
ಬೆಂಗಳೂರು (ಸೆ.11): ಹಾಡಹಗಲೇ ಜನಜಂಗುಳಿಯಲ್ಲೇ ಚಾರ್ಲಿ ಕ್ರಿಕ್ ಹತ್ಯೆಯು ಅಮೆರಿಕಾವನ್ನು ಬೆಚ್ಚಿಬೀಳಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಆಪ್ತನಾಗಿದ್ದ, ಯುವನಾಯಕನಾಗಿ ಗುರುತಿಸಿಕೊಂಡಿದ್ದ ಚಾರ್ಲಿ ಕ್ರಿಕ್ ಹತ್ಯೆಯು ಅಮೆರಿಕಾದ ರಾಜಕೀಯ ಹಿಂಸೆಯ ಇನ್ನೊಂದು ಮುಖವನ್ನು ಮತ್ತೆ ತೆರೆದಿಟ್ಟಿದೆ.
ಉತಾಹ್ ವ್ಯಾಲಿ ವಿವಿಯಲ್ಲಿ ಖುದ್ದು ತಾನು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸುಮಾರು 3 ಸಾವಿರ ವಿದ್ಯಾರ್ಥಿಗಳ ಮುಂದೆ ಬಲಪಂಥೀಯ ಫೈರ್‌ಬ್ರ್ಯಾಂಡ್ ಆಗಿದ್ದ 31 ವರ್ಷ ಪ್ರಾಯದ ಚಾರ್ಲಿ ಕ್ರಿಕ್ ಹತ್ಯೆಗೈಯಲ್ಪಟ್ಟಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಹೊಂದಿದ್ದ ಕ್ರಿಕ್ ತನ್ನ 18ನೇ ವಯಸ್ಸಿನಲ್ಲೇ ವಿವಿ ಕ್ಯಾಂಪಸ್‌ಗಳಲ್ಲಿ ಕನ್ಸರ್ವೇಟಿವ್ ವಿಚಾರಧಾರೆಗಳನ್ನು ಪ್ರಚಾರ ಮಾಡಲು ಟರ್ನಿಂಗ್ ಪಾಯಿಂಟ್ ಯುಎಸ್‌ಎ ಎಂಬ ಎನ್‌ಜಿಓಅನ್ನೇ ಸ್ಥಾಪಿಸಿ ಮುನ್ನಡೆಸುತ್ತಿದ್ದ.
ಅಮೆರಿಕಾದಲ್ಲಿ ಗನ್ ಸಂಸ್ಕೃತಿ, ಜನಾಂಗೀಯ & ರಾಜಕೀಯ ಹಿಂಸೆ ಹೊಸದೇನಲ್ಲ. ಅದೆಷ್ಟು ಪ್ರಬಲ ರಾಜಕೀಯ ನಾಯಕರು ಅಧ್ಯಕ್ಷರಾಗಿ ಬಂದು ಹೋದರೂ ಇವುಗಳಿಂದ ಅಮೆರಿಕಾಗೆ ಮುಕ್ತಿ ಕೊಡಿಸಲು ಸಾಧ್ಯವಾಗಿಲ್ಲ. ಕೆಲ ದಿನಗಳ ಹಿಂದೆ, ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲೇ ಯುವತಿಯೊಬ್ಬಳ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಅಮೆರಿಕಾದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಘಟನೆಯು ಒಂದು ಕಡೆ ಸುರಕ್ಷತೆ ಕುರಿತು ಭಾರೀ ಚರ್ಚೆಗೆ ಕಾರಣವಾದರೆ, ಇನ್ನೊಂದು ಕಡೆ ಕರಿಯ-ಬಿಳಿಯ ಚರ್ಚೆಯನ್ನು ಹುಟ್ಟುಹಾಕಿತ್ತು.
ಹಂತಕ ಡೆಕಾರ್ಲಸ್ ಬ್ರೌನ್ 'ಕರಿಯ'ನಾಗಿದ್ದು, ದರೋಡೆ ಇತ್ಯಾದಿ 14 ಪ್ರಕರಣಗಳಲ್ಲಿ ಆರೋಪಿಯಾಗಿದ್ದವ. ನಿರಾಶ್ರಿತನಾಗಿದ್ದ ಈತನಿಗೆ ಮಾನಸಿಕ ಕಾಯಿಲೆಗಳು ಇತ್ತು ಎನ್ನಲಾಗಿದೆ. ಮೂಲತ: ಯುದ್ಧಪೀಡಿತ ಉಕ್ರೇನ್‌ನಿಂದ ವಲಸೆ ಬಂದು ಆಶ್ರಯ ಪಡೆದಿದ್ದ ಇರೈನಾ ಝರುಸ್ಕ 'ಬಿಳಿಯ'ಳೆಂಬ ಕಾರಣಕ್ಕೆ ಹತ್ಯೆಯಾಗಿದ್ದಾಳೆ ಎಂದು ಒಂದು ಗುಂಪು ವಾದಿಸಿದರೆ, ಇನ್ನೊಂದು ಗುಂಪು ಇದು ಸುರಕ್ಷತೆ ಹಾಗೂ ಹೆಚ್ಚುತ್ತಿರುವ ಹಿಂಸೆಯ ವಿಷಯ ಎಂದು ಹೇಳಿತ್ತು. ಒಟ್ಟಿನಲ್ಲಿ, ಇರೈನಾ ಝರುಸ್ಕ ಹತ್ಯೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಇನ್ನು ಈ ಚಾರ್ಲಿ ಕ್ರಿಕ್ ಕೂಡಾ ರಾಜಕೀಯ/ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸಿದ್ದ.
ವಿಶೇಷವಾಗಿ, ಹಂತಕನನ್ನು ಜೈಲಿನಿಂದ ಬಿಡುಗಡೆ ಮಾಡಿದ್ದ ನ್ಯಾಯಾಧೀಶೆಯ ವಿರುದ್ಧ ಆಕ್ರೋಶ ಹೊರಹಾಕಿದ್ದ.
ಟ್ರಂಪ್ ನೀತಿಗಳ ಪ್ರಬಲ ಸಮರ್ಥನಾಗಿದ್ದ ಕ್ರಿಕ್, ಅಮೇರಿಕಾದಲ್ಲಿ ಉದ್ಯೋಗ ಮಾಡುವ ಭಾರತೀಯರ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದ. ಈ ಟ್ವೀಟ್ ನೋಡಿ…
ಕೆಲದಿನಗಳ ಹಿಂದೆ ಭಾರತೀಯ ಸೆಕ್ಯೂರಿಟಿ ಗಾರ್ಡ್‌ನೋರ್ವನನ್ನು, ಬಿಲ್ಡಿಂಗ್ ಬಳಿ ಮೂತ್ರ ವಿಸರ್ಜಿಸುತ್ತಿದ್ದುದ್ದಕ್ಕೆ ಆಕ್ಷೇಪಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಗುಂಡಿಕ್ಕಿ ಸಾಯಿಸಲಾಗಿತ್ತು. ಅಮೆರಿಕಾದಲ್ಲಿ ಕಳೆದ ಕೆಲವು ದಶಕಗಳಿಂದ ಈ ಗನ್ ಫೈರಿಂಗ್ ಪ್ರಕರಣಗಳು ಬಹಳ ಹೆಚ್ಚಾಗಿವೆ, ಇಂಥಹ ಘಟನೆಯಲ್ಲಿ ಸಾವನಪ್ಪಿದವರ ಸಂಖ್ಯೆಯು ಹೆಚ್ಚಿದೆ.
ಈ ನಡುವೆ ಕ್ರಿಕ್ ಉತಾಹ್ ವ್ಯಾಲಿ ವಿವಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಕೂಡಾ ವಿವಾದಕ್ಕೆ ಕಾರಣವಾಗಿತ್ತು. ಕ್ರಿಕ್ ಹತ್ಯೆಯು ಅಮೆರಿಕಾ ನಾಯಕರಿಗೆ ಆಘಾತವನ್ನು ನೀಡೋದರ ಜೊತೆ ಹಲವು ಸವಾಲುಗಳನ್ನು ಎಸೆದಿದೆ. ರಾಜಕೀಯ ಹಿಂಸೆ ಹಾಗೂ ಗನ್ ಸಂಸ್ಕೃತಿಯನ್ನು ಅಮೆರಿಕಾ ಹೇಗೆ ಎದುರಿಸಲಿದೆ ಎಂದು ಕಾದುನೋಡಬೇಕಾಗಿದೆ.
24 ವರ್ಷದ ಹಿಂದೆ ಸೆ.11ಕ್ಕೆ ಅಮೆರಿಕಾ ಅತೀ ದೊಡ್ಡ ಭಯೋತ್ಪಾದಕ ದಾಳಿಗೆ ಗುರಿಯಾಗಿತ್ತು. ಈಗ ಚಾರ್ಲಿ ಕ್ರಿಕ್ ಹತ್ಯೆಯು ಅಮೆರಿಕಾದ ಮುಂದೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ