
ಟೆಹ್ರಾನ್/ವಾಷಿಂಗ್ಟನ್ (ಮಾ.3): ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಭೀಕರ ಸ್ವರೂಪ ಪಡೆದಿದೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಐತಿಹಾಸಿಕ ವಾಯುದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮಾತ್ರವಲ್ಲ, ಆತನ ಬಹುತೇಕ ಕುಟಂಬವೇ ಸರ್ವನಾಶವಾಗಿರುವುದು ಗೊತ್ತಾಗಿದೆ. ಇಸ್ರೇಲ್ ಇತಿಹಾಸದಲ್ಲೇ ಅತಿ ದೊಡ್ಡ ವಾಯು ಕಾರ್ಯಾಚರಣೆ ಇದಾಗಿದ್ದು, ಸುಮಾರು 200 ಯುದ್ಧ ವಿಮಾನಗಳು ಇರಾನ್‌ನ 500ಕ್ಕೂ ಹೆಚ್ಚು ಆಯಕಟ್ಟಿನ ನೆಲೆಗಳ ಮೇಲೆ ಬಾಂಬ್ ಮಳೆಗರೆದಿವೆ.
ರಾಯಿಟರ್ಸ್ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಈ ಭೀಕರ ದಾಳಿಯಲ್ಲಿ 86 ವರ್ಷದ ಅಯತೊಲ್ಲಾ ಖಮೇನಿ ಮಾತ್ರವಲ್ಲದೆ, ಅವರ ಪುತ್ರಿ ಮತ್ತು ಮೊಮ್ಮಗು ಕೂಡ ಸಾವನ್ನಪ್ಪಿದೆ. ಇರಾನ್ ಸರ್ಕಾರಿ ಮಾಧ್ಯಮಗಳು ಖಮೇನಿಯವರ ಅಳಿಯ ಮತ್ತು ಸೊಸೆ ಈ ವಾಯುದಾಳಿಯಲ್ಲಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದವು. ಅಯತೊಲ್ಲಾ ಅಲಿ ಸಯ್ಯದ್ ಖಮೇನಿ ಅವರ 14 ತಿಂಗಳ ಮೊಮ್ಮಗಳು ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿ ಅಮೆರಿಕ ಮತ್ತು ಇಸ್ರೇಲಿ ದಾಳಿಯಲ್ಲಿ ಸಾವನ್ನನ್ನಪ್ಪಿದ್ದು, ಪ್ರಸ್ತುತ ಯುದ್ಧದಲ್ಲಿ ಸಾವು ಕಂಡ ಅತ್ಯಂತ ಕಿರಿಯ ವಯಸ್ಸಿನವರು ಎನ್ನಲಾಗಿದೆ.
ಟೆಹ್ರಾನ್ ನಗರ ಮಂಡಳಿಯ ಸದಸ್ಯರಾದ ಮೇಸಮ್ ಮೊಜಾಫರ್ ಅವರು, ಟೆಹ್ರಾನ್ ಮೇಲಿನ ದಾಳಿಯಲ್ಲಿ ಇಬ್ಬರು ಸುಪ್ರೀಂ ಲೀಡರ್ ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮಗಳು ಉಲ್ಲೇಖಿಸಿದ್ದವು. ಖಮೇನಿ ಅವರ ಅಳಿಯ ಮೆಸ್ಬಾ ಅಲ್-ಹೋಡಾ ಬಘೇರಿ ಕಾನಿ ಮತ್ತು ಅವರ ಪತ್ನಿ ಜಹ್ರಾ ಹದ್ದಾದ್ ಅಡೆಲ್ ಸಾವು ಕಂಡಿದ್ದಾರೆ ಎಂದು ತಿಳಿಸಿದ್ದವು.
ಖಮೇನಿ ಅವರಿಗೆ ಬೋಶ್ರಾ ಮತ್ತು ಹೋಡಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅವರು ಕ್ರಮವಾಗಿ ಮೊಹಮ್ಮದ್ ಮೊಹಮ್ಮದಿ ಗೋಲ್ಪಾಯೆಗಾನಿ ಮತ್ತು ಮೆಸ್ಬಾ ಅಲ್-ಹೋಡಾ ಬಘೇರಿ ಕಾನಿ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಹಲವಾರು ಮೊಮ್ಮಕ್ಕಳಿದ್ದಾರೆ, ಆದರೂ ಯಾವುದೇ ಹೆಸರು ಸಾರ್ವಜನಿಕವಾಗಿ ಲಭ್ಯವಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಖಮೇನಿ ಸಾವನ್ನು ಖಚಿತಪಡಿಸಿದ್ದರು. "ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಈಗ ಇಲ್ಲ. ಇದು ಇರಾನ್ ಜನತೆಗೆ ಮತ್ತು ಅಮೆರಿಕನ್ನರಿಗೆ ಸಿಕ್ಕ ನ್ಯಾಯ," ಎಂದು ಬಣ್ಣಿಸಿರುವ ಟ್ರಂಪ್, ಇರಾನ್ ಜನರು ತಮ್ಮ ದೇಶವನ್ನು ಮರಳಿ ವಶಕ್ಕೆ ಪಡೆಯಲು ಇದು ಸುಸಮಯ ಎಂದಿದ್ದಾರೆ.
ಇದಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ಖಮೇನಿ ಬದುಕಿಲ್ಲ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಅವರ ಅಡಗುತಾಣವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ," ಎಂದು ತಿಳಿಸಿದ್ದರು. ರಾಯಿಟರ್ಸ್ ವರದಿಯ ಪ್ರಕಾರ, ಖಮೇನಿ ಅವರ ಮೃತದೇಹವೂ ಪತ್ತೆಯಾಗಿದೆ ಎಂದು ಹಿರಿಯ ಇಸ್ರೇಲಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ