ್ತು ಅಮೆರಿಕ 2020ರಲ್ಲಿ ಹೈಪರ್‌ಸಾನಿಕ್‌ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷೆ ನಡೆಸಿರುವುದಾಗಿ ಹೇಳಿಕೊಂಡಿದ್ದವು. ಈ ಕ್ಷಿಪಣಿಗಳು ಈಗಿರುವ ಕ್ಷಿಪಣಿಗಳಂತೆ ಸಾಂಪ್ರದಾಯಿಕ ಮಾರ್ಗ ಬಳಸದೆ ನಿಗೂಢವಾಗಿ ತಮ್ಮ ಪಥ ಬದಲಿಸಿ ದಾಳಿ ನಡೆಸುವ ಶಕ್ತಿ ಹೊಂದಿವೆ. ಹೀಗಾಗಿ ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಈ ಕ್ಷಿಪಣಿಗಳನ್ನು ಅಂತರಿಕ್ಷದಲ್ಲಿ ಹೊಡೆದುರುಳಿಸುವುದು ಕಷ್ಟ.

ಭಾರತದ ಬಳಿಯೂ ಇದೆ ತಂತ್ರಜ್ಞಾನ

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕೂಡ ಹೈಪರ್‌ಸಾನಿಕ್‌ ತಂತ್ರಜ್ಞಾನ ಹೊಂದಿದೆ. ಮ್ಯಾಕ್‌ 6 ವೇಗದಲ್ಲಿ ಚಲಿಸುವ ಅಂತರಿಕ್ಷ ವಾಹನವನ್ನು ಡಿಆರ್‌ಡಿಒ ಈಗಾಗಲೇ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಭವಿಷ್ಯದಲ್ಲಿ ಕ್ಷಿಪಣಿಗೂ ಈ ತಂತ್ರಜ್ಞಾನ ಅಳವಡಿಸುವ ಇರಾದೆಯನ್ನು ಡಿಆರ್‌ಡಿಒ ಹೊಂದಿದೆ.

click me!