ಅಮೆರಿಕ ಸರ್ಕಾರದ ಬಿಗಿ ಕಾನೂನಿಗೆ ಆಂಥ್ರೋಪಿಕ್ ಶಾಕ್: ಕ್ಲೋಡ್ ಫೇಬಲ್ 5, ಮಿಥೋಸ್ ಎಐ ಮಾದರಿಗಳು ಸಂಪೂರ್ಣ ಸ್ಥಗಿತ!

Published : Jun 13, 2026, 03:09 PM IST
Anthropic vs Trump

ಸಾರಾಂಶ

ಪ್ರಮುಖ ಎಐ ಸಂಸ್ಥೆ 'ಆಂಥ್ರೋಪಿಕ್', ಅಮೆರಿಕ ಸರ್ಕಾರದ ರಫ್ತು ನಿಯಂತ್ರಣ ನಿರ್ದೇಶನದ ಹಿನ್ನೆಲೆಯಲ್ಲಿ ತನ್ನ ಸುಧಾರಿತ 'ಕ್ಲೋಡ್ ಫೇಬಲ್ 5' ಮತ್ತು 'ಮಿಥೋಸ್ 5' ಮಾದರಿಗಳನ್ನು ಜಾಗತಿಕವಾಗಿ ಸ್ಥಗಿತಗೊಳಿಸಿದೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಲಾಗಿದೆ.

ವಾಷಿಂಗ್ಟನ್ (ಜೂ.13): ಜಾಗತಿಕ ಕೃತಕ ಬುದ್ಧಿಮತ್ತೆ (AI) ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಬೆಳವಣಿಗೆಯೊಂದರಲ್ಲಿ, ಪ್ರಮುಖ ಎಐ ಸಂಸ್ಥೆ 'ಆಂಥ್ರೋಪಿಕ್' ತನ್ನ ಅತ್ಯಂತ ಸುಧಾರಿತ ಮಾದರಿಗಳಾದ 'ಕ್ಲೋಡ್ ಫೇಬಲ್ 5' (Claude Fable 5) ಮತ್ತು 'ಮಿಥೋಸ್ 5' (Mythos 5) ಸೇವೆಯನ್ನು ವಿಶ್ವದಾದ್ಯಂತ ಎಲ್ಲಾ ಯೂಸರ್‌ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿ ಅಮೆರಿಕ ಸರ್ಕಾರ ಹೊರಡಿಸಿರುವ ರಫ್ತು ನಿಯಂತ್ರಣ ನಿರ್ದೇಶನದ ಬೆನ್ನಲ್ಲೇ ಕಂಪನಿಯು ಈ ಹಠಾತ್ ನಿರ್ಧಾರ ಕೈಗೊಂಡಿದೆ.

ರಾಷ್ಟ್ರೀಯ ಭದ್ರತೆಯ ಕಾರಣ ನೀಡಿದ ಯುಎಸ್ ಸರ್ಕಾರ

ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಅಮೆರಿಕ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ಆದರೆ, ಈ ನಿರ್ದೇಶನದಲ್ಲಿ ಭದ್ರತಾ ಆತಂಕಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಿಲ್ಲ ಎಂದು ಆಂಥ್ರೋಪಿಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಕಾರದ ಆದೇಶದ ಪ್ರಕಾರ, ವಿದೇಶಿ ಪ್ರಜೆಗಳಿಗೆ ಈ ಸುಧಾರಿತ ಮಾದರಿಗಳ ಪ್ರವೇಶವನ್ನು ನಿರ್ಬಂಧಿಸಬೇಕಾಗಿತ್ತು. ಆದರೆ, ತಾಂತ್ರಿಕ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಜಾಗತಿಕವಾಗಿ ಎಲ್ಲಾ ಯೂಸರ್‌ಗಳಿಗೆ ಇದರ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ (Abruptly Disable) ಕಠಿಣ ನಿರ್ಧಾರಕ್ಕೆ ಬಂದಿದೆ.

'ಜೈಲ್‌ಬ್ರೇಕ್' ತಂತ್ರಜ್ಞಾನದ ಆತಂಕ

ಸರ್ಕಾರದ ಈ ಕ್ರಮದ ಹಿಂದೆ 'ಜೈಲ್‌ಬ್ರೇಕ್' (Jailbreak) ಭೀತಿ ಇರಬಹುದು ಎಂದು ಆಂಥ್ರೋಪಿಕ್ ಅಂದಾಜಿಸಿದೆ. 'ಕ್ಲೋಡ್ ಫೇಬಲ್ 5' ಮಾದರಿಯಲ್ಲಿರುವ ಸುರಕ್ಷತಾ ವ್ಯವಸ್ಥೆಯನ್ನು ಬೈಪಾಸ್ ಮಾಡುವ (ದಾಟುವ) ಮೂಲಕ, ಸಾಫ್ಟ್‌ವೇರ್‌ಗಳಲ್ಲಿನ ಭದ್ರತಾ ದೋಷಗಳನ್ನು (Vulnerabilities) ಪತ್ತೆಹಚ್ಚಲು ವಿದೇಶಿ ಶಕ್ತಿಗಳು ಇದನ್ನು ಬಳಸಿಕೊಳ್ಳಬಹುದು ಎಂದು ಯುಎಸ್ ಸರ್ಕಾರ ನಂಬಿದೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿ, "ಸರ್ಕಾರವು ನಮಗೆ ಕೇವಲ ಮೌಖಿಕ ಪುರಾವೆಗಳನ್ನು (Verbal evidence) ಮಾತ್ರ ನೀಡಿದೆ. ನೂರಾರು ಮಿಲಿಯನ್ ಜನರು ಬಳಸುವ ವಾಣಿಜ್ಯ ಮಾದರಿಯನ್ನು ಕೇವಲ ಒಂದು ಸಣ್ಣ ಜೈಲ್‌ಬ್ರೇಕ್ ಭೀತಿಗಾಗಿ ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬುದನ್ನು ನಾವು ಒಪ್ಪುವುದಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಟ್ರಂಪ್ ಸರ್ಕಾರ ಮತ್ತು ಆಂಥ್ರೋಪಿಕ್ ನಡುವಿನ ಹಳಸಿದ ಸಂಬಂಧ

ಐಪಿಓ (IPO) ಹೊರಡಿಸಲು ಸಜ್ಜಾಗುತ್ತಿರುವ ಆಂಥ್ರೋಪಿಕ್ ಮತ್ತು ಟ್ರಂಪ್ ಆಡಳಿತದ ಅಧಿಕಾರಿಗಳ ನಡುವಿನ ಹಳೆಯ ವಿವಾದಗಳು ತಣ್ಣಗಾಗುತ್ತಿರುವ ಬೆನ್ನಲ್ಲೇ ಈ ಹೊಸ ಬಿಕ್ಕಟ್ಟು ಎದುರಾಗಿದೆ. ಈ ವರ್ಷದ ಆರಂಭದಲ್ಲಿ ಅಮೆರಿಕ ಮಿಲಿಟರಿಯು ದೇಶೀಯ ಕಣ್ಗಾವಲು (Domestic surveillance) ಮತ್ತು ಸಂಪೂರ್ಣ ಸ್ವಯಂಚಾಲಿತ ಶಸ್ತ್ರಾಸ್ತ್ರ ವ್ಯವಸ್ಥೆಗಳಿಗಾಗಿ (Autonomous weapons) ತನ್ನ ಎಐ ಮಾದರಿಗಳನ್ನು ಬಳಸಿಕೊಳ್ಳಲು ಆಂಥ್ರೋಪಿಕ್ ನಿರಾಕರಿಸಿತ್ತು. ಇದರಿಂದಾಗಿ ಸರ್ಕಾರ ಮತ್ತು ಕಂಪನಿಯ ನಡುವಿನ ಸಂಬಂಧ ಹಳಸಿತ್ತು. ಇದಕ್ಕೆ ಪ್ರತಿಯಾಗಿ ಯುಎಸ್ ಸರ್ಕಾರವು ಆಂಥ್ರೋಪಿಕ್ ಕಂಪನಿಯನ್ನು ಈ ವರ್ಷದ ಕೊನೆಯಲ್ಲಿ ಜಾರಿಗೆ ಬರುವಂತೆ 'ಸಪ್ಲೈ ಚೈನ್ ಬ್ಲ್ಯಾಕ್‌ಲಿಸ್ಟ್'ಗೆ (ಪೂರೈಕೆ ಸರಪಳಿ ಕಪ್ಪುಪಟ್ಟಿ) ಸೇರಿಸಿತ್ತು.

ವಿದೇಶಿ ವೈರಿಗಳ ಎಐ ತಂತ್ರಜ್ಞಾನಕ್ಕೆ ಬ್ರೇಕ್ ಹಾಕುವ ತಂತ್ರ

ಅಮೆರಿಕದ ಈ ಕ್ರಮವು ವಿದೇಶಿ ವಿರೋಧಿ ದೇಶಗಳ ಎಐ ಸಾಮರ್ಥ್ಯವನ್ನು ತಡೆಯುವ ಪ್ರಯತ್ನದ ಪ್ರಮುಖ ಹೆಜ್ಜೆಯಾಗಿದೆ. ಕಳೆದ ಹಲವು ವರ್ಷಗಳಿಂದ ಯುಎಸ್ ರಫ್ತು ನಿಯಂತ್ರಣಗಳು ಕೇವಲ ಎಐ ತಂತ್ರಜ್ಞಾನಕ್ಕೆ ಬಳಸುವ ಚಿಪ್ಸ್ ಮತ್ತು ಹಾರ್ಡ್‌ವೇರ್ ಉಪಕರಣಗಳ ಮೇಲೆ ಮಾತ್ರ ಗಮನ ಹರಿಸಿದ್ದವು. ಆದರೆ ಈಗ ನೇರವಾಗಿ ಎಐ ಮಾಡೆಲ್ ಬಳಕೆಯ ಮೇಲೆಯೇ ನಿರ್ಬಂಧ ಹೇರಿರುವುದು ಭಾರಿ ಬೆಳವಣಿಗೆಯಾಗಿದೆ.

ಕಳೆದ ಬುಧವಾರವಷ್ಟೇ ಆಂಥ್ರೋಪಿಕ್ ಕಂಪನಿಯು ಎಐ ಮಾದರಿಗಳ ಮೇಲೆ ಯುಎಸ್ ಸರ್ಕಾರದ ಕಠಿಣ ಉಸ್ತುವಾರಿ ಇರಬೇಕು ಮತ್ತು ಅಪಾಯಕಾರಿ ಮಾಡೆಲ್‌ಗಳನ್ನು ನಿರ್ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇರಬೇಕು ಎಂದು ಪ್ರತಿಪಾದಿಸಿತ್ತು. ಆದರೆ ಶುಕ್ರವಾರ ಸರ್ಕಾರ ಕೈಗೊಂಡಿರುವ ಕ್ರಮವು ನ್ಯಾಯಸಮ್ಮತ ಮತ್ತು ಸತ್ಯ ಆಧಾರಿತ ನಿಯಂತ್ರಣದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕಂಪನಿ ಹೇಳಿದೆ.

'ಅಮೆರಿಕಾ ಫಸ್ಟ್' ಎಂದ ಪೆಂಟಗನ್ ಅಧಿಕಾರಿ

ಈ ಬಿಕ್ಕಟ್ಟಿನ ನಡುವೆ ಯುಎಸ್ ರಕ್ಷಣಾ ಇಲಾಖೆಯ (Pentagon) ಮುಖ್ಯ ಮಾಹಿತಿ ಅಧಿಕಾರಿ ಕಿರ್ಸ್ಟನ್ ಡೇವಿಸ್ ಅವರು ಎಕ್ಸ್ (X) ಸೋಶಿಯಲ್ ಮೀಡಿಯಾದಲ್ಲಿ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದಾರೆ. "ಕಂಪನಿಗಳ ಆದಾಯ, ಕ್ಲಿಕ್‌ಬೈಟ್‌ಗಳು ಮತ್ತು ಪ್ರಿ-ಐಪಿಓ ಮೌಲ್ಯಮಾಪನಗಳಿಗಿಂತ ರಾಷ್ಟ್ರೀಯ ಭದ್ರತೆ ನಮಗೆ ಅತ್ಯಂತ ಪ್ರಮುಖವಾಗಿದೆ. ಅಮೆರಿಕಾ ಫಸ್ಟ್. ಯಾವಾಗಲೂ," ಎಂದು ಅವರು ಬರೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಆಂಥ್ರೋಪಿಕ್ ಕಂಪನಿಯು ಯುಎಸ್‌ನಲ್ಲಿ ಐಪಿಓಗಾಗಿ ರಹಸ್ಯವಾಗಿ ಅರ್ಜಿ ಸಲ್ಲಿಸಿತ್ತು. ಈ ಮೂಲಕ ಸಾರ್ವಜನಿಕ ಷೇರು ಮಾರುಕಟ್ಟೆ ಪ್ರವೇಶಿಸುವ ರೇಸ್‌ನಲ್ಲಿ ತನ್ನ ಪ್ರತಿಸ್ಪರ್ಧಿ ಓಪನ್ಎಐ (OpenAI) ಗಿಂತ ಒಂದು ಹೆಜ್ಜೆ ಮುಂದೆ ಇಟ್ಟಿತ್ತು.

ಸೈಬರ್ ದಾಳಿಯ ಭೀತಿ ಹುಟ್ಟಿಸಿದ್ದ 'ಮಿಥೋಸ್ ಕ್ಲಾಸ್'

ಇದೇ ವಾರವಷ್ಟೇ ಆಂಥ್ರೋಪಿಕ್ ಕಂಪನಿಯು 'ಕ್ಲೋಡ್ ಫೇಬಲ್ 5' ಎಂಬ ಅತ್ಯಂತ ಸುಧಾರಿತ ಸಾಮರ್ಥ್ಯದ 'ಮಿಥೋಸ್-ಕ್ಲಾಸ್' (Mythos-class) ಎಐ ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದು ಸೈಬರ್ ಭದ್ರತೆಯಂತಹ ಸೂಕ್ಷ್ಮ ವಲಯಗಳಲ್ಲಿ ದುರ್ಬಳಕೆಯಾಗದಂತೆ ಕಠಿಣ ಸುರಕ್ಷತಾ ನಿಯಮಗಳನ್ನು ಹೊಂದಿತ್ತು. ಆದರೆ ತಜ್ಞರ ಪ್ರಕಾರ, ಈ ಮಿಥೋಸ್ ಮಾದರಿಗಳು ತಪ್ಪು ಕೈ ಸೇರಿದರೆ, ಬ್ಯಾಂಕಿಂಗ್‌ನಂತಹ ಹಳೆಯ ತಂತ್ರಜ್ಞಾನ ಆಧಾರಿತ ಹಣಕಾಸು ವಲಯಗಳ ಮೇಲೆ ಅತ್ಯಂತ ಅತ್ಯಾಧುನಿಕ ಸೈಬರ್ ದಾಳಿಗಳನ್ನು (Sophisticated Cyberattacks) ನಡೆಸಲು ಕಾರಣವಾಗಬಹುದು ಎನ್ನಲಾಗಿದೆ.

"ಈ ಆದೇಶದ ನಿವ್ವಳ ಪರಿಣಾಮವಾಗಿ ನಾವು ಫೇಬಲ್ 5 ಮತ್ತು ಮಿಥೋಸ್ 5 ಅನ್ನು ಎಲ್ಲಾ ಗ್ರಾಹಕರಿಗೆ ತಕ್ಷಣವೇ ನಿಲ್ಲಿಸಬೇಕಾಗಿದೆ. ಆದರೆ ಆಂಥ್ರೋಪಿಕ್‌ನ ಇತರ ಎಐ ಮಾದರಿಗಳ ಸೇವೆಗೆ ಯಾವುದೇ ತೊಂದರೆಯಾಗುವುದಿಲ್ಲ," ಎಂದು ಕಂಪನಿ ಸ್ಪಷ್ಟಪಡಿಸಿದೆ. ಇದೊಂದು ತಪ್ಪು ತಿಳುವಳಿಕೆಯಾಗಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿ ಸೇವೆ ಪುನರಾರಂಭಿಸುವುದಾಗಿ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಎಲ್ಲಾ ವಲಯಗಳಿಗೂ ವಿಸ್ತರಿಸಿದ ನಿಷೇಧ; ಪೌರತ್ವ ಸಾಬೀತುಪಡಿಸುವುದು ಕಡ್ಡಾಯ?

ಅಮೆಜಾನ್‌ನ ಕ್ಲೌಡ್ ವಿಭಾಗವಾದ ಎಡಬ್ಲ್ಯೂಎಸ್ (AWS) ಕೂಡ ಶುಕ್ರವಾರ ತಡರಾತ್ರಿ ಪ್ರತಿಕ್ರಿಯಿಸಿದ್ದು, ಎಲ್ಲಾ ಪ್ರದೇಶಗಳ ಎಲ್ಲಾ ಯೂಸರ್‌ಗೆ ಈ ಮಾಡೆಲ್‌ಗಳ ಪ್ರವೇಶವನ್ನು ರದ್ದುಗೊಳಿಸುವಂತೆ ಆಂಥ್ರೋಪಿಕ್ ತಮಗೆ ತಿಳಿಸಿದೆ ಎಂದು ಹೇಳಿದೆ.

2025ರ ಬೇಸಿಗೆಯಲ್ಲಿ ಬಿಡುಗಡೆಯಾಗಿದ್ದ ಎಐ ಆಕ್ಷನ್ ಪ್ಲಾನ್‌ನಲ್ಲಿ ಕೆಲಸ ಮಾಡಿದ್ದ ಶ್ವೇತಭವನದ ಮಾಜಿ ಅಧಿಕಾರಿ ಡೀನ್ ಬಾಲ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. "ಇದರರ್ಥ ಅಮೆರಿಕದಲ್ಲಿ ವಾಸಿಸುತ್ತಿರುವ ವಿದೇಶಿಗರು ಸೇರಿದಂತೆ ಯಾವುದೇ 'ನಾನ್-ಅಮೆರಿಕನ್' (ಅಮೆರಿಕನ್ ಪ್ರಜೆಯಲ್ಲದವರು) ಈ ಮಾಡೆಲ್ ಬಳಸುವಂತಿಲ್ಲ. ಇನ್ಮುಂದೆ ಆಂಥ್ರೋಪಿಕ್ ಮಾಡೆಲ್‌ಗಳನ್ನು ಬಳಸಲು ನೀವು ನಿಮ್ಮ ಅಮೆರಿಕನ್ ಪೌರತ್ವವನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ಬರಬಹುದು," ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಪರ್ಯಾಸವೆಂದರೆ, ಆಂಥ್ರೋಪಿಕ್ ಕಂಪನಿಯ ಪ್ರಮುಖ ಸಂಶೋಧಕರು ಮತ್ತು ಸಹ-ಸಂಸ್ಥಾಪಕ ಕ್ರಿಸ್ ಓಲಾ, ಎಐ ಸಂಶೋಧಕ ಆಂಡ್ರೇಜ್ ಕಾರ್ಪತಿ ಮತ್ತು ತತ್ವಜ್ಞಾನಿ ಅಮಾಂಡಾ ಆಸ್ಕೆಲ್ ಸೇರಿದಂತೆ ಹಲವು ಪ್ರಮುಖ ತಜ್ಞರು ಅಮೆರಿಕದ ಹೊರಗೆ ಜನಿಸಿದವರಾಗಿದ್ದಾರೆ. ಇವರ ಪೌರತ್ವದ ಸ್ಥಿತಿಗತಿಯ ಬಗ್ಗೆ ಪ್ರತಿಕ್ರಿಯಿಸಲು ಕಂಪನಿಯ ವಕ್ತಾರರು ನಿರಾಕರಿಸಿದ್ದಾರೆ. ಈ ಸಿಬ್ಬಂದಿಗಳು ಕೂಡ ತಮ್ಮದೇ ಕಂಪನಿಯ ಎಐ ಮಾದರಿಗಳ ಬಳಕೆಯ ಹಕ್ಕನ್ನು ಕಳೆದುಕೊಳ್ಳುತ್ತಾರೆಯೇ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇದೊಂದು ಮಾರಕ ಕ್ರಮ, ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ: ಅಮೆರಿಕಕ್ಕೆ ಜೈಶಂಕರ್ ಎಚ್ಚರಿಕೆ
ಕಳಚಿತು ರಾಜಮನೆತನದ ಕೊಂಡಿ: ಮೂರು ವರ್ಷಗಳಿಂದ ಕೋಮಾದಲ್ಲಿದ್ದ ರಾಜಕುಮಾರಿ ಇನ್ನಿಲ್ಲ