
ಹೈದರಾಬಾದ್(ಜು.01): ಭಾರತದ ಭಾರತ್ ಬಯೋಟೆಕ್ ಕಂಪನಿ ಉತ್ಪಾದಿಸಿರುವ ಕೋವ್ಯಾಕ್ಸಿನ್ ಲಸಿಕೆ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಬ್ರೆಜಿಲ್ ಸರ್ಕಾರ ಲಸಿಕೆ ಆಮದನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಲಸಿಕೆ ವಿಷಯದಲ್ಲಿ ಹೀಗೆ ಭ್ರಷ್ಟಾಚಾರದ ಆರೋಪ ಕೇಳಿಬಂದ ಮೊದಲ ಘಟನೆ ಇದು ಎನ್ನಲಾಗಿದೆ.
ಈ ನಡುವೆ, ಲಸಿಕೆಗೆ ಔಷಧ ನಿಯಂತ್ರಕರಿಂದ ಅನುಮೋದನೆ ಮತ್ತು ಲಸಿಕೆ ಪೂರೈಕೆ ಸಂಬಂಧ, ಇತರೆ ದೇಶಗಳ ಜೊತೆಗೆ ನಡೆದುಕೊಂಡ ರೀತಿಯಲ್ಲೇ ಬ್ರೆಜಿಲ್ ಸರ್ಕಾರದ ಜೊತೆಗೂ ನಡೆದುಕೊಳ್ಳಲಾಗಿದೆ. ಜೊತೆಗೆ 2 ಕೋಟಿ ಡೋಸ್ ಲಸಿಕೆ ಪೂರೈಕೆ ಸಂಬಂಧ ಈವರೆಗೆ ಬ್ರೆಜಿಲ್‌ನಿಂದ ಯಾವುದೇ ಮುಂಗಡ ಹಣ ಪಡೆದಿಲ್ಲ ಮತ್ತು ಲಸಿಕೆಯನ್ನೂ ಪೂರೈಸಿಲ್ಲ ಎಂದು ಭಾರತ್ ಬಯೋಟೆಕ್ ಕಂಪನಿ ಸ್ಪಷ್ಟನೆ ನೀಡಿದೆ.
ಅಮಾನತು:
ಬುಧವಾರ ಹೇಳಿಕೆಯೊಂದನ್ನು ನೀಡಿರುವ ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ‘ಮಹಾಲೇಖಪಾಲರ ಕಚೇರಿಯ ಶಿಫಾರಸಿನ ಅನ್ವಯ, ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ಖರೀದಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಖರೀದಿ ಒಪ್ಪಂದದ ಬಗ್ಗೆ ಆರೋಗ್ಯ ಸಚಿವಾಲಯದ ಭದ್ರತಾ ನಿರ್ದೇಶನಾಲಯವು ಆಡಳಿತಾತ್ಮಕ ತನಿಖೆಯನ್ನು ನಡೆಸಲಿದೆ. ಒಪ್ಪಂದದಲ್ಲಿನ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಿದೆ’ ಎಂದು ಹೇಳಿದೆ. ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕುರಿತು ಬ್ರೆಜಿಲ್‌ನ ಅಟಾರ್ನಿ ಜನರಲ್ ಜೂ.24ರಂದು ತನಿಖೆ ಆರಂಭಿಸಿದ್ದು ಅದರ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ.
ಬ್ರೆಜಿಲ್‌ನ ಪ್ರೆಸಿಯಾ ಮೆಡಿಕ್ಯಾಮೆಂಟೋಸ್ ಕಂಪನಿಯು, ಕೋವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ಬ್ರೆಜಿಲ್‌ನಲ್ಲಿನ ಎಲ್ಲಾ ವಿಷಯಗಳನ್ನು ನಿರ್ವಹಣೆ ಮಾಡುತ್ತಿದೆ. ಭಾರತ್ ಬಯೋಟೆಕ್ ಕಂಪನಿ ಉತ್ತಮ ಉತ್ಪಾದನಾ ನಡವಳಿಕೆಯನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಮೊದಲಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಲು ಬ್ರೆಜಿಲ್ ಸರ್ಕಾರ ನಿರಾಕರಿಸಿತ್ತು. ಆದರೆ ಬಳಿಕ ಜೂ.4ರಂದು ಕೆಲ ಷರತ್ತುಗಳೊಂದಿಗೆ ಅನುಮತಿ ನೀಡಿತ್ತು. ತಲಾ 15 ಡಾಲರ್‌ನಂತೆ (ಅಂದಾಜು 1125 ರು.)ಒಟ್ಟು 2 ಕೋಟಿ ಡೋಸ್ ಖರೀದಿಗೆ ಸರ್ಕಾರ ಸಮ್ಮತಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ