ಭಾರತ ಅವಮಾನಿಸಲು ಪಾಕಿಸ್ತಾನ 18 ಕುತಂತ್ರ!

By Suvarna News  |  First Published Jul 29, 2020, 9:06 AM IST

ಭಾರತ ಅವಮಾನಿಸಲು ಪಾಕಿಸ್ತಾನ 18 ಕುತಂತ್ರ!| ಜಮ್ಮು- ಕಾಶ್ಮೀರ ವಿಶೇಷ ಸ್ಥಾನಮಾನ ರದ್ದಾಗಿ ಆ.5ಕ್ಕೆ 1 ವರ್ಷ| ಪಾಕ್‌ನಲ್ಲಿ ಕರಾಳ ದಿನಾಚರಣೆ, ಪ್ರತ್ಯೇಕತಾವಾದಿಗಳಿಗೆ ಸನ್ಮಾನ|ಭಾರತಕ್ಕೆ ಕಿರಿಕಿರಿ ಮಾಡಲು ಇಮ್ರಾನ್‌ ಸರ್ಕಾರದಿಂದ ಐಎಸ್‌ಐಗೆ ‘ಗುತ್ತಿಗೆ’


ನವದೆಹಲಿ(ಜು.29): ಸಂವಿಧಾನದ 370ನೇ ವಿಧಿ ರದ್ದುಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದು, ಆ ರಾಜ್ಯವನ್ನು ‘ಜಮ್ಮು ಮತ್ತು ಕಾಶ್ಮೀರ’ ಹಾಗೂ ‘ಲಡಾಖ್‌’ ಎಂಬ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಭಾರತ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಆ.5ಕ್ಕೆ ಒಂದು ವರ್ಷ ತುಂಬಲಿದೆ. ಪಾಕಿಸ್ತಾನ ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದು, ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಅವಮಾನ’ ಮಾಡಲು 18 ಅಂಶಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.

ಆ.5ರಂದು ಭಾರತಕ್ಕೆ ಮುಜುಗರ ಉಂಟು ಮಾಡಲು ನಾನಾ ಕಾರ್ಯಕ್ರಮಗಳನ್ನು ರೂಪಿಸುವಂತೆ ಪಾಕಿಸ್ತಾನದ ಗುಪ್ತಚರ ದಳ ಐಎಸ್‌ಐಗೆ ಪ್ರಧಾನಿ ಇಮ್ರಾನ್‌ ಖಾನ್‌ ಸೂಚನೆ ನೀಡಿದ್ದಾರೆ. ಅದರಂತೆ ಅಂದು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಸನ್ಮಾನ ಮಾಡುವುದು, ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಹಣ ನೀಡಿ ಭಾರತದ ವಿರುದ್ಧ ಲೇಖನಗಳನ್ನು ಬರೆಸುವುದು, ಪಿಒಕೆಯ ಮುಜಾಫರಾಬಾದ್‌ನಲ್ಲಿ ಇಮ್ರಾನ್‌ ಖಾನ್‌ ರಾರ‍ಯಲಿ ನಡೆಸುವುದು ಮುಂತಾದ ಕಾರ್ಯಕ್ರಮಗಳನ್ನು ಐಎಸ್‌ಐನ ಸಾರ್ವಜನಿಕ ಸಂಪರ್ಕ ವಿಭಾಗ ಹಮ್ಮಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

ಒಟ್ಟಿನಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡುವುದಕ್ಕೆ ಏನು ಬೇಕೋ ಅದೆಲ್ಲವನ್ನೂ ಮಾಡಲು ಇಮ್ರಾನ್‌ ಖಾನ್‌ ಸೂಚನೆ ನೀಡಿದ್ದಾರೆ. ತನ್ಮೂಲಕ ಭಾರತೀಯರಿಗೆ ಅವಮಾನ ಮಾಡುವುದು ಮತ್ತು ಜಮ್ಮು- ಕಾಶ್ಮೀರದ ಜನರನ್ನು ಪ್ರಚೋದಿಸುವುದು ಅವರ ಯೋಜನೆಯಾಗಿದೆ ಎಂದು ತಿಳಿದುಬಂದಿದೆ.

ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಆ.4ರಂದು ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ಸಮೂಹ ಹಾಗೂ ಅಂತಾರಾಷ್ಟ್ರೀಯ ಪತ್ರಕರ್ತರನ್ನು ಕರೆತಂದು ಪಾಕಿಸ್ತಾನದ ಬದಿಯಲ್ಲಿ ಜನರಿಗೆ ಮುಕ್ತ ಸಂಚಾರದ ಅವಕಾಶವಿದೆ ಎಂದು ತೋರಿಸಲು ಐಎಸ್‌ಐ ನಿರ್ಧರಿಸಿದೆ. ಈ ವೇಳೆ ಭಯೋತ್ಪಾದಕರ ಕ್ಯಾಂಪ್‌ಗಳಿರುವ ಪ್ರದೇಶದಿಂದ ಅವರನ್ನು ದೂರವಿಡಲಾಗುತ್ತದೆ. ನಂತರ ಆ.5ರಂದು ಅಲ್ಲಿ ಕರಾಳ ದಿನ ಆಚರಿಸಿ, ಕಾಶ್ಮೀರದ ಜನರ ಸ್ವಾತಂತ್ರ್ಯಕ್ಕಾಗಿ ಕೊನೆಯವರೆಗೂ ಪಾಕಿಸ್ತಾನ ಸಾಥ್‌ ನೀಡಲಿದೆ ಎಂಬ ಸಂದೇಶವನ್ನು ರವಾನಿಸಲಾಗುತ್ತದೆ. ಅಂದು ಮುಜಾಫರಾಬಾದ್‌ನ ಶಾಸನಸಭೆಯಲ್ಲಿ ಇಮ್ರಾನ್‌ ಖಾನ್‌ ಭಾಷಣ ಕೂಡ ಮಾಡಲಿದ್ದಾರೆ.

ಇದರ ಜೊತೆಗೆ, ನಾನಾ ದೇಶಗಳಲ್ಲಿರುವ ಪಾಕಿಸ್ತಾನದ ದೂತಾವಾಸಗಳಿಗೆ ಆ ದೇಶದಲ್ಲಿ ಭಾರತದ ವಿರುದ್ಧ ರಾರ‍ಯಲಿಗಳನ್ನು ನಡೆಸುವಂತೆ ಐಎಸ್‌ಐ ಮತ್ತು ಪಾಕ್‌ನ ವಿದೇಶಾಂಗ ಸಚಿವಾಲಯ ಸೂಚನೆ ನೀಡಿವೆ. ಇದೇ ವೇಳೆ, ಅಂದು ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುವಂತೆ ಮಲೇಷ್ಯಾ, ಟರ್ಕಿ ಹಾಗೂ ಚೀನಾ ದೇಶಗಳಿಗೆ ಇಮ್ರಾನ್‌ ಮನವಿ ಮಾಡಿದ್ದಾರೆ. ಕೊನೆಯ ಪಕ್ಷ ಸಂವಿಧಾನದ 370ನೇ ವಿಧಿ ರದ್ದತಿ ವಿರುದ್ಧ ಟ್ವೀಟ್‌ ಆದರೂ ಮಾಡುವಂತೆ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.

click me!