War For Oil: ಬಲಾಢ್ಯ ದೇಶಗಳು ವರ್ಸಸ್‌ ಕೊಲ್ಲಿ ರಾಷ್ಟ್ರಗಳ ತೈಲಸಮರ!

By Kannadaprabha News  |  First Published Nov 25, 2021, 6:30 AM IST

* ತೈಲ ಬೆಲೆ ಇಳಿಸುವ ಅಮೆರಿಕ, ಭಾರತ ಯತ್ನಕ್ಕೆ ಒಪೆಕ್‌ ಗರಂ

* ಬಲಾಢ್ಯ ದೇಶಗಳು ವರ್ಸಸ್‌ ಕೊಲ್ಲಿ ರಾಷ್ಟ್ರಗಳ ತೈಲಸಮರ!


ನವದೆಹಲಿ(ನ.25): ತುರ್ತು ಬಳಕೆಗೆಂದು ಸಂಗ್ರಹಿಸಿದ್ದ ಕಚ್ಚಾತೈಲವನ್ನು (Crude Oil) ಹೊರತೆಗೆದು ಬಳಸುವ ಮೂಲಕ ಕಳೆದ 7 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿರುವ ಕಚ್ಚಾತೈಲ ಬೆಲೆ ನಿಯಂತ್ರಿಸಲು ಅಮೆರಿಕ (US), ಭಾರತ (india) ಮೊದಲಾದ ದೇಶಗಳು ಮಾಡಿದ ತಂತ್ರಗಾರಿಕೆ ಜಾಗತಿಕ ಮಟ್ಟದಲ್ಲಿ ಹೊಸ ತೈಲ ಸಮರದ ಸನ್ನಿವೇಶವೊಂದನ್ನು ಸೃಷ್ಟಿಸಿದೆ. ಅತ್ಯಧಿಕ ತೈಲ ಬಳಸುವ ದೇಶಗಳು ತಮ್ಮ ಈ ನಿರ್ಧಾರದಿಂದ ಹಿಂದಕ್ಕೆ ಸರಿಯದೆ ಹೋದಲ್ಲಿ ಈಗಿರುವ ಕಚ್ಚಾತೈಲ ಉತ್ಪಾದನೆಯನ್ನು ಮತ್ತಷ್ಟು ಕಡಿಮೆ ಮಾಡುವುದಾಗಿ ತೈಲ ಉತ್ಪಾದನೆ ರಾಷ್ಟ್ರಗಳ ಒಕ್ಕೂಟವಾದ ‘ಒಪೆಕ್‌’ (OPEC) ಬೆದರಿಕೆ ಒಡ್ಡಿದೆ.

ಈ ಬೆಳವಣಿಗೆ ಈಗಾಗಲೇ ಗಗನಕ್ಕೇರಿರುವ ಕಚ್ಚಾತೈಲ ಬೆಲೆ ಇನ್ನಷ್ಟು ಏರುವ ಭೀತಿಯನ್ನು ಸೃಷ್ಟಿಸಿದೆ. ಅಲ್ಲದೆ ಅಮೆರಿಕದ ಈ ಆಟಕ್ಕೆ, ಭಾರತ ಸೇರಿದಂತೆ ಇತರೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಬಲಿಪಶು ಆಗಲಿವೆಯೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.

Latest Videos

undefined

ಏನಿದು ವಿವಾದ?:

ಜಾಗತಿಕ ಆರ್ಥಿಕ ಕುಸಿತದ (Global Economic Crisis) ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಹಂತಹಂತವಾಗಿ ಕುಸಿಯುತ್ತಲೇ ಬಂದಿತ್ತು. ಈ ನಡುವೆ 2020ರಲ್ಲಿ ಕೊರೋನಾ ಕಾಣಿಸಿಕೊಂಡ ಬಳಿಕ ಕಚ್ಚಾ ತೈಲದ ಬೇಡಿಕೆ ಪೂರ್ಣ ನೆಲ ಕಚ್ಚಿತ್ತು. ಈ ಹಂತದಲ್ಲಿ ಒಪೆಕ್‌ ರಾಷ್ಟ್ರಗಳು ತಮ್ಮ ಉತ್ಪಾದನೆ ಕಡಿಮೆ ಮಾಡದೆ ಹೋದಲ್ಲಿ ತನ್ನ ದೇಶದ ಕಚ್ಚಾತೈಲ ಉದ್ಯಮ ನೆಲಕಚ್ಚಲಿದೆ ಎಂದು ಗೋಗರೆದಿದ್ದ ಅಮೆರಿಕ, ಒಪೆಕ್‌ ದೇಶಗಳ ದೈನಂದಿನ ಕಚ್ಚಾತೈಲ ಉತ್ಪಾದನೆಯನ್ನು ದಾಖಲೆಯ ಶೇ.10ರಷ್ಟುಅಂದರೆ 1 ಕೋಟಿ ಬ್ಯಾರಲ್‌ನಷ್ಟುಕಡಿತಗೊಳಿಸಿತ್ತು.

ಆದರೆ ಕೊರೋನಾ ಬಿಕ್ಕಟ್ಟಿನಿಂದ ಜಗತ್ತು ಹೊರಬಂದ ಬಳಿಕ ಕಚ್ಚಾ ತೈಲದ ಬೇಡಿಕೆ ಭಾರೀ ಏರಿಕೆ ಕಂಡು, ಇದೀಗ ಕಳೆದ 7 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪರಿಣಾಮ ಅಮೆರಿಕದ ಸೇರಿದಂತೆ ಬಹುತೇಕ ದೇಶಗಳು ಹಣದುಬ್ಬರದ ತೀವ್ರ ಸಮಸ್ಯೆಗೆ ತುತ್ತಾಗಿವೆ.

ಹೀಗಾಗಿ ಕಚ್ಚಾತೈಲ ಉತ್ಪಾದನೆ ಹೆಚ್ಚಿಸಿ ಎಂದು ಅಮೆರಿಕ ಸೇರಿದಂತೆ ಹಲವು ದೇಶಗಳು ಒಪೆಕ್‌ಗೆ ಮನವಿ ಮಾಡಿವೆ. ಆದರೆ ಏಕಾಏಕಿ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಒಪೆಕ್‌ ನಿರಾಕರಿಸಿದೆ. ಹೀಗಾಗಿ ದಿನೇ ದಿನೇ ದರ ಏರುಗತಿಯಲ್ಲಿದೆ.

ಹೊಸ ತಂತ್ರ:

ಒಪೆಕ್‌ ರಾಷ್ಟ್ರಗಳ ಈ ನಿರ್ಧಾರದಿಂದ ಬೇಸತ್ತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಭಾರತ, ಜಪಾನ್‌, ಚೀನಾ, ದಕ್ಷಿಣ ಕೊರಿಯಾ, ಬ್ರಿಟನ್‌ ಸೇರಿದಂತೆ ಅತಿ ಹೆಚ್ಚು ಕಚ್ಚಾತೈಲ ಬಳಸುವ ದೇಶಗಳ ಮನವೊಲಿಸುವ ಮೂಲಕ, ತುರ್ತು ಬಳಕೆಗೆಂದು ಸಂಗ್ರಹಿಸಿರುವ ಕಚ್ಚಾತೈಲವನ್ನು ಸ್ವಲ್ಪ ಪ್ರಮಾಣದಲ್ಲಿ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಅಮೆರಿಕ 5 ಕೋಟಿ ಬ್ಯಾರಲ್‌, ಭಾರತ 50 ಲಕ್ಷ ಬ್ಯಾರಲ್‌ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿದ್ದವು. 1970ರಲ್ಲಿ ಲಿಬಿಯಾ ಯುದ್ಧದ ಬಳಿಕ ಅಮೆರಿಕ ತನ್ನ ಭೂಗತ ಸಂಗ್ರಹಾಗಾರದಿಂದ ಕಚ್ಚಾತೈಲವನ್ನು ಇಷ್ಟುಮಟ್ಟದಲ್ಲಿ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲಾಗಿತ್ತು.

ಒಪೆಕ್‌ ಗರಂ:

ಆದರೆ ದೊಡ್ಡ ದೇಶಗಳ ಈ ನಿರ್ಧಾರಕ್ಕೆ ಇದೀಗ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಒಪೆಕ್‌ ದೇಶಗಳು, ತೈಲ ಬಳಕೆ ದೇಶಗಳು ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ಇಲ್ಲದೇ ಹೋದಲ್ಲಿ ಮುಂದಿನ ಜನವರಿ ತಿಂಗಳಿನಿಂದ ಉದ್ದೇಶಿಸಿದ್ದ ಉತ್ಪಾದನೆ ಹೆಚ್ಚಳವನ್ನು 2 ತಿಂಗಳು ಮುಂದೂಡುವುದಾಗಿ ತಿಳಿಸಿವೆ. ಅಲ್ಲದೆ ಅಗತ್ಯಬಿದ್ದರೆ, ಈಗಾಗಲೇ ಮಾಡುತ್ತಿರುವ ಉತ್ಪಾದನೆಯನ್ನೇ ಕಡಿತ ಮಾಡುವ ಬೆದರಿಕೆಯನ್ನೂ ಹಾಕಿದೆ. ಒಂದು ವೇಳೆ ಹಾಗೇನಾದರೂ ಆದಲ್ಲಿ ಅದು ಕಚ್ಚಾತೈಲ ಬೆಲೆಯನ್ನು ಮತ್ತಷ್ಟುಹೆಚ್ಚಿಸಿ, ಜಾಗತಿಕ ಮಟ್ಟದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಲಿದೆ. ಹೀಗಾಗಿಯೇ ಕೊಲ್ಲಿ ದೇಶಗಳನ್ನು ಹೆಚ್ಚಾಗಿ ಹೊಂದಿರುವ ಒಪೆಕ್‌ ಮತ್ತು ವಿಶ್ವದ ದೊಡ್ಡ ರಾಷ್ಟ್ರಗಳ ನಡುವೆ ಆರಂಭವಾಗಿರುವ ಹೊಸ ಸಂಘರ್ಷ ಭಾರೀ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.

ಏನಿದು ಕಿತ್ತಾಟ?

- ಕಚ್ಚಾತೈಲಕ್ಕೆ ವಿಶ್ವಾದ್ಯಂತ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ

- ಉತ್ಪಾದನೆ ಹೆಚ್ಚಳಕ್ಕೆ ಅಮೆರಿಕ ಸೇರಿ ಹಲವು ದೇಶಗಳಿಂದ ಮನವಿ

- ಏಕಾಏಕಿ ಉತ್ಪಾದನೆ ಹೆಚ್ಚಳಕ್ಕೆ ಒಪೆಕ್‌ ನಕಾರ. ತೈಲ ಇನ್ನೂ ದುಬಾರಿ

- ಭಾರತ, ಜಪಾನ್‌, ಚೀನಾ, ಕೊರಿಯಾ, ಬ್ರಿಟನ್‌ ಬಳಸಿ ಅಮೆರಿಕ ತಂತ್ರ

- ಆಯಾದೇಶದ ಸಂಗ್ರಹಾಗಾರದಿಂದ ತೈಲ ಬಿಡುಗಡೆ ಮಾಡಿಸಲು ನಿರ್ಧಾರ

- ಈ ತೀರ್ಮಾನಕ್ಕೆಕ್ಕೆ ಒಪೆಕ್‌ ಸಿಟ್ಟು. ಉತ್ಪಾದನೆ ಕಡಿತಗೊಳಿಸುವ ಬೆದರಿಕೆ

click me!