
ನವದೆಹಲಿ(ಅ.25): ಕೊರೋನಾ ವೈರಸ್ ತಗಲಿದರೆ ಅದು ಹೆಚ್ಚಾಗಿ ನಮ್ಮ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಹೇಗೆ ಹಾನಿ ಮಾಡುತ್ತದೆ ಎಂಬುದನ್ನು ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕೃತಕ ಶ್ವಾಸಕೋಶ ಸೃಷ್ಟಿಸಿ, ಅದಕ್ಕೆ ಕೊರೋನಾ ವೈರಸ್ ಹಾಯಿಸುವ ಮೂಲಕ ಲೈವ್ ಆಗಿ ವೀಕ್ಷಣೆ ಮಾಡಿದ್ದಾರೆ.
ಎರಡು ವಿಜ್ಞಾನಿಗಳ ತಂಡ ಎರಡು ಸ್ಥಳದಲ್ಲಿ ಈ ಪ್ರಯೋಗ ಮಾಡಿದೆ. ದಕ್ಷಿಣ ಕೊರಿಯಾ ಮತ್ತು ಬ್ರಿಟನ್ನಿನ ವಿಜ್ಞಾನಿಗಳು ಕೇಂಬ್ರಿಜ್ ವಿವಿ ಸಹಯೋಗದಲ್ಲಿ ಒಂದೆಡೆ, ಹಾಗೂ ಡ್ಯೂಕ್ ವಿವಿ ಮತ್ತು ನಾತ್‌ರ್ ಕೆರೋಲಿನಾ ವಿವಿ ವಿಜ್ಞಾನಿಗಳು ಇನ್ನೊಂದೆಡೆ ಈ ಪ್ರಯೋಗ ಮಾಡಿದ್ದಾರೆ.
ಮೊದಲಿಗೆ ಹೊಕ್ಕಳಬಳ್ಳಿ ಕೋಶದಿಂದ ಕೃತಕವಾಗಿ ಪ್ರಯೋಗಾಲಯದಲ್ಲಿ ಈ ವಿಜ್ಞಾನಿಗಳು ಮಿನಿ ಶ್ವಾಸಕೋಶ ಸೃಷ್ಟಿಸಿದ್ದಾರೆ. ನಂತರ ಅದಕ್ಕೆ ಸಾರ್ಸ್-ಕೋವ್-2 ವೈರಸ್‌ನಿಂದ ಸೋಂಕು ತಗಲಿಸಿದ್ದಾರೆ. ಇದರ 3ಡಿ ಮಾಡೆಲ್ ರೂಪಿಸುವ ಮೂಲಕ ಕಂಪ್ಯೂಟರ್‌ನಲ್ಲಿ ನಂತರದ ಬೆಳವಣಿಗೆಗಳನ್ನು ವೀಕ್ಷಣೆ ಮಾಡಿದ್ದಾರೆ. ಡ್ಯೂಕ್ ವಿವಿ ನಡೆಸಿದ ಪ್ರಯೋಗದ ನೇತೃತ್ವವನ್ನು ಭಾರತೀಯ ಮೂಲದ ಖ್ಯಾತ ಜೀವಶಾಸ್ತ್ರಜ್ಞ ಪುರುಷೋತ್ತಮ ರಾವ್ ಟಾಟಾ ವಹಿಸಿದ್ದರು.
ಮೊದಲು ಬರುತ್ತೆ ನ್ಯುಮೋನಿಯಾ
ಕೊರೋನಾ ವೈರಸ್ ಮೊದಲಿಗೆ ಶ್ವಾಸಕೋಶದ ತುದಿಗಿರುವ ಸಣ್ಣ ಸಣ್ಣ ಗಾಳಿಚೀಲಗಳ ಮೇಲೆ ದಾಳಿ ನಡೆಸುತ್ತದೆ. ಈ ಗಾಳಿಚೀಲಗಳೇ ನಮ್ಮ ದೇಹಕ್ಕೆ ಆಮ್ಲಜನಕವನ್ನು ಒಳಗೆಳೆದುಕೊಂಡು ಇಂಗಾಲದ ಡೈಆಕ್ಸೈಡನ್ನು ಹೊರಗೆ ಬಿಡುವ ಪ್ರಮುಖ ಅಂಗಗಳು. ಇವುಗಳ ಮೇಲೆ ಕೊರೋನಾ ವೈರಸ್ ದಾಳಿ ನಡೆಸುವುದರಿಂದ ನ್ಯುಮೋನಿಯಾ ಉಂಟಾಗುತ್ತದೆ. ನಂತರ ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾಗಿ ಶ್ವಾಸಕೋಶ ಸಂಪೂರ್ಣ ನಿಷ್ಕಿ್ರಯವಾಗಿ ಸಾವು ಸಂಭವಿಸುತ್ತದೆ ಎಂಬುದು ಪ್ರಯೋಗದಲ್ಲಿ ಕಂಡುಬಂದಿದೆ.
60 ತಾಸಿನಲ್ಲಿ ಶ್ವಾಸಕೋಶ ನಿಷ್ಕಿ್ರಯ!
ಶ್ವಾಸಕೋಶಕ್ಕೆ ತಗಲುವ ಕೊರೋನಾ ವೈರಸ್‌ಗಳು 6 ತಾಸಿನಲ್ಲಿ ತಮ್ಮ ಚಟುವಟಿಕೆ ಆರಂಭಿಸುತ್ತವೆ. 48 ಗಂಟೆಯ ನಂತರ ಶ್ವಾಸಕೋಶದಲ್ಲಿರುವ ಜೀವಕೋಶಗಳು ಕೊರೋನಾ ವೈರಸ್ ವಿರುದ್ಧ ಹೋರಾಡತೊಡಗುತ್ತವೆ. ಆದರೆ, 60 ಗಂಟೆಯ ವೇಳೆಗೆ ಶ್ವಾಸಕೋಶದ ಜೀವಕೋಶಗಳು ಸೋತು ಸಾಯಲು ಆರಂಭಿಸುತ್ತವೆ. ಆಗ ಶ್ವಾಸಕೋಶಕ್ಕೆ ಹಾನಿಯಾಗತೊಡಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ