Prevent Nuclear Weapons: ಅಣ್ವಸ್ತ್ರ ದಾಳಿ, ಶಸ್ತ್ರಾಸ್ತ್ರ ಪೈಪೋಟಿಗೆ ಹೋಗಲ್ಲ: ಐದು ದೇಶಗಳ ಶಪಥ!

By Kannadaprabha News  |  First Published Jan 4, 2022, 6:38 AM IST

* ಅಮೆರಿಕ, ಚೀನಾ, ಫ್ರಾನ್ಸ್‌, ರಷ್ಯಾ ಬ್ರಿಟನ್‌ನಿಂದ ಜಂಟಿ ಹೇಳಿಕೆ

* ಅಣ್ವಸ್ತ್ರಗಳ ಯುದ್ಧ ತಪ್ಪಿಸಿ, ಅದರ ಅಪಾಯ ನಿಯಂತ್ರಿಸಬೇಕು

* ರಕ್ಷಣಾತ್ಮಕ ಉದ್ದೇಶಗಳಿಗೆ ಮಾತ್ರವೇ ಅಣ್ವಸ್ತ್ರಗಳ ಬಳಸಲು ನಿರ್ಧಾರ


ವಾಷಿಂಗ್ಟನ್‌/ಬೀಜಿಂಗ್‌(ಜ.04): ಒಂದು ಕಾಲದಲ್ಲಿ ತಾವು ಅಣ್ವಸ್ತ್ರ ಶಸ್ತ್ರಾಸ್ತ್ರಗಳನ್ನು ಹೊಂದಿದ ದೇಶಗಳು ಎಂದು ಬೀಗುತ್ತಿದ್ದ ವಿಶ್ವದ ಪಂಚ ರಾಷ್ಟ್ರಗಳು ಇದೀಗ, ಮುಂದಿನ ದಿನಗಳಲ್ಲಿ ವಿಶ್ವದಲ್ಲಿ ಅಣ್ವಸ್ತ್ರ ದಾಳಿಗಳನ್ನು ನಿಯಂತ್ರಿಸುತ್ತೇವೆ. ಜತೆಗೆ ಪರಸ್ಪರ ಮತ್ತು ಇತರೆ ದೇಶಗಳ ಮಧ್ಯೆ ಶಸ್ತ್ರಾಸ್ತ್ರಗಳ ಪೈಪೋಟಿಗೆ ಇಳಿಯುವುದಿಲ್ಲ ಎಂದು ಇದೇ ಮೊಟ್ಟಮೊದಲ ಬಾರಿಗೆ ಅಣ್ವಸ್ತ್ರ ದೇಶಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಈ ಬಗ್ಗೆ ಸೋಮವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಐದು ದೇಶಗಳಾದ ಅಮೆರಿಕ, ಚೀನಾ, ಫ್ರಾನ್ಸ್‌, ರಷ್ಯಾ ಮತ್ತು ಬ್ರಿಟನ್‌, ಅಣ್ವಸ್ತ್ರ ಶಸ್ತ್ರಾಸ್ತ್ರಗಳ ನಡುವಿನ ಯುದ್ಧ ತಪ್ಪಿಸುವುದು ಮತ್ತು ಕಾರ್ಯತಂತ್ರದ ಅಪಾಯಗಳನ್ನು ನಿಯಂತ್ರಿಸುವುದು ತಮ್ಮ ಪ್ರಮುಖ ಜವಾಬ್ದಾರಿಗಳು ಎಂದು ಘೋಷಿಸಿವೆ. ಅಲ್ಲದೆ ಪರಮಾಣು ಯುದ್ಧವನ್ನು ಎಂದಿಗೂ ಜಯಿಸಲಾಗದು. ಹಾಗಾಗಿ ಅಂಥ ಯುದ್ಧಕ್ಕೆ ಕೈಹಾಕುವ ದುಸ್ಸಾಹಸಕ್ಕೆ ಯಾರೂ ಮುಂದಾಗಬಾರದು ಎಂಬುದು ತಮ್ಮ ದೃಢ ಅಭಿಪ್ರಾಯವಾಗಿದೆ. ಪರಮಾಣು ಬಳಕೆ ದೂರಗಾಮಿ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗಾಗಿ ಅಣ್ವಸ್ತ್ರ ಶಸ್ತ್ರಾಸ್ತ್ರಗಳು ರಕ್ಷಣಾತ್ಮಕ ಉದ್ದೇಶಗಳನ್ನು ಪೂರೈಸಬೇಕು. ಆಕ್ರಮಣಶೀಲತೆ ಮತ್ತು ಯುದ್ಧ ತಡೆಯಬೇಕು ಎಂಬುದು ತಮ್ಮ ಉದ್ದೇಶ ಎಂದು ಹೇಳಿವೆ.

Tap to resize

Latest Videos

2030ರ ವೇಳೆಗೆ ಚೀನಾ ಬಳಿ 1000 ಪರಮಾಣು ಸಿಡಿತಲೆ!

ನೆರೆ ಹೊರೆಯ ದೇಶಗಳು ಸೇರಿದಂತೆ ಹಲವು ದೇಶಗಳೊಂದಿಗೆ ಆಕ್ರಮಣಕಾರಿ ನೀತಿಗಳ ಮೂಲಕ ಜಾಗತಿಕ ಶಾಂತಿಗೆ ದೊಡ್ಡ ಸವಾಲು ಒಡುತ್ತಿರುವ ಚೀನಾ, 2030ರ ವೇಳೆಗೆ 1000 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದುವ ಗುರಿ ಹಾಕಿಕೊಂಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ವರದಿ ಹೇಳಿದೆ.

ಚೀನಾ ತನ್ನ ಅಣ್ವಸ್ತ್ರ ಸಿಡಿತಲೆಗಳನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದೆ ಮತ್ತು ಅದಕ್ಕಾಗಿ ಅಗತ್ಯ ಮೂಲಸೌಕರ‍್ಯವನ್ನು ನಿರ್ಮಿಸುತ್ತಿದೆ. ಅದಕ್ಕಾಗಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಾ ತನ್ನ ಭೂ, ಜಲ, ವಾಯುಸೀಮೆಯನ್ನು ವಿಸ್ತರಿಸುತ್ತಿದೆ. 2027ರ ವೇಳೆಗೆ 700, 2030ರ ವೇಳೆಗೆ 1000 ಪರಮಾಣು ಸಿಡಿತಲೆಗಳನ್ನು ಹೊಂದುವ ಉದ್ದೇಶ ಹೊಂದಿದೆ ಎಂದು ವರದಿ ಹೇಳಿದೆ. ಸದ್ಯ ಚೀನಾದ ಬಳಿಕ 320 ಪರಮಾಣು ಸಿಡಿತಲೆಗಳಿವೆ ಎಂಬ ಅಂದಾಜಿದೆ.

ತೈವಾನ್‌ ವಿಷಯವಾಗಿ ಅಮೆರಿಕ ಮತ್ತು ಚೀನಾ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವಾಗಲೇ ಈ ವರದಿ ಬಹಿರಂಗವಾಗಿದೆ.

ನಮ್ಮ ಮೇಲೂ ಚೀನಾ ಅಣ್ವಸ್ತ್ರ ದಾಳಿ ನಡೆಸಬಹುದು: ಅಮೆರಿಕ

 

ಕೆಲ ತಿಂಗಳ ಹಿಂದೆ ಇಡೀ ಜಗತ್ತನ್ನು ಸುತ್ತುಹಾಕಬಲ್ಲ ಸಾಮರ್ಥ್ಯದ ಹೈಪರ್‌ಸಾನಿಕ್‌ ಅಣ್ವಸ್ತ್ರ ಕ್ಷಿಪಣಿಯನ್ನು ಪರೀಕ್ಷಿಸಿರುವ ಚೀನಾ, ಮುಂದೊಂದು ದಿನ ನಮ್ಮ ಮೇಲೂ ಅಚ್ಚರಿಯ ಅಣ್ವಸ್ತ್ರ ದಾಳಿ ನಡೆಸಬಹುದು ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ. ಅಮೆರಿಕದ ಸೇನಾಪಡೆಯ ಎರಡನೇ ಪರಮೋಚ್ಚ ಅಧಿಕಾರಿ ಜ| ಜಾನ್‌ ಹೈಟನ್‌ ಅವರೇ ಟೀವಿ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಮಹತ್ವ ಪಡೆದಿದೆ.

‘ಚೀನಾದವರ ಕ್ಷಿಪಣಿ ಇಡೀ ಜಗತ್ತನ್ನು ಸುತ್ತುಹಾಕಿತು. ಅದರಲ್ಲಿದ್ದ ಹೈಪರ್‌ಸಾನಿಕ್‌ ಗ್ಲೈಡ್‌ ವಾಹನ ಮರಳಿ ಚೀನಾಕ್ಕೆ ಹೋಗಿ ಗುರಿ ತಲುಪಿತು. ಮುಂದೊಂದು ದಿನ ಅವರು ಅಮೆರಿಕದ ಮೇಲೂ ಅಚ್ಚರಿಯ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಹೊಂದಬಹುದು’ ಎಂದು ಹೈಟನ್‌ ಹೇಳಿದ್ದಾರೆ.

ಈ ವರ್ಷದ ಜುಲೈ 27ರಂದು ಹೈಪರ್‌ಸಾನಿಕ್‌ ಕ್ಷಿಪಣಿಯನ್ನು ಚೀನಾ ಪರೀಕ್ಷೆ ನಡೆಸಿದ್ದನ್ನು ಅಮೆರಿಕ ಪತ್ತೆಹಚ್ಚಿ ಜಗತ್ತಿಗೆ ತಿಳಿಸಿತ್ತು. ಶಬ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಸಾಗುವ ಈ ಕ್ಷಿಪಣಿ ರಾಡಾರ್‌ಗಳ ಕಣ್ಣಿಗೂ ಬೀಳುವುದಿಲ್ಲ. ಆದರೆ, ತಾನು ಪರೀಕ್ಷೆ ನಡೆಸಿದ್ದು ಕ್ಷಿಪಣಿಯಲ್ಲ, ಅದು ಮರುಬಳಕೆ ಮಾಡಬಹುದಾದ ಅಂತರಿಕ್ಷ ನೌಕೆಯಷ್ಟೆಎಂದು ಚೀನಾ ಹೇಳಿತ್ತು.

click me!