ಹೆಚ್ಚೆಚ್ಚು ಮಕ್ಕಳ ಹಡೆಯಿರಿ ಅಂದ್ರೂ ಚೀನಾದಲ್ಲಿ ಫಲವಿಲ್ಲ| ಚೀನಾದಲ್ಲಿ ಜನನ ಪ್ರಮಾಣ 60 ವರ್ಷಗಳ ಕನಿಷ್ಠಕ್ಕೆ ಕುಸಿತ| ಪ್ರತಿ ಸಾವಿರ ಮಂದಿಗೆ ಕೇವಲ 10 ಮಕ್ಕಳ ಜನನ| 140 ಕೋಟಿ ಜನರಿರುವ ದೇಶದಲ್ಲಿ 1.4 ಕೋಟಿ ಮಕ್ಕಳಿಗೆ ಜನ್ಮ| ವೃದ್ಧರ ಸಂಖ್ಯೆ ಹೆಚ್ಚಳ ಭೀತಿಯಲ್ಲಿ ಕಮ್ಯುನಿಸ್ಟ್ ದೇಶ
ಬೀಜಿಂಗ್[ಜ.18]: ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿರುವ ಚೀನಾ ದೇಶ ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ಹಾಕಲು ಈ ಹಿಂದೆ ತೆಗೆದುಕೊಂಡ ಕಠಿಣ ಕ್ರಮಗಳು ಇದೀಗ ತಿರುಗುಬಾಣವಾಗಿ ಪರಿಣಮಿಸಿವೆ. 2019ನೇ ಸಾಲಿನಲ್ಲಿ ಚೀನಾದಲ್ಲಿ 60 ವರ್ಷಗಳ ಕನಿಷ್ಠ ಪ್ರಮಾಣದಷ್ಟುಮಕ್ಕಳ ಜನನವಾಗಿದೆ. ಇದರಿಂದಾಗಿ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳವಾಗಬಹುದು ಹಾಗೂ ಕಾರ್ಮಿಕರ ಸಂಖ್ಯೆ ಕುಸಿಯಬಹುದು, ತನ್ಮೂಲಕ ಆರ್ಥಿಕತೆಯ ಮೇಲೆ ಒತ್ತಡ ಸೃಷ್ಟಿಯಾಗಬಹುದು ಎಂದು ಚೀನಾ ಚಿಂತೆ ಪಡುವಂತಾಗಿದೆ.
ಶೇ. 24 ಮಹಿಳೆಯರಿಗಷ್ಟೇ ಎರಡನೇ ಮಗು ಬೇಕು..!
undefined
2019ನೇ ಸಾಲಿನಲ್ಲಿ ಜನನ ಪ್ರಮಾಣ ಪ್ರತಿ ಸಾವಿರ ಮಂದಿಗೆ ಸರಾಸರಿ 10.48ರಷ್ಟಿದೆ. ಅಂದರೆ ಪ್ರತಿ ಸಾವಿರ ಮಂದಿಗೆ ಸರಾಸರಿ 10 ಮಕ್ಕಳು ಹುಟ್ಟುತ್ತಿದ್ದಾರೆ. ಹೀಗಾಗಿ 140 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೇವಲ 1.46 ಕೋಟಿ ಮಕ್ಕಳ ಜನನವಾಗಿದೆ. 1949ರಲ್ಲಿ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾದಾಗಿನಿಂದಲೂ ಇಷ್ಟೊಂದು ಕಡಿಮೆ ಪ್ರಮಾಣದ ಜನನ ಪ್ರಮಾಣ ವರದಿಯಾಗಿರಲಿಲ್ಲ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಮಾಹಿತಿ ತಿಳಿಸಿದೆ.
1970ರಲ್ಲಿ ಪ್ರತಿ ಚೀನಾ ಮಹಿಳೆಯ ಸಂತಾನೋತ್ಪತ್ತಿ ದರ 5.9ರಷ್ಟಿತ್ತು. ಒಂದೇ ಮಗು ನೀತಿಯಡಿ ದಂಡ ಹೇರುವುದು, ಬಲವಂತದ ಗರ್ಭಪಾತ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆಯಂತಹ ಕ್ರಮಗಳನ್ನು ಕೈಗೊಂಡಿದ್ದರಿಂದ 1990ರಲ್ಲಿ ಅದು 1.6ಕ್ಕೆ ಕುಸಿಯಿತು. ಅಪಾಯ ಅರಿತ ಚೀನಾ 2016ರಲ್ಲಿ ಒಂದೇ ಮಗು ನೀತಿಯನ್ನು ಕೈಬಿಟ್ಟು, ಎರಡು ಮಕ್ಕಳನ್ನು ಹೆರಲು ಅನುಮತಿ ನೀಡಿತು. ಆದರೂ ಪರಿಸ್ಥಿತಿ ಸುಧಾರಿಸಿಲ್ಲ. ಜೀವನ ನಿರ್ವಹಣೆ ವೆಚ್ಚವೂ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.