ಚೀನಾ ಲ್ಯಾಬಲ್ಲಿ ಬಾವಲಿ: ವಿಡಿಯೋ ಸಾಕ್ಷಿ ಬಹಿರಂಗ!

By Suvarna NewsFirst Published Jun 16, 2021, 7:41 AM IST
Highlights

* ಚೀನಾ ಲ್ಯಾಬಲ್ಲಿ ಬಾವಲಿ: ವಿಡಿಯೋ ಸಾಕ್ಷಿ ಬಹಿರಂಗ!

* ಕೊರೋನಾ ವೈರಸ್‌ ಸೃಷ್ಟಿವಾದಕ್ಕೆ ಮತ್ತಷ್ಟುಪುಷ್ಟಿ

* ಆಸ್ಪ್ರೇಲಿಯಾದ ಸ್ಕೈ ನ್ಯೂಸ್‌ನಿಂದ ದೃಶ್ಯ ಪ್ರಸಾರ

* 2017ರಲ್ಲಿ ಚಿತ್ರೀಕರಿಸಿದ್ದ ವುಹಾನ್‌ ಲ್ಯಾಬ್‌ ವಿಡಿಯೋ ಈಗ ಸೋರಿಕೆ

* ಲ್ಯಾಬ್‌ಗೆ ಬಾವಲಿ ತಂದು ಚೀನಾ ಪ್ರಯೋಗ ಮಾಡಿಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದ್ದು ಸುಳ್ಳು?

ಬೀಜಿಂಗ್‌(ಜೂ.16): ಚೀನಾದ ವುಹಾನ್‌ನ ವೈರಾಣು ಪ್ರಯೋಗಾಲಯದ ಪಂಜರಗಳಲ್ಲಿ ಬಾವಲಿಗಳನ್ನು ಇಟ್ಟಿರುವ ಹಳೆಯ ವಿಡಿಯೋವೊಂದು ಇದೀಗ ಸೋರಿಕೆಯಾಗಿದ್ದು, ಅದು ಕೊರೋನಾ ವೈರಸ್‌ ಹುಟ್ಟುಹಾಕಿದ್ದೇ ಚೀನಾ ಎಂಬ ವಾದಕ್ಕೆ ಮತ್ತಷ್ಟುಬಲತುಂಬಿದೆ.

ಜೊತೆಗೆ, ‘ಕೊರೋನಾದ ಮೂಲ ಚೀನಾ ಅಲ್ಲ. ಚೀನಾದ ವುಹಾನ್‌ನ ವೈರಾಣು ಪ್ರಯೋಗಾಲಯದಿಂದ ಕೊರೋನಾ ವೈರಸ್‌ ಸೋರಿಕೆಯಾಗಿದೆ ಎಂಬುದೆಲ್ಲಾ ಊಹಾಪೋಹ. ಲ್ಯಾಬಿಗೆ ಬಾವಲಿ ತಂದು ಅಲ್ಲಿ ಪ್ರಯೋಗ ಮಾಡಲಾಗುತ್ತದೆ ಎಂಬುದೆಲ್ಲಾ ಕಪೋಲ ಕಲ್ಪಿತ’ ಎನ್ನುವ ಮೂಲಕ ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.

ಚೀನಾ ಅಕಾಡೆಮಿ ಆಫ್‌ ಸೈನ್ಸ್‌ 2017ರ ಮೇ ತಿಂಗಳಲ್ಲಿ ‘ಬಯೋಸೇಫ್ಟಿಲೆವೆಲ್‌ 4’ ಇರುವ ಪ್ರಯೋಗಾಲಯ ಉದ್ಘಾಟನೆಯ ವಿಡಿಯೋವೊಂದನ್ನು ಚಿತ್ರೀಕರಿಸಿತ್ತು. ಆ ವಿಡಿಯೋ ಇದೀಗ ಸೋರಿಕೆಯಾಗಿದೆ. ಅದರಲ್ಲಿ ಪಂಜರದಲ್ಲಿ ಬಾವಲಿಗಳನ್ನು ಇಟ್ಟಿರುವ ಮತ್ತು ಅದಕ್ಕೆ ಸ್ವತಃ ವಿಜ್ಞಾನಿಗಳೇ ಕೀಟಗಳನ್ನು ಆಹಾರವಾಗಿ ನೀಡುತ್ತಿರುವ ದೃಶ್ಯಗಳಿವೆ. ಆಸ್ಪ್ರೇಲಿಯಾದ ಸ್ಕೈನ್ಯೂಸ್‌ ವಿಡಿಯೋ ಬಿಡುಗಡೆ ಮಾಡಿದೆ.

ಕ್ಲೀನ್‌ಚಿಟ್‌ ನೀಡಿತ್ತು ಡಬ್ಲ್ಯುಎಚ್‌ಒ:

ವಿಶೇಷವೆಂದರೆ ಕೊರೋನಾ ಮೂಲ ಪತ್ತೆಗೆ ಕಳೆದ ವರ್ಷ ಚೀನಾಕ್ಕೆ ಭೇಟಿ ನೀಡಿದ್ದ ಡಬ್ಲ್ಯುಎಚ್‌ಒ ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದ ಪೀಟರ್‌ ಡಸ್ಜಾಜ್‌, ‘ಬಾವಲಿಗಳಲ್ಲಿ ಪತ್ತೆಯಾಗುವ ವೈರಸ್‌ಗಳ ವಂಶವಾಹಿ ಅಧ್ಯಯನ ನಡೆಸಲು ಬಾವಲಿಗಳನ್ನೇ ವುಹಾನ್‌ ಲ್ಯಾಬ್‌ಗೆ ಕಳುಹಿಸಲಾಗಿಲ್ಲ. ವಿಜ್ಞಾನ ನಡೆಯುವುದೇ ಹಾಗೆ. ನಾವು ಬಾವಲಿ ಮಾದರಿ ಸಂಗ್ರಹಿಸಿ, ಅದನ್ನು ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಕೊನೆಗೆ ಎಲ್ಲಿ ಬಾವಲಿಗಳನ್ನು ಹಿಡಿದಿರುತ್ತೇವೋ ಅದನ್ನು ಅಲ್ಲೇ ಬಿಡುತ್ತೇವೆ. ನಾನು 15 ವರ್ಷಗಳಿಂದ ನಿರಂತರವಾಗಿ ಸಂಪರ್ಕದಲ್ಲಿರುವ ವುಹಾನ್‌ ಲ್ಯಾಬ್‌ನಲ್ಲಿ ಯಾವುದೇ ಜೀವಂತ ಅಥವಾ ಸತ್ತಿರುವ ಬಾವಲಿಗಳು ಇಲ್ಲ. ಅಲ್ಲಿ ಬಾವಲಿ ಇದೆ. ಅಲ್ಲಿಂದಲೇ ವೈರಸ್‌ ಸೃಷ್ಟಿಯಾಗಿ ಸೋರಿಕೆಯಾಗಿದೆ ಎಂಬುದೆಲ್ಲಾ ಊಹಾಪೋಹ’ ಎಂದಿದ್ದರು. ಆದರೆ ಇದೀಗ ಸೋರಿಕೆಯಾಗಿರುವ ವಿಡಿಯೋ ಬೇರೆಯದೇ ಕಥೆ ಹೇಳುತ್ತಿದೆ.

ನಡೆದಿತ್ತು ಪ್ರಯೋಗ- ನ್ಯೂಯಾರ್ಕ್ ಟೈಮ್ಸ್‌:

ಈ ನಡುವೆ ಕೊರೋನಾ ವೈರಸ್‌ಗಳಿಗೆ ಹೆಚ್ಚಿನ ಶಕ್ತಿ ತುಂಬಿ, ಅವುಗಳನ್ನು ಹೆಚ್ಚು ಸಾಂಕ್ರಾಮಿಕ ಮಾಡುವ ಮತ್ತು ಮಾನವರಿಗೂ ಹಬ್ಬುವಂತೆ ಮಾಡುವ ವಿನಾಶಕಾರಿ ‘ಗೇನ್‌ ಆಫ್‌ ಫಂಕ್ಷನ್‌’ ಪ್ರಯೋಗದಲ್ಲಿ ಭಾಗಿಯಾಗಿದ್ದರು ಎನ್ನಲಾದ ವುಹಾನ್‌ ಲ್ಯಾಬ್‌ನ ಡಾ.ಶಿ ಝೆಂಗ್ಲಿ ಅವರ ತಂಡದ ಕುರಿತು ಅಮೆರಿಕದ ನ್ಯೂಯಾರ್ಕ್ ಟೈಮ್ಸ್‌ ವರದಿಯೊಂದನ್ನು ಪ್ರಕಟಿಸಿದೆ.

ಅದರಲ್ಲಿ ‘2017ರಲ್ಲಿ ಶಿ ಮತ್ತು ಅವರ ತಂಡ, ಹಲವು ಬಾವಲಿಗಳ ಭಾಗಗಳನ್ನು ಜೋಡಿಸಿ ಹೈಬ್ರಿಡ್‌ ಬಾವಲಿ ಸೃಷ್ಟಿಸಲಾಗಿದೆ’ ಎಂದು ಹೇಳಿತ್ತು. ಅದರಲ್ಲಿ ಮಾನವರಿಗೂ ಹಬ್ಬಬಲ್ಲ ವೈರಸ್‌ನ ಮಾಹಿತಿಯೂ ಇತ್ತು. ಮಾನವರಿಗೆ ಸೋಂಕು ಹಬ್ಬಿಸಬಲ್ಲ ವೈರಸ್‌ನ ಸಾಮರ್ಥ್ಯ ಮತ್ತು ಮಾನವರ ಜೀವಕೋಶದಲ್ಲಿ ಅವು ದ್ವಿಗುಣಗೊಳ್ಳುವ ಸಾಮರ್ಥ್ಯ ಪರೀಕ್ಷಿಸಲು ಈ ಪ್ರಯೋಗ ನಡೆಸಲಾಗಿತ್ತು’ ಎಂದು ಹೇಳಿದೆ.

ಇದಕ್ಕೆ ಶಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಪ್ರಯೋಗಾಲಯದಲ್ಲೇ ವೈರಸ್‌ ಸೃಷ್ಟಿಯಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಜೊತೆಗೆ ಅಮಾಯಕ ವಿಜ್ಞಾನಿಗಳ ಮೇಲೆ ಕೆಸರು ಎರಚಲಾಗುತ್ತಿದೆ ಎಂದು ದೂರಿದ್ದಾರೆ. ಅಲ್ಲದೆ ತಮ್ಮ ತಂಡ ವೈರಸ್‌ಗಳನ್ನು ಮತ್ತಷ್ಟುಅಪಾಯಕಾರಿಯಾಗಿಸುವ ಪ್ರಯೋಗದಲ್ಲಿ ಭಾಗಿಯಾಗಿರಲಿಲ್ಲ. ಬದಲಾಗಿ ವೈರಸ್‌ ಒಂದು ಜೀವಿಯಿಂದ ಇನ್ನೊಂದು ಜೀವಿಗೆ ಹರಡಬಲ್ಲದು ಎಂಬುದನ್ನು ಅಧ್ಯಯನ ಮಾಡುತ್ತಿತ್ತು ಎಂದು ಹೇಳಿದ್ದಾರೆ.

click me!